More

    ಕೋವಿಡ್ ವೇಳೆ ಕರ್ತವ್ಯ ನಿಭಾಯಿಸಿದ ಬಗ್ಗೆ ತೃಪ್ತಿ ಇದೆ ಎಂದ ಬಿಎಸ್‌ವೈ; ಶಿವಾನಂದ ತಗಡೂರು ಅವರ ‘ಕೋವಿಡ್ ಕತೆಗಳು’ ಪುಸ್ತಕ ಲೋಕಾರ್ಪಣೆ

    ಬೆಂಗಳೂರು: ಕೋವಿಡ್ ಹೋರಾಟದಲ್ಲಿ ಸೋಂಕಿನಿಂದ ಮೃತಟ್ಟ ಪತ್ರಕರ್ತರ ಕುಟುಂಬಕ್ಕೆ ಪರಿಹಾರ ಒದಗಿಸುವ ಮೂಲಕ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಹುರೂಪಿ ಪ್ರಕಾಶನ ಪ್ರಕಟಿತ ಶಿವನಂದ ತಗಡೂರ್ ಅವರ ‘ಕೋವಿಡ್ ಕತೆಗಳು’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕೋವಿಡ್ ನಿಯಂತ್ರಿಸಲು ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಸೋಂಕಿನಿಂದ ಆಸ್ಪತ್ರೆ ಸೇರಿದವರು ಗುಣಮುಖರಾಗಿ ಹಿಂದಿರುಗುತ್ತಾರೆ ಎಂಬ ನಂಬಿಕೆಯೇ ಇರುತ್ತಿರಲಿಲ್ಲ. ಅಂತಹ ಸಂಕಷ್ಟದ ಕಾಲದಲ್ಲಿ ಪ್ರತಿ ವಾರ ತಜ್ಞರ ಸಭೆ ನಡೆಸಿ ತಜ್ಞರಿಂದ ಮಾರ್ಗದರ್ಶನ ಪಡೆದು ಸಾಧ್ಯವಾದಷ್ಟು ಪ್ರಾಣಗಳನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಸದ್ಯ ಕೋವಿಡ್ ಇದ್ದರೂ, ಸಾವು ನೋವು ಕಡಿಮೆಯಾಗಿದೆ. ಆದಾಗಿಯೂ ಕೋವಿಡ್‌ನೊಂದಿಗೇ ಬದುಕುವ ಅನಿವಾರ್ಯ ಪರಿಸ್ಥಿತಿ ಇದೆ ಎಂದು ಹೇಳಿದರು.

    ಮಾಧ್ಯಮಗಳ ಸಹಕಾರ: ‘‘ನಾನು ಸಹ ಎರಡು ಬಾರಿ ಸೋಂಕಿಗೆ ಒಳಗಾದರೂ, ಅದರ ನಡುವೆಯೇ ಒಂದೆಡೆ ಆಡಳಿತ ನಿರ್ವಹಣೆ ಮತ್ತೊಂದೆಡೆ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ಕೋವಿಡ್ ಕುರಿತು ಜನರಿಗೆ ಮಾಹಿತಿ ನೀಡುವ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಸಹಕಾರ ಬಹಳ ಮುಖ್ಯವಾಗಿತ್ತು. ಅದನ್ನು ಪತ್ರಕರ್ತರು ಬಹಳ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕರೊನಾ ವಾರಿಯರ್ಸ್‌: ಶಿವಾನಂದ ತಗಡೂರು ಅವರು ಕೋವಿಡ್ ಸಂದರ್ಭದ ಘಟನೆಗಳನ್ನು ಈ ಕೃತಿಯಲ್ಲಿ ಮನಮುಟ್ಟುವ ರೀತಿಯಲ್ಲಿ ನಿರೂಪಣೆ ಮಾಡಿದ್ದಾರೆ. ಇದು ಕೋವಿಡ್ ಕಥೆಯಲ್ಲ ಕಟು ಸತ್ಯ ಎನ್ನುವುದು ವಾಸ್ತವ ಸಂಗತಿ. ಇದನ್ನು ಓದಿದಾಗ ಕೋವಿಡ್ ಸಂದರ್ಭದಲ್ಲಿ ಮಾಧ್ಯಮದವರು ಎದುರಿಸಿದ ಸಮಸ್ಯೆ ಸವಾಲುಗಳು ತಿಳಿಯುತ್ತವೆ. ಕೋವಿಡ್ ನಿಯಂತ್ರಣದಲ್ಲಿ ಪತ್ರಿಕಾರಂಗ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದೆ. ಈ ವೇಳೆ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ನೀಡುವ ಮೂಲಕ ಸರ್ಕಾರ ತನ್ನ ಕರ್ತವ್ಯವನ್ನು ಮಾಡಿದೆ. ಅದೇ ರೀತಿ ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಕರ್ತರ ನೆರವಿಗೆ ಧಾವಿಸಿದ್ದು ಶ್ಲಾಘನೀಯ ಸಂಗತಿ ಎಂದು ಹೇಳಿದರು.

    ಪುಸ್ತಕ ಬಿಡುಗಡೆಗೊಳಿಸಿದ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, ನಾವೀಗ ಕೋವಿಡ್ ಮೂರನೇ ಅಲೆ ಅಂತ್ಯಕ್ಕೆ ಬಂದಿದ್ದೇವೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಲಕ್ಷಾಂತರ ಜನರಿಗೆ ಸೋಂಕು ತಗುಲಿ, ಜೀವಗಳನ್ನು ಬಲಿ ತೆಗೆದುಕೊಂಡಿತು. ಅದೆಷ್ಟೋ ಕುಟುಂಬಗಳ ಬದುಕನ್ನು ಬೀದಿಗೆ ತಂದು ಬಿಸಾಡಿತು. ಪ್ರಕೃತಿ ವಿರುದ್ಧ ಹೋದರೆ ಯಾವ ಸ್ಥಿತಿ ಎದುರಾಗುತ್ತದೆ ಎನ್ನುವುದಕ್ಕೆ ಕೋವಿಡ್ ಉತ್ತಮ ನಿದರ್ಶನ. ತಿನ್ನಬಾರದ್ದನ್ನು ತಿಂದರೆ, ಮಾಡಬಾರದನ್ನು ಮಾಡಿದರೆ ಪ್ರಕೃತಿ ಸೇಡು ತೀರಿಸಿಕೊಳ್ಳುವ ಬಗೆ ಇದು ಎಂದರು.


    ಪತ್ರಕರ್ತರು ಕೇವಲ ಟೀಕೆ ಮಾಡುವವರಲ್ಲ. ಒಳ್ಳೆಯ ಕೆಲಸ ಮಾಡಿದಾಗ ಬೆನ್ನುತಟ್ಟಿ ಪ್ರೋತ್ಸಾಹವನ್ನೂ ನೀಡುತ್ತೀರ. ಅಧಿಕಾರ ಇದ್ದಾಗ ಮಾತ್ರವಲ್ಲ, ಹೋದ ಮೇಲೂ ಅದೇ ಗೌರವ ನೀಡುತ್ತಿದ್ದೀರ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಗಳಲ್ಲೂ ನಾಡಿನ ಅಭಿವೃದ್ಧಿಗೆ ಒಟ್ಟಾಗಿ ಹೋರಾಟ ಮಾಡೋಣ. ಜನರಿಗೆ ಸ್ವಾಭಿಮಾನದ ಬದುಕು ನಡೆಸಲು ಅವಕಾಶ ಮಾಡಿಕೊಡುವ ಜವಾಬ್ದಾರಿ ಪ್ರತಿಯೊಬ್ಬ ಜನಪ್ರತಿನಿಧಿಗಳ ಕರ್ತವ್ಯ.
    | ಬಿ.ಎಸ್. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

    ಕಾರ್ಯಕ್ರಮದಲ್ಲಿ ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ ಅವರಿಗೆ ‘ಪಿ.ರಾಮಯ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಿಜಯವಾಣಿ ಪತ್ರಿಕೆ ಸಂಪಾದಕರಾದ ಕೆ.ಎನ್. ಚನ್ನೇಗೌಡ, ಕನ್ನಡಪ್ರಭ ಸಂಪಾದಕರಾದ ರವಿ ಹೆಗಡೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ಸೋನು ಗೌಡ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ, ವಾರ್ತಾ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಎಚ್.ಬಿ.ದಿನೇಶ್, ಬಹುರೂಪಿ ಪ್ರಕಾಶನದ ಜಿ.ಎನ್. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts