

ಬೆಂಗಳೂರು: ರಾಜ್ಯದಲ್ಲಿ ಇನ್ನೈದು ವರ್ಷಗಳಲ್ಲಿ ನಾಲ್ಕು ಕಡೆ ಹಜ್ ಭವನ ನಿರ್ಮಾಣ ಮಾಡಲಾಗುವುದು ಎಂದು ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. 2023ನೇ ಸಾಲಿನ ಹಜ್ ಯಾತ್ರಿಕರ ವಿಮಾನಯಾನ ಉದ್ಘಾಟನಾ ಕಾರ್ಯಕ್ರಮ ಇಂದು ಯಲಹಂಕದ ಹಜ್ ಭವನದಲ್ಲಿ ನಡೆಯುತ್ತಿದ್ದು, ಅದರಲ್ಲಿ ಪಾಲ್ಗೊಂಡಿದ್ದ ಜಮೀರ್ ಈ ವಿಷಯ ತಿಳಿಸಿದರು.
ಇಡೀ ಭಾರತದಲ್ಲಿ ಯಲಹಂಕ ಸಮೀಪದ ಹಜ್ ಭವನ ಮಾದರಿಯಾದದ್ದು. ಇಷ್ಟು ಸುವ್ಯವಸ್ಥೆ ಇರುವ ಹಜ್ ಭವನ ಬೇರೆಲ್ಲೂ ಇಲ್ಲ. ಈಗ ಈ ಹಜ್ ಭವನದಲ್ಲಿ ಸ್ವಯಂಸೇವಕರಾಗಿ ನೂರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಹಜ್ ಯಾತ್ರಾರ್ಥಿಗಳ ಪ್ರವಾಸಕ್ಕೆ ಅಗತ್ಯ ಸಹಕರಿಸುತ್ತಿದ್ದಾರೆ. ಈ ಸ್ವಯಂಸೇವಕರನ್ನ ನನ್ನ ವೈಯಕ್ತಿಕ ಹಣದಲ್ಲಿ ಹಜ್ಗೆ ಕಳಿಸಿಕೊಡುವುದಾಗಿ ಜಮೀರ್ ಅಹ್ಮದ್ ಹೇಳಿದರು.
ಇದನ್ನೂ ಓದಿ: ಐಪಿಎಸ್-ಐಎಎಸ್ ಸಂಘರ್ಷ: ಜಾಮೀನು ಪಡೆದ ರೂಪಾ ಮೌದ್ಗಿಲ್
ಹಜ್ ಭವನದ ನಿರ್ಮಾಣದ ಹಿಂದೆ ರೋಷನ್ ಬೇಗ್ ಅವರ ಶ್ರಮ ಬಹಳಷ್ಟಿದೆ. ಸಿದ್ದರಾಮಯ್ಯ ಅವರು ಈ ಹಿಂದೆ ಸಿಎಂ ಆಗಿದ್ದಾಗ 100 ಕೋಟಿ ರೂ. ಅನುದಾನ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡ ಜಮೀರ್, ಇನ್ನು ಐದು ವರ್ಷಗಳಲ್ಲಿ ರಾಜ್ಯದ 4 ಕಡೆ ಹಜ್ ಭವನ ತಲೆ ಎತ್ತಲಿವೆ ಎಂದರು. ಈ ಬಾರಿ ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ಹಜ್ ಭವನ ನವೀಕರಣಕ್ಕೆ ಸಿಎಂ 5 ಕೋಟಿ ರೂ. ನೀಡಿದ್ದಾರೆ. ಐದು ಸಾವಿರ ಕೋಟಿ ಕೊಡುವುದಾಗಿ ಘೋಷಣೆಯನ್ನೂ ಮಾಡಿದ್ದೀರಿ. ಯಾವುದೇ ಕಾರಣಕ್ಕೂ 5 ಸಾವಿರ ಕೋಟಿಯಲ್ಲಿ ಹಣ ಕಡಿಮೆ ಮಾಡಬಾರದು ಅಂತ ಮುಸ್ಲಿಂ ಧಾರ್ಮಿಕ ಮುಖಂಡರ ಬೇಡಿಕೆ ಇದೆ ಎಂದೂ ಜಮೀರ್ ಹೇಳಿದರು.
2023ನೇ ಸಾಲಿನ ಹಜ್ ಯಾತ್ರಿಕರ ವಿಮಾನಯಾನ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಸಚಿವರಾದ ಜಮೀರ್ ಅಹ್ಮದ್ ಖಾನ್, ಕೆ.ಎಚ್.ಮುನಿಯಪ್ಪ, ಕೃಷ್ಣಬೈರೇಗೌಡ, ಎಂಎಲ್ಸಿ ಸಲೀಂ ಅಹ್ಮದ್, ಹಜ್ ಸಚಿವ ರಹೀಂ ಖಾನ್, ಮಾಜಿ ಸಚಿವ ರೋಷನ್ ಬೇಗ್ ಮುಂತಾದವರಿದ್ದರು.
ಇಂದಿನಿಂದ ಜೂ. 22ರ ವರೆಗೆ ಕರ್ನಾಟಕದಿಂದ ಒಟ್ಟು 7 ಸಾವಿರ ಹಜ್ ಯಾತ್ರಾರ್ಥಿಗಳು ಪ್ರಯಾಣಿಸಲಿದ್ದು, ಯಾತ್ರೆಗೆ ತೆರಳಲಿರುವವರಿಗಾಗಿ 51 ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಾಗಿದೆ.