More

    ಪ್ರಕೃತಿಗೆ ವಜ್ರಧಾರೆಯ ನಮನ

    ಖಾನಾಪುರ: ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿರುವ ಕಾರಣ ಕಾಡಂಚಿನಲ್ಲಿರುವ ಹಲವು ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಆದರೆ, ಕರೊನಾ ಭಯದಿಂದಾಗಿ ಜನರಿಗೆ ನೈಜ ಸೌಂದರ್ಯ ಸವಿಯುವ ಭಾಗ್ಯ ಇಲ್ಲದಾಗಿದೆ. ಎತ್ತರದ ಬೆಟ್ಟದಿಂದ ಪ್ರಪಾತಕ್ಕೆ ನೀರು ಧುಮ್ಮಿಕ್ಕುವ ದೃಶ್ಯಗಳು, ಬಾನು ಮತ್ತು ಭುವಿಯನ್ನು ಒಂದು ಮಾಡುವ ಮೋಡಗಳ ಪವಾಡ, ತಣ್ಣನೆಯ ಗಾಳಿ ಮತ್ತು ಮಂಜು ಮುಸುಕಿದ ತಂಪಾದ ವಾತಾವರಣ ಪ್ರಕೃತಿಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿದೆ.

    ಧುಮ್ಮಿಕ್ಕುವ ನೀರು: ಕಣಕುಂಬಿ ಅರಣ್ಯದ ಪಾರವಾಡ-ಚಿಕಲೆ ಗ್ರಾಮಗಳ ನಡುವೆ ಇರುವ ವಜ್ರ ಪೋಹಾ (ವಜ್ರಧಾರಾ) ಜಲಪಾತ ಧುಮ್ಮಿಕ್ಕಿ ಹರಿಯುತ್ತಲಿದೆ. ಇದಲ್ಲದೆ, ಪಾರವಾಡ ಗ್ರಾಮದಿಂದ ಪೂರ್ವ ದಿಕ್ಕಿನಲ್ಲಿ ಒಂದು ಕಿ.ಮೀ. ದೂರದಲ್ಲಿರುವ ಲಾಕಡಿ ಜಲಪಾತ, ಜಾಂಬೋಟಿ ಬಳಿಯ ಭಟವಾಡಾ ಜಲಪಾತ, ನಾಗರಗಾಳಿ ಅರಣ್ಯದ ಹಾಗೂ ಭೀಮಗಡ ವನ್ಯಧಾಮದ ಗವ್ವಾಳಿ ಗ್ರಾಮದ ಬಳಿ ಇರುವ ವಜ್ರಾ ಜಲಪಾತ, ಕುಸಮಳಿ ಗ್ರಾಮದ ಹೊರವಲಯದ ತಾಮಡಾ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ.

    ಮಳೆಗಾಲದ ವೈಭವ: ತಾಲೂಕಿನ ಚಿಗುಳೆ ಗ್ರಾಮದ ದಟ್ಟ ಅರಣ್ಯವನ್ನು ಸುತ್ತುವರಿದಿರುವ ಘಟ್ಟ ಪ್ರದೇಶ, ದಟ್ಟ ಅರಣ್ಯವನ್ನು ಸುತ್ತುವರಿದಿರುವ ನಾಗರಗಾಳಿ ಅರಣ್ಯಪ್ರದೇಶದ ಹಂಡಿಬಡಂಗನಾಥ ತೀರ್ಥಕ್ಷೇತ್ರ, ಜಾಂಬೋಟಿಯಿಂದ 4 ಕಿ.ಮೀ. ದೂರದಲ್ಲಿರುವ ಮಲಪ್ರಭಾ ನದಿ ತೀರದ ಹಬ್ಬಾನಹಟ್ಟಿಯ ಸ್ವಯಂಭೂ ಆಂಜನೇಯ ದೇವಸ್ಥಾನ, ಅಸೋಗಾ ಗ್ರಾಮದ ಬಳಿ ಇರುವ ಮಲಪ್ರಭಾ ನದಿತೀರ, ಚಿಕ್ಕಹಟ್ಟಿಹೊಳಿ ಗ್ರಾಮದ ಮಲಪ್ರಭಾ ತೀರದ ವೀರಭದ್ರೇಶ್ವರ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳು ಮಳೆಗಾಲದ ವೈಭವವನ್ನು ತೆರೆದುಕೊಂಡಿವೆ.

    ಜಲಪಾತಕ್ಕೆ ತೆರಳಲು ಅರಣ್ಯ ಅಧಿಕಾರಿಗಳ ಅನುಮತಿ ಕಡ್ಡಾಯ

    ಜಲಪಾತವಿರುವ ದಟ್ಟ ಅರಣ್ಯಪ್ರದೇಶದಲ್ಲಿ ವನ್ಯಜೀವಿಗಳ ದಾಳಿಯ ಭಯವಿದೆ. ಜತೆಗೆ ಗೊತ್ತಿಲ್ಲದ ಹಾಗೆ ರಕ್ತ ಹೀರುವ ಜಿಗಣೆಗಳಿವೆ. ಈ ತಾಣಗಳಿಗೆ ಸಾಗುವ ರಸ್ತೆಗಳೂ ಸಮರ್ಪಕವಾಗಿಲ್ಲ. ವಿವಿಧ ಕ್ರೂರ ಮೃಗಗಳು ಹಾಗೂ ವಿಷಜಂತುಗಳ ಆವಾಸಸ್ಥಾನ ಇದಾಗಿರುವುದರಿಂದ ಜಲಪಾತಗಳ ವೀಕ್ಷಣೆಗೆ ಅರಣ್ಯ ಇಲಾಖೆಯ ಪೂರ್ವಾನುಮತಿ ಅಗತ್ಯ ಮತ್ತು ಕಡ್ಡಾಯ. ಈ ತಾಣಗಳು ನೋಡಲು ಎಷ್ಟು ಸುಂದರವಾಗಿವೆಯೋ ಹಾಗೇಯೇ ಅಪಾಯಕಾರಿಯಾಗಿದೆ. ಹೀಗಾಗಿ ಚಾರಣಿಗರು ತೆರಳುವ ಮುನ್ನ ಮುನ್ನೆಚ್ಚರಿಕೆ ವಹಿಸಬೇಕಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts