More

    ಫಲಾನುಭವಿಗಳಿಗೆ ಹಕ್ಕುಪತ್ರ ನೀಡದೆ ಬಂಜಾರ ಸಮುದಾಯಕ್ಕೆ ವಂಚನೆ: ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ ಆಕ್ರೋಶ

    ಮಂಡ್ಯ: ಬಂಜಾರ ಸಮುದಾಯಕ್ಕೆ ಮಂಜೂರಾಗಿದ್ದ ನಿವೇಶನದ ಹಕ್ಕುಪತ್ರ ನೀಡದೆ ವಂಚಿಸಿರುವವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ ಆಗ್ರಹಿಸಿದರು.
    1987-88ರಲ್ಲಿ ನನ್ನ ಸಾಹಿತ್ಯ ಸೇವೆ ಪರಿಗಣಿಸಿ ಅಂದಿನ ಸರ್ಕಾರ ತಮ್ಮನ್ನು ಮೇಲ್ಮನೆ ಸದಸ್ಯೆಯನ್ನಾಗಿ ಮಾಡಿದ್ದ ಸಂದರ್ಭದಲ್ಲಿ ಬಂಜಾರ ಸಂಘ ಸ್ಥಾಪಿಸಿತ್ತು. ಮಾತ್ರವಲ್ಲದೆ ನಿರಾಶ್ರಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಮಂಡ್ಯ ನಗರದ ಗುತ್ತಲಿನ ಸರ್ವೇ ನಂಬರ್ 530ರಲ್ಲಿ ಒಂದು ಎಕರೆ 28 ಗುಂಟೆ ಜಮೀನನ್ನು ಮಂಜೂರು ಮಾಡಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೃಷ್ಣನಾಯಕ್ ಅವರಿಗೆ ಜವಾಬ್ದಾರಿ ನೀಡಿ ವಸತಿ ವ್ಯವಸ್ಥೆ ಮಾಡಿಕೊಡಲಾಯಿತು. ನಂತರ ಹತ್ತಾರು ಫಲಾನುಭವಿಗಳು ಅಲ್ಲಿ ನೆಲೆಸಿದ್ದು ಅವರೆಲ್ಲರಿಗೂ ಹಕ್ಕು ಪತ್ರ ಲಭ್ಯವಾಯಿತು. 1998ರಲ್ಲಿ ಆ ಬಡಾವಣೆಗೆ ಬಿ.ಟಿ.ಲಲಿತಾ ನಾಯ್ಕ ಎಂದು ನಾಮಕರಣ ಮಾಡಲಾಯಿತು. ನ್ಯಾಯಬೆಲೆ ಅಂಗಡಿ, ವಾಚನಾಲಯ, ಸಮುದಾಯ ಭವನ, ಅಂಗನವಾಡಿ ಕೇಂದ್ರ, ಸಂತ ಸೇವಾಲಾಲ್ ಮಂದಿರವನ್ನು ಮಂಜೂರು ಮಾಡಿಸಲಾಯಿತು. ಆದರೆ ಕೃಷ್ಣನಾಯಕ್ ಮರಣದ ನಂತರ ಆತ ಮಾಡಿರುವ ವಂಚನೆ ಬಯಲಿಗೆ ಬಂದಿದೆ. ಅವರ ಕುಟುಂಬದವರೇ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದು, ಮೂರು ಲಕ್ಷ ರೂ ಕೊಟ್ಟರೆ ಮಾತ್ರ ಹಕ್ಕುಪತ್ರವನ್ನು ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೆ ಕೆಲವರಲ್ಲಿ ಭಯ ಹುಟ್ಟಿಸುತ್ತಿದ್ದಾರೆಂದು ಆರೋಪಿಸಿದರು.
    ಈ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಂಡು ಉಗ್ರಶಿಕ್ಷೆ ನೀಡಬೇಕು. ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಬೇಕು. ಅವರು ಪಡೆದಿರುವ ಹಣವನ್ನು ವಾಪಸ್ ಕೊಡಿಸಬೇಕು. ಮಾತ್ರವಲ್ಲದೆ ಬೇರೆ ಸಮುದಾಯದವರು ಆಕ್ರಮಣ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
    ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಸಿಎಂ ಶಿವಕುಮಾರ್ ನಾಯ್ಕ, ಕರ್ನಾಟಕ ಬಂಜಾರ ಜಾಗೃತಿ ದಳದ ರಾಜ್ಯಾಧ್ಯಕ್ಷ ತಿಪ್ಪ ಸರ್ ನಾಯ್ಕ, ಜಿಲ್ಲಾ ಲಂಬಾಣಿ ಸೇವಾ ಸಂಘದ ಅಧ್ಯಕ್ಷ ಎಂ.ಕೆ.ಬಾಲರಾಜ್, ಮಹೇಶ್ ನಾಯ್ಕ, ಪುಟ್ಟಸ್ವಾಮಿ, ಶೀನಾ ನಾಯ್ಕ, ವಿವೇಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts