More

    ಬಸ್ ಡಿಪೋ ಕಾಮಗಾರಿಗೆ ‘ಅರಣ್ಯ’ ರೋದನ

    ಶಶಿಧರ ಕುಲಕರ್ಣಿ ಮುಂಡಗೋಡ

    ತಾಲೂಕಿಗೆ ಬಸ್ ಡಿಪೋ ನಿರ್ವಣಕ್ಕಾಗಿ ಜಾಗ ಮಂಜೂರಿಯಾಗಿ 9 ವರ್ಷವಾದರೂ ಕಾಂಪೌಂಡ್ ಮಾತ್ರ ನಿರ್ವಣವಾಗಿ ಕಟ್ಟಡ ನಿರ್ವಣಕ್ಕೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.

    ವಿ.ಎಸ್. ಪಾಟೀಲ ಶಾಸಕರಾಗಿದ್ದಾಗ ಬಸ್ ಡಿಪೋ ಮಂಜೂರಿಯಾಗಿತ್ತು. ಆದರೆ, ಜಾಗೆಯ ಸುತ್ತ ಕಾಂಪೌಂಡ್ ಹಾಕಿದ್ದನ್ನು ಬಿಟ್ಟರೆ ಇಲ್ಲಿಯವರೆಗೆ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ. ಮಂಜೂರಿ ತಂದವರೆ ಈಗ ನಿಗಮದ ಅಧ್ಯಕ್ಷರಾಗಿರುವುದರಿಂದ ಸಾರಿಗೆ ಸಚಿವರು, ಮುಖ್ಯಮಂತ್ರಿ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಮೂಲಕ ಡಿಪೋ ನಿರ್ವಣಕ್ಕೆ ಮುಂದಾಗಬೇಕು ಎಂಬುದು ಜನರ ಒತ್ತಾಸೆಯಾಗಿದೆ.

    ಸಮಸ್ಯೆ ಏನು?: 2011ರಲ್ಲಿ ವಿ.ಎಸ್. ಪಾಟೀಲ ಅವರು ಶಾಸಕರಾಗಿದ್ದಾಗ ಕೇಂದ್ರ ಸರ್ಕಾರದಿಂದ ಬಸ್ ಡಿಪೋಗಾಗಿ ಎರಡೂವರೆ ಎಕರೆ ಜಾಗವನ್ನು ಎಫ್​ಸಿ ಆಕ್ಟ್ (ಅರಣ್ಯ ಸಂರಕ್ಷಣೆ ಕಾಯ್ದೆ) ಅಡಿ ಮಂಜೂರಿ ಮಾಡಿಸಿದ್ದರು. ಅದರಂತೆ ಜಾಗ ಗುರುತಿಸಿ ಗಡಿಗಳನ್ನು ಸರಿಪಡಿಸಿ ಕಾಂಪೌಂಡ್ ನಿರ್ವಿುಸುವ ಮೊದಲ ಹಂತ ಪೂರ್ಣಗೊಂಡಿದೆ. ಇನ್ನು ಎರಡನೇ ಹಂತದಲ್ಲಿ ಕೇಂದ್ರ ಸರ್ಕಾರದ ಸಮಿತಿ ಆಗಮಿಸಿ ಜಾಗವನ್ನು ನೋಡಿ ಅನುಮತಿ ನೀಡಿದ ಬಳಿಕ ಅರಣ್ಯ ಇಲಾಖೆಯವರು ಅಲ್ಲಿರುವ ಸಣ್ಣ-ಪುಟ್ಟ ಗಿಡಗಳನ್ನು ತೆರವುಗೊಳಿಸಿಕೊಡಬೇಕಿದೆ. ಈ ಹಂತಕ್ಕಾಗಿ ಈಗಾಗಲೇ ಹಣವನ್ನೂ ಪಾವತಿಸಲಾಗಿದೆ ಎಂದು ಎನ್​ಡಬ್ಲು್ಯಕೆಆರ್​ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    ಬಾರದ ಕೇಂದ್ರ ಸಮಿತಿ: ಡಿಪೋ ನಿರ್ವಣಕ್ಕೆ ಗುರುತಿಸಲಾಗಿರುವ ಜಾಗವನ್ನು ಕೇಂದ್ರ ಸಮಿತಿಯವರು ಪರಿಶೀಲಿಸಿ ಅನುಮೋದನೆ ನೀಡಬೇಕಿದ್ದು ಈ ವರೆಗೂ ಕೇಂದ್ರ ಸಮಿತಿ ಸ್ಥಳ ಪರಿಶೀಲನೆ ನಡೆಸದಿರುವುದರಿಂದ ಕಾಮಗಾರಿ ಆರಂಭ ವಿಳಂಬವಾಗಿದೆ.

    ಒಲ್ಲೆ ಎನ್ನುತ್ತಿರುವ ಗುತ್ತಿಗೆದಾರ: ಒಂದು ವರ್ಷದ ಹಿಂದೆ ಡಿಪೋ ಕಾಮಗಾರಿಗೆ 4 ಕೋಟಿ ರೂ. ಟೆಂಡರ್ ನೀಡಲಾಗಿತ್ತು. ಆದರೆ ಇದುವರೆಗೂ ತಂತ್ರಿಕ ಕಾರಣಗಳಿಂದ ಕಾಮಗಾರಿ ಆರಂಭವಾಗದಿರುವುದರಿಂದ ಹಳೇ ದರದಲ್ಲಿ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರ ಒಪ್ಪುತ್ತಿಲ್ಲ ಎನ್ನಲಾಗುತ್ತಿದೆ.

    2011ರಲ್ಲಿ ನಾನು ಶಾಸಕನಾಗಿದ್ದಾಗ ಕೇಂದ್ರ ಸರ್ಕಾರದಿಂದ ಬಸ್ ಡಿಪೋಗಾಗಿ ಎರಡೂವರೆ ಎಕರೆ ಜಾಗ ಮಂಜೂರಿ ಮಾಡಿಸಿದ್ದೆ. ಒಂದು ವರ್ಷದ ಹಿಂದೆಯೇ ಟೆಂಡರ್ ಆಗಿದ್ದು ಗುತ್ತಿಗೆದಾರ ಹಳೆಯ ದರದಲ್ಲಿ ಕಾಮಗಾರಿ ಮಾಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾನೆ. ಕೇಂದ್ರ ಸರ್ಕಾರದ ಸಮಿತಿಯವರು ಬಂದು ಜಾಗವನ್ನು ನೋಡಿ ಅನುಮತಿ ನೀಡಿ ಅರಣ್ಯ ಇಲಾಖೆಯವರು ಅಲ್ಲಿರುವ ಸಣ್ಣ-ಪುಟ್ಟ ಗಿಡಗಳನ್ನು ಕಡಿದ ಮೇಲೆ ಡಿಪೋ ಕಾಮಗಾರಿ ಆರಂಭವಾಗುವುದು.

    | ವಿ.ಎಸ್.ಪಾಟೀಲ, ವಾಕರಸಾ ಸಂಸ್ಥೆ ಅಧ್ಯಕ್ಷ

    ಅರಣ್ಯ ಇಲಾಖೆಯಿಂದ ಎರಡನೇ ಹಂತದ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿದೆ. ಕೇಂದ್ರ ಸಮಿತಿಗೆ ಸ್ಥಳ ಪರಿಶೀಲನೆ ಶೀಘ್ರದಲ್ಲಿ ನಡೆಸುವಂತೆ ಮನವಿ ಮಾಡಲಾಗಿದೆ. ಆದಷ್ಟು ಬೇಗ ಬಸ್ ಡಿಪೋ ಕಾಮಗಾರಿ ಆರಂಭಿಸಲಾಗುವುದು.

    | ಶಿವರಾಮ ಹೆಬ್ಬಾರ, ಜಿಲ್ಲಾ ಉಸ್ತುವಾರಿ ಸಚಿವ

    ಎಫ್​ಸಿ ಆಕ್ಟ್​ನಲ್ಲಿ ಬಸ್ ಡಿಪೋ ನಿರ್ವಣಕ್ಕೆ ಜಾಗ ಮಂಜೂರಾತಿಗೆ ಅರ್ಜಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದಿಂದ ಎರಡನೇ ಹಂತದಲ್ಲಿ ಅನುಮೋದನೆಯಾಗಬೇಕು. ಎರಡನೇ ಹಂತದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿ 1 ವರ್ಷವಾಗಿದೆ. ಅನುಮೋದನೆ ದೊರೆತ ನಂತರ ಆ ಜಾಗವನ್ನು ಅವರಿಗೆ ಬಿಟ್ಟು ಕೊಡಲಾಗುವುದು.

    | ಗೋಪಾಲಕೃಷ್ಣ ಹೆಗಡೆ, ಡಿಎಫ್​ಒ ಯಲ್ಲಾಪುರ

    ಎರಡೂವರೆ ಎಕರೆ ಜಾಗವಿದ್ದು ಅರಣ್ಯ ಇಲಾಖೆಯಿಂದ ಆ ಜಾಗ ನಮಗೆ ಇನ್ನೂ ಹಸ್ತಾಂತರ ಆಗಿಲ್ಲ. ಮೊದಲನೇ ಹಂತ ಆಗಿದ್ದು ಎರಡನೇ ಹಂತ ಅನುಮೋದನೆಯಾಗಬೇಕು. ಗಿಡ-ಮರಗಳಿದ್ದ ಕಾರಣ ಕಾಮಗಾರಿ ಆರಂಭವಾಗಿಲ್ಲ. ಅರಣ್ಯ ಇಲಾಖೆಯಿಂದ ಅನುಮೋದನೆ ಬಾರದೆ ಕೆಲಸ ಆರಂಭಿಸಲು ನಮಗೆ ಅಧಿಕಾರವಿಲ್ಲ. ಟೆಂಡರ್ ಕರೆದು ಒಂದು ವರ್ಷವಾಯಿತು.

    ಎನ್.ವಿ.ಶಿವಮೂರ್ತಿ, ಎನ್​ಡಬ್ಲು್ಯಕೆಆರ್​ಟಿಸಿ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts