More

    ಹಿರಿಯ ಪತ್ರಕರ್ತ ರಾಘವೇಂದ್ರ ಜೋಶಿ ಇನ್ನಿಲ್ಲ

    ಬೆಳಗಾವಿ: ಗಡಿಭಾಗದ ಕನ್ನಡಪರ ಹೋರಾಟಗಾರ ಮತ್ತು ಹಿರಿಯ ಪತ್ರಕರ್ತ ರಾಘವೇಂದ್ರ ಅರವಿಂದರಾವ ಜೋಶಿ (78) ಸೋಮವಾರ ಬೆಳಗಾವಿಯ ಭಾಗ್ಯ ನಗರದ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಮೂರು ದಶಕಗಳಿಂದ ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಭಾಷೆ ಗಟ್ಟಿಗೊಳಿಸಲು ಮತ್ತು ಕನ್ನಡಿಗರಲ್ಲಿ ಆತ್ಮಸ್ಥೈರ್ಯ ತುಂಬಲು ರಾಘವೇಂದ್ರ ಜೋಶಿ ಅಪಾರ ಶ್ರಮಿಸಿದ್ದರು. ಕನ್ನಡಿಗರನ್ನು ಒಗ್ಗೂಡಿಸಲು, ಜಾಗೃತಿಗೊಳಿಸಲು ನಾಡೋಜ ದಿನಪತ್ರಿಕೆ ಆರಂಭಿಸಿದ್ದರು.

    ಇದನ್ನೂ ಓದಿ: ಪಾರ್ಟಿ ತ್ಯಜಿಸಿ, ಬಿಜೆಪಿ ಸೇರಿದ್ದ ನಾಯಕನನ್ನೇ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ ಕಾಂಗ್ರೆಸ್​!

    2002ರಲ್ಲಿ ತಾವು 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಳಗಾವಿ ನಾಗರಿಕರು ಸನ್ಮಾನಿಸಿ ನೀಡಿದ್ದ 1 ಲಕ್ಷ ರೂ.ಬಳಸಿ ನಾಡೋಜ ಪ್ರತಿಷ್ಠಾನ ಸ್ಥಾಪಿಸಿದ್ದ ಜೋಶಿ ಅವರು, ಕನ್ನಡಕ್ಕಾಗಿ ಶ್ರಮಿಸಿದ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರಿಗೆ 5 ಸಾವಿರ ರೂ.ನಗದು, ಸ್ಮರಣಿಕೆ ನೀಡಿ ಗೌರವಿಸುತ್ತಿದ್ದರು. 16 ವರ್ಷಗಳ ಅವಧಿಯಲ್ಲಿ 63 ಗಣ್ಯರನ್ನು ಸನ್ಮಾನಿಸಿದ್ದರು.

    1942 ಡಿಸೆಂಬರ್ 8ರಂದು ಬೆಳಗಾವಿಯಲ್ಲಿ ಜನಿಸಿದ್ದ ರಾಘವೇಂದ್ರ ಜೋಶಿ, ಬೆಳಗಾವಿಯಲ್ಲಿ ಬಿಎಸ್‌ಸಿ ಪದವಿ ಮುಗಿಸಿದ ಬಳಿಕ ಮುಂಬೈನ ಪಿವಿಸಿ ಕಂಪನಿಯಲ್ಲಿ ಸೇಲ್ಸ್‌ಮನ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ಸಿವಿಲ್ ಗುತ್ತಿಗೆದಾರರಾಗಿದ್ದರು. ಜೋಶಿ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಪ್ರಶಸ್ತಿ, ಗೌರವ: ಪತ್ರಿಕಾ ಅಕಾಡೆಮಿ ವತಿಯಿಂದ 1994ರಲ್ಲಿ ವಿಶೇಷ ಪುರಸ್ಕಾರ, ಬೆಂಗಳೂರಿನ ಎಚ್‌ಎಎಲ್ ಕನ್ನಡ ಸಂಘದಿಂದ ಕನ್ನಡ ಕಾಯಕ ರತ್ನ ಪ್ರಶಸ್ತಿ, 2011ರಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.

    ಇದನ್ನೂ ಓದಿ: ಬಸ್ ಒಳಗೆ ಆಡುತ್ತಿದ್ದ ಬಾಲಕಿಯ ರೇಪ್​ ಮಾಡಿ ಗೋಣಿ ಚೀಲದಲ್ಲಿ ತುಂಬಿಟ್ಟ ಚಾಲಕ!

    ಸ್ವಾಮೀಜಿಗಳು, ಗಣ್ಯರ ಸಂತಾಪ: ಹಿರಿಯ ಪತ್ರಕರ್ತ ರಾಘವೇಂದ್ರ ಜೋಶಿ ಅವರ ನಿಧನಕ್ಕೆ ನಾಗನೂರು ರುದ್ರಾಕ್ಷಿಮಠ ಮತ್ತು ಗದುಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹಾಗೂ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಸ್ವಾಮೀಜಿ ಶೋಕ ವ್ಯಕ್ತಪಡಿಸಿದ್ದಾರೆ. ಗಡಿನಾಡು, ನುಡಿಗೆ ಅಪಾರ ಕೊಡುಗೆ ನೀಡಿದ್ದರು. ಬೆಳಗಾವಿ ಕುರಿತು ವಸ್ತುನಿಷ್ಠ ಅಧ್ಯಯನ ಮಾಡಿದ ಅಪರೂಪದ ಸಾಹಿತಿಗಳಾಗಿದ್ದರು. ಅವರ ಅಗಲಿಕೆಯಿಂದ ಬೆಳಗಾವಿಗೆ ತುಂಬಲಾರದ ನಷ್ಟವಾಗಿದೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಕೋರೆ ಕಂಬನಿ: ಬೆಳಗಾವಿ ಕಂಡ ಓರ್ವ ಧೀಮಂತ ಪತ್ರಕರ್ತ, ನಾಡೋಜ ಪ್ರತಿಷ್ಠಾನದ ರೂವಾರಿ, ನಾಡೋಜ ಮತ್ತು ನಿರ್ಭೀತ ಪತ್ರಿಕೆಗಳ ಸಂಪಾದಕರಾಗಿದ್ದ ರಾಘವೇಂದ್ರ ಜೋಶಿ ಅವರ ಅಗಲಿಕೆ ದುಃಖದ ಸಂಗತಿ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಸಂತಾಪ ಸೂಚಿಸಿದ್ದಾರೆ. ರಾಘವೇಂದ್ರ ಜೋಶಿ ವಸ್ತುನಿಷ್ಠವಾಗಿಬರೆಯುತ್ತಿದ್ದರು. ಬೆಳಗಾವಿಯಲ್ಲಿ ಮೂಲಕ ಕನ್ನಡ ಕಟ್ಟಲು ಶ್ರಮಿಸಿದ, ನಾಡು-ನುಡಿ ಎತ್ತಿಹಿಡಿದ ಅವರ ಕನ್ನಡ ಪ್ರೇಮ ಅಪಾರ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts