ಬೆಂಗಳೂರು: ರೌಡಿಶೀಟರ್‌ವೊಬ್ಬನ ಹತ್ಯೆಗೆ ಬಳಸಲು ದ್ವಿಚಕ್ರವಾಹನ ದರೋಡೆ ಮಾಡಿದ ನಾಲ್ವರು ಕಾಮಾಕ್ಷಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸುಂಕದಕಟ್ಟೆಯ ನಿವಾಸಿ ವಿಕ್ರಮ್ (20), ಮಂಜುನಾಥ್ (21), ಸಾಗರ್ (19), ನವೀನ್ (21) ಬಂಧಿತರು. ತಲೆಮರೆಸಿಕೊಂಡಿರುವ ಶಶಿ ಅಲಿಯಾಸ್ ಲೂಸ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳಿಂದ 2 ದ್ವಿಚಕ್ರವಾಹನ ಮತ್ತು ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಮೇ 31ರಂದು ಸಂಜೆ 6.15ರಲ್ಲಿ ಕಾಮಾಕ್ಷಿಪಾಳ್ಯದ ನೀಲಗಿರಿ ತೋಪಿನ ಬಳಿ ಇರುವ ಪೆಟ್ರೋಲ್ ಬಂಕ್‌ನಲ್ಲಿ ಸ್ಕೂಟರ್‌ಗೆ ಪಟ್ರೋಲ್ ಹಾಕಿಸಿ, ಚಕ್ರಕ್ಕೆ ಗಾಳಿ ಹಾಕಿಸಲು ಹೋಗಿದ್ದರು. ಆ ವೇಳೆ ಇವರ ಬಳಿ ಬಂದ ಆರೋಪಿಗಳು ಮಾರಕಾಸ್ತ್ರ ತೋರಿಸಿ ಬೆದರಿಸಿ ಸ್ಕೂಟರ್‌ನೊಂದಿಗೆ ಪರಾರಿಯಾಗಿದ್ದರು. ಸ್ಕೂಟರ್ ಮಾಲೀಕರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೆಟ್ರೋಲ್ ಬಂಕ್ ಆಸು-ಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ ಆರೋಪಿಗಳ ಗುರುತು ಪತ್ತೆ ಹಚ್ಚಿ ಬಂಧಿಸಿದ್ದಾರೆ. ರೌಡಿಶೀಟರ್ ಲೇಔಟ್ ಅನಿಲ್‌ನನ್ನು ಕೊಲೆ ಮಾಡಲು ಸ್ಕೂಟರ್ ಅಗತ್ಯವಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ರೌಡಿ ಕೊಲೆಗೆ ಸಂಚು: ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿರುವ ಆಂಧ್ರಹಳ್ಳಿ ಅಭಿ ತನ್ನ ವಿರೋಧಿ ಗ್ಯಾಂಗ್‌ನ ಬ್ಯಾಡರಹಳ್ಳಿ ಠಾಣೆಯ ರೌಡಿಶೀಟರ್ ಲೇಔಟ್ ಅನಿಲ್‌ನನ್ನು ಕೊಲೆ ಮಾಡಲು ಜೈಲಿನೊಳಗಿದ್ದೇ ಸಂಚು ರೂಪಿಸಿದ್ದ. ಅದರಂತೆ ತನ್ನ ಸಹಚರ ಶಶಿ ಅಲಿಯಾಸ್ ಲೂಸ್‌ನನ್ನು ಸಂಪರ್ಕಿಸಿ, ‘ಲೇಔಟ್ ಅನಿಲ್ 3 ತಿಂಗಳು ಪೆರೋಲ್ ಮೇಲೆ ಜೈಲಿನಿಂದ ಹೊರ ಬಂದಿದ್ದಾನೆ. ಆತನನ್ನು ಹತ್ಯೆ ಮಾಡಲು ಹುಡುಗರು, ಗಾಡಿ ಸಿದ್ಧತೆ ಮಾಡು’ ಎಂದು ಸೂಚಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಮಾಂಸ ಕಡಿಯುವ ಕತ್ತಿಯಿಂದ ಅಣ್ಣ ಅತ್ತಿಗೆಯನ್ನು ಕೊಚ್ಚಿದ; ಪುಟ್ಟ ಕಂದಮ್ಮನನ್ನೂ ಬಿಡಲಿಲ್ಲ…
ಶಶಿ ತನ್ನ ಸಹಚರರಾದ ಬಂಧಿತ ಆರೋಪಿಗಳಿಗೆ ಹಣದ ಆಮಿಷವೊಡ್ಡಿ ಕೊಲೆ ಮಾಡಲು 2 ಸ್ಕೂಟರ್, ಹಣ ರೆಡಿ ಮಾಡುವಂತೆ ಹೇಳಿದ್ದ. ಈತನ ಸೂಚನೆಯಂತೆ ಬಂಧಿತರು ಮಾದನಾಯಕನಹಳ್ಳಿ ಮತ್ತು ಕಾಮಾಕ್ಷಿಪಾಳ್ಯದಲ್ಲಿ ಒಂದೊಂದು ಸ್ಕೂಟರ್ ದರೋಡೆ ಮಾಡಿದ್ದರು. ಹಣದ ಅಗತ್ಯತೆಯಿದ್ದ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ, ಪೀಣ್ಯ, ರಾಜಗೋಪಾಲನಗರದಲ್ಲಿ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ನಡೆಸಿ ಅಲ್ಲಿದ್ದವರಿಗೆ ಮಾರಕಾಸ್ತ್ರ ತೋರಿಸಿ ಅವರಿಂದ ಒಂದಿಷ್ಟು ಹಣ ಕಸಿದುಕೊಂಡಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.
ಶಿಲ್ಪಾ ನಾಗ್ ರಾಜೀನಾಮೆ ಸ್ವೀಕರಿಸೋಲ್ಲ : ಉಸ್ತುವಾರಿ ಸಚಿವ ಸೋಮಶೇಖರ್
ಗ್ಯಾಂಗ್ರೇಪ್ ಕೇಸ್ : ಯುವತಿ-ಆರೋಪಿಗಳನ್ನು ಭಾರತಕ್ಕೆ ತಂದವ ಬಾಂಗ್ಲಾ ಪೊಲೀಸ್ ವಶಕ್ಕೆ; ಯುವತಿ ಹೇಳಿಕೆ ದಾಖಲು