More

    ಅಮಾಯಕರ ಹೆಸರಿನಲ್ಲಿ ಸಾಲ ಪಡೆದು ವಂಚನೆ; ಮಹಿಳೆ ಸೇರಿ ಇಬ್ಬರ ಸೆರೆ

    ಬೆಂಗಳೂರು: ನಕಲಿ ದಾಖಲಾತಿ ಸೃಷ್ಟಿಸಿ ಅಮಾಯಕರ ಹೆಸರಿನಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದು ವಂಚಿಸುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
    ಮೈಸೂರು ನಗರದ ಲಕ್ಷ್ಮೀಕಾಂತನಗರ ನಿವಾಸಿ ನಂದಿನಿ (42) ಮತ್ತು ವಿಶ್ವೇಶ್ವರಯ್ಯ ಲೇಔಟ್ ನಿವಾಸಿ ಮಂಜುನಾಥ್ (35) ಬಂಧಿತರು. ಈ ಕೇಸಿನಲ್ಲಿ ಹಣಕಾಸು ಸಂಸ್ಥೆ ಮತ್ತು ಬ್ಯಾಂಕ್ ಅಧಿಕಾರಿಗಳ ಕೈವಾಡದ ಶಂಕೆ ಇದ್ದು, ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೈಸೂರು ಮೂಲದ ನಂದಿನಿಗೆ ಪತಿ ನಿಧನರಾಗಿದ್ದು, ಈಕೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಳು. ಸೈಟ್ ಮಾರಾಟಕ್ಕೆ ಇದೆ ಎಂದು ಅಮಾಯಕರಿಗೆ ತೋರಿಸುತ್ತಿದ್ದರು. ಖರೀದಿಗೆ ಒಪ್ಪಿದರೇ ಸಾಲ ಕೊಡಿಸುವುದಾಗಿ ಖರೀದಿದಾರರ ಬಳಿ ದಾಖಲೆ ಪತ್ರಗಳನ್ನು ಪಡೆಯುತ್ತಿದ್ದರು. ಇದಕ್ಕೂ ಮೊದಲು ಸೈಟ್ ಸಂಬಂಧ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದ ಆರೋಪಿಗಳು, ಖರೀದಿದಾರರ ಹೆಸರಿನಲ್ಲಿ ಸಾಲ ಪಡೆದು ಮೋಸ ಮಾಡುತ್ತಿದ್ದರು.
    ಇದೇ ರೀತಿಯಾಗಿ ಕೆ.ಪಿ. ಅಗ್ರಹಾರದ ಶೈಲಾಶ್ರೀಗೆ ಕೆಲ ವರ್ಷಗಳ ಹಿಂದೆ ಸೈಟ್ ಮಾರಾಟಕ್ಕೆ ಇದೆ.

    ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂದಿನಿ ನಂಬಿಸಿದ್ದಳು. ಜತೆಗೆ ಬ್ಯಾಂಕ್‌ನಲ್ಲಿ ಸಾಲ ಸಹ ಕೊಡಿಸುವುದಾಗಿ ಹೇಳಿ ಆಕೆಯ ಕಡೆಯಿಂದ ಸಾಲಕ್ಕೆ ಬೇಕಾದ ದಾಖಲೆ ಪತ್ರಗಳನ್ನು ಪಡೆದಿದ್ದಳು.
    ಪೂರ್ವ ಸಂಚಿನಂತೆ ಸೈಟ್‌ಗೆ ನಕಲಿ ದಾಖಲೆ ಮತ್ತು ನಕಲಿ ಮಾಲೀಕನನ್ನು ಸೃಷ್ಟಿಸಿಕೊಂಡು ಶೈಲಾಶ್ರೀ ಹೆಸರಿನಲ್ಲಿ ಹಿಂದೂಜಾ ಹೌಸಿಂಗ್ ಫೈನಾನ್ಸ್ಗೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಳು. ಶೈಲಾಶ್ರೀ ಹೆಸರಿನಲ್ಲಿ 45 ಲಕ್ಷ ರೂ. ಹಾಗೂ ಇದೇ ರೀತಿಯಾಗಿ ಪಿರಮಲ್ ಹೌಸಿಂಗ್ ಫೈನಾನ್ಸ್ನಲ್ಲಿ 56 ಲಕ್ಷ ರೂ. ಹಾಗೂ ಈಕ್ವೆಟಾಸ್ ಸ್ಮಾಲ್ ಫೈನಾನ್ಸ್ನಲ್ಲಿ 25 ಲಕ್ಷ ರೂ. ಸಾಲ ಪಡೆದು ಆರೋಪಿಗಳು ದುರ್ಬಳಕ್ಕೆ ಮಾಡಿಕೊಂಡಿದ್ದರು.

    ಇತ್ತ ಶೈಲಾಶ್ರೀಗೆ ಸಾಲದ ಕಂತು ಪಾವತಿಗೆ ನೋಟಿಸ್ ಬಂದಾಗ ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿದೆ. ನೊಂದ ಶೈಲಾಶ್ರೀ, ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಕೆಲವರು ಕೋರ್ಟ್‌ನಲ್ಲಿ ಜಾಮೀನು ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts