More

    ಯುಟಿಪಿ ಕಾಲುವೆ ಪಕ್ಕ ಜಂಗಲ್!

    ರಟ್ಟಿಹಳ್ಳಿ: ಸಮರ್ಪಕ ಅನುದಾನ, ನಿರ್ವಹಣೆ ಕೊರತೆಯಿಂದ ತಾಲೂಕಿನ ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಮುಖ್ಯ ಕಾಲುವೆಗಳ ಅಕ್ಕಪಕ್ಕ ಜಾಲಿಗಿಡಗಳು ಬೆಳೆದು ಜಂಗಲ್​ನಂತೆ ಭಾಸವಾಗುತ್ತಿದೆ. ಇದರಿಂದ ರೈತರು ಕೃಷಿ ಕಾರ್ಯಗಳಿಗೆ ತೆರಳಲು ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗುತ್ತಿದೆ.

    ಸರ್ಕಾರದ ಆದೇಶದಂತೆ ಕಮಲಾಪುರ ಗ್ರಾಮದಿಂದ ನೇಸ್ವಿ ಗ್ರಾಮದವರೆಗೆ 66 ಕಿಮೀ ವ್ಯಾಪ್ತಿಯ 15663 ಹೆಕ್ಟೇರ್ ಪ್ರದೇಶಕ್ಕೆ ತುಂಗಾ ಮೇಲ್ದಂಡೆ ಯೋಜನೆ ಉಪವಿಭಾಗದಿಂದ ನೀರು ಹಾಯಿಸಲಾಗುತ್ತಿದೆ. ಆದರೀಗ ತಾಲೂಕಿನಲ್ಲಿನ ಮುಖ್ಯಕಾಲುವೆಗಳ ಎರಡೂ ಬದಿಯಲ್ಲಿ ಜಾಲಿ ಗಿಡಗಳು ಬೆಳೆದು ಸರ್ವಿಸ್ ರಸ್ತೆಗೆ ಚಾಚಿಕೊಂಡಿವೆ. ಅಧಿಕಾರಿಗಳು ಕಳೆದ ವರ್ಷ ಈ ಭಾಗದಲ್ಲಿ ಜಂಗಲ್ ಕಟಾವು ಮಾಡದ ಕಾರಣ ಕಾಲುವೆ ಪಕ್ಕದ ಹೊಲಗಳಿಗೆ ತೆರಳಲು ರೈತರು ಪರದಾಡುವಂತಾಗಿದೆ.

    ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ, ಯಂತ್ರೋಪಕರಣ ಸಾಗಿಸಲು, ಚಕ್ಕಡಿ, ಟ್ರ್ಯಾಕ್ಟರ್​ಗಳನ್ನು ಕೊಂಡೊಯ್ಯುವಾಗ ಜಾಲಿಗಿಡಗಳ ಮುಳ್ಳುಗಳು ರೈತರ ಮುಖಕ್ಕೆ ರಾಚುತ್ತವೆ. ಇದರಿಂದ ಹಲವು ಗಾಯಗೊಂಡ ಘಟನೆಗಳೂ ನಡೆದಿವೆ.

    ಜಂಗಲ್ ಕಟಾವ್ ಮಾಡಲು ಸರ್ಕಾರದಿಂದ ಪ್ರತಿ ವರ್ಷ ಅನುದಾನ ಬಿಡುಗಡೆಯಾಗುತ್ತದೆ. ಟೆಂಡರ್ ಕರೆದು ಗುತ್ತಿಗೆ ನೀಡಲಾಗುತ್ತದೆ. ಆದರೆ, ಗುತ್ತಿಗೆದಾರರು ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ. ಇದರಿಂದಾಗಿ ಜಾಲಿಕಂಟಿಗಳ ಬೇರುಗಳು ಕಾಲುವೆಯ ಲೈನ್​ಗಳಲ್ಲಿ ಹೊರಬಂದು ಬಿರುಕು ಮೂಡಿದೆ. ಕಾಲುವೆಯ ಸಿಮೆಂಟ್ ಕೆಲವೆಡೆ ಒಡೆದು ಕೆಳಗೆ ಬಿದ್ದಿವೆ. ಲೈನ್​ಗಳು ಒಡೆದಿದ್ದರಿಂದ ನೀರು ಬಂದಾಗ ಅಪಾರ ಪ್ರಮಾಣದಲ್ಲಿ ಜೀವಜಲ ಸೋರಿಕೆಯಾಗಿ ಪಕ್ಕದ ಜಮೀನುಗಳಿಗೆ ಹರಿದು ಬೆಳೆಗೆ ಹಾನಿಯಾದ ಘಟನೆಯೂ ನಡೆದಿದೆ.

    ತಾಲೂಕಿನ ಮುಖ್ಯಕಾಲುವೆ, ಉಪಕಾಲುವೆ ಸೇರಿ ಸಮರ್ಪಕವಾಗಿ ನೀರು ಹರಿಯಲು ಹೊಲಗಾಲುವೆಗಳನ್ನು ಮಾಡಬೇಕಾಗಿದೆ. ಆದರೆ, ಸೂಕ್ತ ಅನುದಾನ ಬಾರದ ಕಾರಣ ಕಾಮಗಾರಿ ಬಹುತೇಕ ಕಡೆ ಅಪೂರ್ಣವಾಗಿದೆ. ಹೀಗಾಗಿ, ಮುಖ್ಯಕಾಲುವೆಯಿಂದ ಕೆಲವೆಡೆ ರೈತರು ಪಂಪ್​ಸೆಟ್, ಮೋಟಾರ್ ಬಳಸಿ ತಮ್ಮ ಜಮೀನುಗಳಿಗೆ ನೀರು ಹಾಯಿಸಿಕೊಳ್ಳುತ್ತಾರೆ.

    ಕಮಲಾಪುರ, ಹಿರೇಕಬ್ಬಾರ, ಕುಡುಪಲಿ, ಪರ್ವತಸಿದ್ದಗೇರಿ, ಬುಳ್ಳಾಪುರ ಸೇರಿ ತಾಲೂಕಿನ ವಿವಿಧೆಡೆ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಗಳ ಅಕ್ಕಪಕ್ಕದಲ್ಲಿ ಜಾಲಿಕಂಟಿಗಳು ಬೆಳೆದಿದ್ದರಿಂದ ರೈತರು ಹೊಲಕ್ಕೆ ಹೋಗದಂತಾಗಿದೆ. ಕಾಲುವೆ ಲೈನ್​ಗಳು ಒಡೆದಿದ್ದರಿಂದ ನೀರು ಸೋರಿಕೆಯಾಗಿ ನಮ್ಮೂರಿನ 300 ಎಕರೆಯಲ್ಲಿನ ಬೆಳೆಗಳು ಹಾನಿಯಾಗುತ್ತಿವೆ. ಅಧಿಕಾರಿಗಳು ಇತ್ತೀಚೆಗೆ ಸ್ಥಳ ಪರಿಶೀಲಿಸಿದ್ದಾರೆ. ಕೂಡಲೆ ಸಮಸ್ಯೆಗೆ ಪರಿಹಾರ ಒದಗಿಸಬೇಕು.
    | ಗಜೇಂದ್ರ ಮಾಸ್ತಿ ಕಮಲಾಪುರ ಗ್ರಾಮಸ್ಥ

    ರಟ್ಟಿಹಳ್ಳಿ ತಾಲೂಕಿನ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆ ಅಕ್ಕಪಕ್ಕದ ಜಂಗಲ್ ಕಟಾವ್ ಮಾಡಲು ಸರ್ಕಾರದಿಂದ 9.50 ಲಕ್ಷ ರೂ. ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೆ ಕಾಮಗಾರಿ ಕೈಗೊಳ್ಳಲಾಗುವುದು. ಯುಟಿಪಿ ಮುಖ್ಯ ಕಾಲುವೆಯ ಜಂಗಲ್ ಕಟಾವ್, ಲೈನಿಂಗ್ ದುರಸ್ತಿಗೆ 20 ಕೋಟಿ ರೂ. ಹಾಗೂ ಹೊಲಗಾಲುವೆ ನಿರ್ವಿುಸಲು 30 ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.
    | ಟಿ. ಮುಕಂದರಾಜ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯುಟಿಪಿ ಉಪವಿಭಾಗ, ರಟ್ಟಿಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts