More

    ಅರ್ಥಗರ್ಭಿತ ಸಂದೇಶ ಸಾರಿದ ಚಿತ್ರಸಂತೆ: ಜೀವ ನಿಂತಂತೆ ಭಾಸವಾದ ಕಲಾಕೃತಿಗಳು

    ಬೆಂಗಳೂರು: ನಾಡಿನ ಸಂಸ್ಕೃತಿ, ಧ್ಯಾನಸ್ಥ ಬುದ್ಧ, ಹೆಣ್ಣಿನ ಭಾವ, ಜನಪದ ಸೊಗಡು, ಗ್ರಾಮೀಣ ಬದುಕು, ನಿಸರ್ಗ, ಕಡಲತೀರದ ಸೌಂದರ್ಯದ ವರ್ಣನೆ,ಅನುಪಯುಕ್ತ ಕಟ್ಟಿಗೆ ತುಣುಕುಗಳಲ್ಲಿ ಅರಳಿದ ಆನೆ, ಒಂಟೆಯ ಚಿತ್ರ, ವಾಸ್ತು ಶಾಸ ಹಾಗೂ ಪುರಾಣದ ಬಹುತೇಕ ಪಾತ್ರಗಳು ಕಲಾಕೃತಿಯಲ್ಲಿ ಜೀವ ನಿಂತಂತೆ ಭಾಸವಾಯಿತು….

    ಕರ್ನಾಟಕ ಚಿತ್ರಕಲಾ ಪರಿಷತ್ತು ಕುಮಾರ ಕೃಪರಸ್ತೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಚಿತ್ರಸಂತೆ’ಯಲ್ಲಿ ಕಂಡುಬಂದ ಚಿತ್ರಣವಿದು.
    ಚಿತ್ರಸಂತೆಯು ಅಕ್ಷರಶಃ ಜಾತ್ರೆಯಾಗಿ ಪರಿಣಮಿಸಿತ್ತು. ಕಣ್ಣು ಹಾಯಿಸಿದಷ್ಟು ದೂರ ಕಲಾಕೃತಿಗಳು, ಕ್ಯಾಮರಾದಲ್ಲಿ ಚಿತ್ರಪಟಗಳನ್ನು ಸೆರೆಹಿಡಿಯುವ ಕಾತುರದಿಂದ ಕಾಯುತ್ತಿದ್ದ ಕಲಾರಸಿಕರ ಬಾಯಲ್ಲಿ ಅದ್ಭುತ ಎಂಬ ಉದ್ಗಾರವಾಯಿತು. ಕಲಾವಿದರ ಕೈಚಳಕದಿಂದ ಮೂಡಿಬಂದ ಚಿತ್ರಪಟಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಆಧುನಿಕ ಜೀವನ ಶೈಲಿಯಲ್ಲಿ ಮನುಷ್ಯನ ಹಲವು ಬಗೆಯ ತೊಳಲಾಟ ಕಲಾಕೃತಿಯಲ್ಲಿ ಮೂಡಿಬಂದಿತ್ತು. ಕಲಾವಿದರು ವಾಸ್ತವದ ಕುಂಚಕ್ಕೆ ಕಲ್ಪನೆಗೆ ಬಣ್ಣ ತುಂಬಿ ಅರ್ಥಗರ್ಭಿತ ಸಂದೇಶ ಸಾರಿದರು. ಒಂದೊಂದು ಕಲಾಕೃತಿಗಳು ಕಣ್ಮನ ಸೆಳೆಯುವಂತಿತ್ತು. ಕುಂಚ ಅಥವಾ ಪೆನ್ಸಿಲ್‌ನಿಂದ ಕಲಾರಸಿಕರ ಭಾವಚಿತ್ರಗಳ ಸ್ಥಳದಲ್ಲಿಯೇ ರಚಿಸಿಕೊಟ್ಟರು.

    ಕಣ್ಮನ ಸೆಳೆಯುವ ಕಲಾಕೃತಿಗಳು:
    ಖಾಲಿ ಬಾಟಲಿ, ಪೆನ್ನು, ರೀಫಿಲ್‌ಗಳ ಒಳಭಾಗದಲ್ಲಿ ತೆಗೆದ ಚಿತ್ರಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿದವು. ಖಾಲಿಯಾದ ಬಾಟಲ್, ಪೆನ್ನು, ರೀಫಿಲ್‌ಗಳ ಒಳಭಾಗದಲ್ಲಿ ಚಿತ್ರಗಳನ್ನು ಬಿಡಿಸುತ್ತಿರವುದು ಗಮನ ಸೆಳೆಯಿತು. 3 ಸಾವಿರ ಬಾಟಲಿಗಳ ಮೇಲೆ ಡಾ. ಬಿ.ಆರ್. ಅಂಬೇಡ್ಕರ್, ವಿರಾಟ್ ಕೊಹ್ಲಿ, ಎಪಿಜೆ ಅಬ್ದುಲ್ ಕಲಾಂ ಸೇರಿ ನೂರಾರು ಪ್ರಮುಖ ವ್ಯಕ್ತಿಗಳು, ನೆಚ್ಚಿನ ನಟರು, ಜ್ಞಾನಪೀಠ ಪುರಸ್ಕೃತರು, ಸ್ವಾತಂತ್ರ್ಯ ಹೋರಾಟಗಾರರು ಚಿತ್ರಗಳನ್ನು ಬಿಡಿಸರುವ ಕಲಾಕೃತಿಗಳು ಇದ್ದವು. ಸಾಂಪ್ರದಾಯಿಕ ಮೈಸೂರು ಶೈಲಿಯ ಕಲೆ, ತಂಜಾವೂರು, ರಾಜಸ್ಥಾನಿ, ಮಧುಬನಿ ಶೈಲಿ, ತೈಲ ಮತ್ತು ಜಲವರ್ಣಗಳಲ್ಲಿ ರಚಿಸಿರುವ ಚಿತ್ರಗಳು, ಆಕ್ರಿಲಿಕ್, ಗಾಜಿನ ಮೇಲೆ ಬಿಡಿಸಿರುವ ಚಿತ್ರ, ಕೊಲಾಜ್, ಲಿಥೋಗ್ರ್ಾ, ಡೂಡಲ್, ಎಂಬೋಸಿಂಗ್, ವಿಡಿಯೊ ಕಲೆ, ಗ್ರಾಫಿಕ್ ಕಲೆ, ಶಿಲ್ಪಕಲೆ, ರ್ಪಾರ್ಮೆನ್ಸ್ ಕಲೆ, ಮಿಶ್ರ ಮಾಧ್ಯಮ, ೆಟೋಗ್ರಫಿ ಸೇರಿ ಹಲವು ಬಗೆಯ ಕಲಾ ಪ್ರಕಾರದ ಚಿತ್ರಗಳು ಒಂದೇ ಸೂರಿನಡಿ ನೋಡುಗರ ಗಮನ ಸೆಳೆದವು. ಅಲ್ಲದೆ, ಕಪ್ಪು-ಬಿಳುಪಿನ ಚಿತ್ರಗಳು ನೋಡಲು ಚಿಕ್ಕಚಿಕ್ಕವಾದರೂ ತುಂಬಾ ಆಕರ್ಷಕವಾಗಿದ್ದವು. ಶಿಪೊರೆಕ್ಸ್ ಕಲ್ಲಿನ ಕಲೆಯ ಚಿತ್ರಗಳು ಗಮನ ಸೆಳೆಯುತ್ತಿದ್ದವು.

    ಶಿವಾನಂದ ವೃತ್ತದಿಂದ ಗುರುರಾಜ ಕಲ್ಯಾಣ ಮಂಟಪದವರೆಗೆ ಸ್ಟಿಲ್ ಬ್ರಿಡ್ಜ್‌ನ ತಳಭಾಗದಲ್ಲಿ ವಿಶೇಷಚೇತನರು ಮತ್ತು ಹಿರಿಯ ನಾಗರಿಕರಿಗಾಗಿ ಕಲಾಕೃತಿಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು. ತಿಂಡಿ-ತಿನಿಸು ಹಾಗೂ ಇತರ ಅಗತ್ಯ ಸಾಮಗ್ರಿಗಳ ಖರೀದಿ, ಕ್ಯಾಂಟೀನ್ ವ್ಯವಸ್ಥೆ ಮಾಡಲಾಗಿತ್ತು. ಚಿತ್ರಸಂತೆಯಲ್ಲಿ ಶಿವಾನಂದ ವೃತ್ತದ ಸಮೀಪದಿಂದ ವಿಂಡ್ಸರ್ ಮ್ಯಾನರ್ ಸೇತುವೆವರೆಗೆ 1,200 ಮಳಿಗೆಗಳು, ಉಳಿದ 300 ಮಳಿಗೆಗಳು ಸ್ಟಿಲ್ ಬ್ರಿಡ್ಜ್ ಕೆಳಗೆ ಹಾಗೂ ಸುತ್ತಮುತ್ತ ಇದ್ದವು. ಚಿತ್ರಗಳನ್ನು ಖರೀದಿಸುವವರಿಗೆ ಫೋನ್‌ಪೇ, ಗೂಗಲ್ ಪೇ ಜತೆಗೆ ಕೆನರಾ ಬ್ಯಾಂಕ್, ಎಸ್‌ಬಿಐ ಬ್ಯಾಂಕ್‌ನ ಎಟಿಎಂ ವ್ಯವಸ್ಥೆಯಿತ್ತು. 20 ಸ್ಥಳಗಳಲ್ಲಿ ಮೊಬೈಲ್ ಶೌಚಗೃಹ, ಅಗತ್ಯ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.

    ಚಿತ್ರಕಲಾ ಪರಿಷತ್ತಿಗೆ 50 ಲಕ್ಷ ರೂ.ಅನುದಾನ: ಸಿಎಂ ಸಿದ್ದರಾಮಯ್ಯ ಘೋಷಣೆ
    ಗಮನ ಸೆಳೆದ 12 ಲಕ್ಷದ ಮಧುರೈನ ವೆಂಕಟೇಶ್ವರ
    ತಮಿಳುನಾಡಿನ ಕಲಾವಿದ ಜೀವನ್ ವಿ.ಶಕ್ತಿವೇಲ್ ಎಂಬುವರು, ಕಲಾಕೃತಿಯಲ್ಲಿ ಬಿಡಿಸಿರುವ ಮಧುರೈನ ಶ್ರೀ ವೆಂಕಟೇಶ್ವರ ಸ್ವಾಮಿಯು ಕುದುರೆಯ ಮೇಲೆ ಕೂತು ಉತ್ಸವದಲ್ಲಿ ಸಾಗುತ್ತಿರುವ ದೃಶ್ಯ ಅದ್ಭುತವಾಗಿದೆ. ಬಂಗಾರ ಲೇಪಿತ ಕುದುರೆಯು ಮುಂದಿನ ಎರಡೂ ಕಾಲುಗಳನ್ನು ಎತ್ತಿ ಓಡುತ್ತಿರುವ ದೃಶ್ಯ ಆಕರ್ಷಕವಾಗಿದೆ. ಅದಕ್ಕೆ ಬಳಸಿದ ಹೂವಿನ ಹಾರಗಳು, ಭಕ್ತರ ದಂಡು, ಪೊಲೀಸರ ಕಾವಲು ಪಲ್ಲಕ್ಕಿ ಹೀಗೆ ಪ್ರತಿಯೊಂದು ದೃಶ್ಯಗಳೂ ಚಿತ್ರದಲ್ಲಿ ಆಕರ್ಷಕವಾಗಿದ್ದವು. ಇದರ ಬೆಲೆ ಬರೋಬ್ಬರಿ 12 ಲಕ್ಷ ರೂ. ಇದೆ. ಇದುವೇ ಚಿತ್ರಸಂತೆಯ ದುಬಾರಿ ಚಿತ್ರವಾಗಿ, ನೋಡುಗರ ಗಮನ ಸೆಳೆಯುತ್ತಿತ್ತು.

    ಬಾಹ್ಯಾಕಾಶ ವಿಜ್ಞಾನಿಗಳಿಗೆ ಅರ್ಪಣೆ:
    ಈ ವರ್ಷದ ಚಿತ್ರಸಂತೆಯನ್ನು ‘ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಭಾರತೀಯ ವಿಜ್ಞಾನಿಗಳಿಗೆ’ ಸಮರ್ಪಣೆ ಮಾಡಲಾಯಿತು. ಪರಿಷತ್ ಆವರಣದಲ್ಲಿ ಚಂದ್ರಯಾನ-3ರ ಮಾದರಿ ಪ್ರತಿಷ್ಠಾಪಿಸಲಾಯಿತು. ಚಂದ್ರಯಾನ-3ರ ಮಾದರಿ ಮುಂಭಾಗಲ್ಲಿ ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿ ಖುಷಿಪಟ್ಟರು. ಇಸ್ರೋಗೆ ಅಧ್ಯಕ್ಷರಾಗಿದ್ದವರ ಬಗ್ಗೆ ವಿವರಗಳನ್ನು ನಮೂದಿಸಲಾಯಿತು. 22 ರಾಜ್ಯಗಳ 1,500 ಕಲಾವಿದರು ಭಾಗಿಯಾಗಿದ್ದರು. ಅಂದಾಜು 40 ಸಾವಿರಕ್ಕೂ ಅಧಿಕ ಕಲಾಕೃತಿಗಳು ಪ್ರದರ್ಶನಕ್ಕೆ ಇಡಲಾಯಿತು. ಶಿವಾನಂದ ವೃತ್ತದ ಉಕ್ಕಿನ ಸೇತುವೆ ಕೆಳಗಿನ ಸ್ಥಳದಲ್ಲಿ ಅಂಗವಿಕಲರು, ಹಿರಿಯ ನಾಗರಿಕರಿಗೆ ಕಲಾಕೃತಿಗಳ ಮಾರಾಟ ಮತ್ತು ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.

    ಬಿಎಂಟಿಸಿಯಿಂದ ಫೀಡರ್ ಸೇವೆ
    ಚಿತ್ರಸಂತೆಗೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಭಾನುವಾರ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ 15 ರೂ. ವಿಶೇಷ ದರದಲ್ಲಿ ಪ್ರತಿ 10 ನಿಮಿಷಕ್ಕೆ ಒಂದರಂತೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಆನಂದರಾವ್ ಸರ್ಕಲ್, ಶಿವಾನಂದ ಸ್ಟೋರ್ ಮಾರ್ಗವಾಗಿ ವಿಧಾನಸೌಧಕ್ಕೆ ಹಾಗೂ ಮಂತ್ರಿಮಾಲ್ ಮೆಟ್ರೋ ನಿಲ್ದಾಣದಿಂದ ಸೆಂಟ್ರಲ್ ಟಾಕೀಸ್, ಲಿಂಕ್ ರಸ್ತೆ, ಶಿವಾನಂದ ಸ್ಟೋರ್ ಮಾರ್ಗವಾಗಿ ವಿಧಾನಸೌಧಕ್ಕೆ ಮೆಟ್ರೋ ಫೀಡರ್ ಸಾರಿಗೆ ಸೇವೆ ಒದಗಿಸಿತ್ತು.

    ಮಾರಾಟ ಕುಂಠಿತ:
    ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 1,500ಕ್ಕೂ ಅಧಿಕ ಕಲಾವಿದರು ರಚಿಸಿದ್ದ ಕಲಾಕೃತಿಗಳು ಹೇಳಿಕೊಳ್ಳವಷ್ಟೂ ಮಾರಾಟವಾಗಲಿಲ್ಲ. ಚಿಂತ್ರಸಂತೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡಿದ್ದರೂ ಮಳಿಗೆಗಳಿಗೆ ತೆರಳಿ ಕಲಾಕೃತಿ ಬಗ್ಗೆ ವಿಚಾರಿಸಿ ಖರೀದಿಸಿಲ್ಲ. ಕೆಲವರು ಮಾತ್ರ ತಮಗೆ ಇಷ್ಟವಾದ ಕಲಾಕೃತಿ ಖರೀದಿಸಿದರು. ಕಲಾವಿದರು ಕಡಿಮೆ ದರದಲ್ಲಿ ಕಲಾಕೃತಿಯನ್ನು ನೀಡಿರುವುದು ಕಂಡುಬಂತು. 20 ಸಾವಿರ ರೂ.ಬೆಲೆಯ ಕಲಾಕೃತಿಯನ್ನು ಅರ್ಧಕ್ಕರ್ಧ ನೀಡುತ್ತಿದ್ದರು ಎಂದು ಗ್ರಾಹಕರೊಬ್ಬರು ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts