More

    ತೋಟದಿಂದ ಅಂಗಳಕ್ಕೆ ರೋಪ್‌ವೇ; ಸಜಂಗದ್ದೆಯ ಕೃಷಿಕ ಶ್ರೀಹರಿ ಭಟ್ ಪ್ರಯೋಗ

    ಪುರುಷೋತ್ತಮ ಪೆರ್ಲ ಕಾಸರಗೋಡು
    ಕಾರ್ಮಿಕರ ಸಮಸ್ಯೆಗೆ ಪರಿಹಾರ, ಸಮಯದ ಉಳಿತಾಯದ ಜತೆಗೆ ಹೊಂಡದಿಂದ ಮಣಭಾರ ಹೊತ್ತು ಮೇಲಕ್ಕೇರುವುದರಿಂದ ಮುಕ್ತಿ ಕಂಡುಕೊಳ್ಳಲು ಎಣ್ಮಕಜೆ ಪಂಚಾಯಿತಿಯ ಸಜಂಗದ್ದೆ ನಿವಾಸಿ, ಪ್ರಗತಿಪರ ಕೃಷಿಕ ಶ್ರೀಹರಿ ಭಟ್ ನಿರ್ಮಿಸಿಕೊಂಡಿರುವ ರೋಪ್‌ವೇ ಕೃಷಿಕರ ಗಮನಸೆಳೆಯುತ್ತಿದೆ.

    ಕ್ಯಾಂಪ್ಕೊ ನಿರ್ದೇಶಕ, ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ, ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ 69ರ ಹರೆಯದ ಶ್ರೀಹರಿ ಭಟ್ ಅವರಲ್ಲಿ ಕೃಷಿ ಬಗ್ಗೆ ಲವಲವಿಕೆ ಎದ್ದುಕಾಣುತ್ತಿದೆ. ಪೆರ್ಲದಿಂದ ಪಾಣಾಜೆ ತೆರಳುವ ಹಾದಿಯಲ್ಲಿ ಗಾಳಿಗೋಪುರದಿಂದ ಅರ್ಧ ಕಿ.ಮೀ. ದೂರದ ಸಜಂಗದ್ದೆಯಲ್ಲಿ ಮೂರೂವರೆ ಎಕರೆ ಅಡಕೆ ತೋಟ ಹೊಂದಿರುವ ಶ್ರೀಹರಿ ಭಟ್ ಅವರಿಗೆ ಕೃಷಿ ಉತ್ಪನ್ನಗಳನ್ನು ಎತ್ತರದ ಗುಡ್ಡ ಪ್ರದೇಶದಲ್ಲಿರುವ ತಮ್ಮ ಮನೆಗೆ ಸಾಗಿಸುವುದೇ ಸಾಹಸದ ಕೆಲಸ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಕಳೆದ ಹಲವು ವರ್ಷಗಳಿಂದ ಚಿಂತನೆ ನಡೆಸುತ್ತಿರುವ ಮಧ್ಯೆ ಇವರ ಚಿತ್ತಕ್ಕೆ ಹೊಳೆದಿರುವುದೇ ಈ ರಾಟೆಯ ಸಾಧನ.

    ಐದು ವರ್ಷದ ಹಿಂದೆ ಕೃಷಿಕ ಉಜಿರೆ ಮುಂಡಾಜೆ ವಜೆ ನಿವಾಸಿ ಗಜಾನನ ಅವರು ಈ ರೋಪ್‌ವೇ ನಿರ್ಮಿಸಿ ಗಳಿಸಿದ ಯಶಸ್ಸಿನ ಬಗ್ಗೆ ಮಾಹಿತಿ ಪಡೆದ ಶ್ರೀಹರಿ ಭಟ್, ಅವರ ಬಳಿ ತೆರಳಿ ರೋಪ್‌ವೇ ನಿರ್ಮಾಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಸ್ನೇಹಿತ, ಸಿವಿಲ್ ಇಂಜಿನಿಯರ್ ಮುರಳಿ ಸೈಪಂಗಲ್ಲು ಮಾರ್ಗದರ್ಶನದೊಂದಿಗೆ ಇಬ್ಬರು ಕೆಲಸದಾಳುಗಳ ಜತೆ ಸೇರಿ ರಾಟೆ ಸಾಧನ ಅಳವಡಿಸಿಕೊಂಡಿದ್ದಾರೆ. ಕನಿಷ್ಠ 40 ಕೆ.ಜಿ ಭಾರವನ್ನು ನಿಮಿಷಾರ್ಧದಲ್ಲಿ ಅನಾಯಾಸವಾಗಿ ಮೇಲಕ್ಕೆ ತರಲಾಗುತ್ತದೆ.

    ಬೇಕಾದ ಸಾಮಗ್ರಿಯಿದು: ಮನೆ ಅಂಗಳದಲ್ಲಿ ಒಂಬತ್ತು ಅಡಿ ಉದ್ದದ ಕಬ್ಬಿಣದ ಸಲಾಕೆಯನ್ನು ಮೂರು ಅಡಿ ಮಣ್ಣಿನೊಳಗೆ ನಿಲ್ಲುವಂತೆ ಅಳವಡಿಸಿಕೊಂಡು 40 ಅಡಿ ದೂರದ ತಗ್ಗುಪ್ರದೇಶದಲ್ಲಿರುವ ತೋಟದಲ್ಲಿ ಏಳೂವರೆ ಅಡಿ ಉದ್ದದ ಕಬ್ಬಿಣದ ಸಲಾಕೆಯನ್ನು ಮೂರು ಅಡಿ ಮಣ್ಣಿನೊಳಗೆ ನಿಲ್ಲುವಂತೆ ಹೂತು ಇವೆರಡರ ಮಧ್ಯೆ 8 ಎಂ.ಎಂ. ದಪ್ಪದ ಕಬ್ಬಿಣದ ಕೇಬಲ್ ಬಿಗಿದಿದ್ದಾರೆ. ಕೇಬಲ್‌ನಲ್ಲಿ ಚಲಿಸುವ ರೀತಿಯ ರಾಟೆ ಅಳವಡಿಸಿದರೆ, ಅಂಗಳದಲ್ಲಿ ಸ್ಥಿರ ರಾಟೆ ಅಳವಡಿಸಿ ಅನಾಯಾಸವಾಗಿ ತೋಟದಿಂದ ಮೂಟೆಗಳನ್ನು ಅಂಗಳಕ್ಕೆ ರೋಪ್‌ವೇಗೆ ಬಿಗಿದ ಹಗ್ಗದ ಸಹಾಯದಿಂದ ಎಳೆದು ತರಲಾಗುತ್ತದೆ.

    ತೋಟದಿಂದ ಅಡಕೆ, ತೆಂಗು ಇನ್ನಿತರ ಕೃಷಿ ಉತ್ಪನ್ನಗಳನ್ನು ಅಂಗಳಕ್ಕೆ ಹಾಗೂ ಅಂಗಳದಿಂದ ಗೊಬ್ಬರದ ಮೂಟೆಗಳನ್ನು ತೋಟಕ್ಕೆ ಸುಲಭವಾಗಿ ರವಾನಿಸಲಾಗುತ್ತದೆ. ತೋಟದಿಂದ ಕಡಿದಾದ ಏರುದಾರಿಯಲ್ಲಿ ಅಂಗಳಕ್ಕೆ ಅಡಕೆ, ತೆಂಗು ಸೇರಿದಂತೆ ಕೃಷಿ ಉತ್ಪನ್ನಗಳನ್ನು ಹೊತ್ತು ತರುವುದಕ್ಕೆ ಕೂಲಿಯಳುಗಳೂ ಹಿಂದೇಟು ಹಾಕುತ್ತಾರೆ. 15 ಸಾವಿರ ರೂ. ಖರ್ಚು ಮಾಡಿದಲ್ಲಿ ರೋಪ್‌ವೇ ನಿರ್ಮಾಣ ಸಾಧ್ಯ. ಇದರಿಂದ ಶೇ.80ರಷ್ಟು ಕೆಲಸ ಸುಲಭವಾಗುತ್ತದೆ.
    ಶ್ರೀಹರಿ ಭಟ್ ಸಜಂಗದ್ದೆ, ಪ್ರಗತಿಪರ ಕೃಷಿಕ
    (ಮೊಬೈಲ್-9446281914)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts