More

    ಕೃಷಿ ಚಟುವಟಿಕೆಗೆ ರೈತರು ಅಣಿ: 1.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

    ವಿಜಯವಾಣಿ ವಿಶೇಷ ಬಳ್ಳಾರಿ
    ಬಿಸಿಲೂರು ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳ ಪೈಕಿ ಮೂರರಲ್ಲಿ ತೀವ್ರ ಮಳೆ ಅಭಾವ ಕಾಡುತ್ತಿದೆ. ಆದಾಗ್ಯೂ, ಮುಂಗಾರು ಹಂಗಾಮಿಗೆ ರೈತರು ಅಣಿಯಾಗಿದ್ದಾರೆ.

    ಬೀಜ ಮತ್ತ ರಸಗೊಬ್ಬರ ಪೂರೈಕೆಗೆ ಸಿದ್ಧತೆ

    ಈಗಾಗಲೇ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಮತ್ತ ರಸಗೊಬ್ಬರ ಪೂರೈಕೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 1.73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ 1.31 ಲಕ್ಷ ಹೆಕ್ಟೇರ್‌ನಲ್ಲಿ ಆಹಾರಧಾನ್ಯ ಬೆಳೆ, 7,100 ಹೆಕ್ಟೇರ್‌ನಲ್ಲಿ ಎಣ್ಣೆಕಾಳು ಬೆಳೆ, 35 ಸಾವಿರ ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಗುರಿ ಹಾಕಿಕೊಳ್ಳಲಾಗಿದೆ.

    ಭತ್ತದತ್ತ ರೈತರ ಚಿತ್ತ

    ಪ್ರಸಕ್ತ ಸಾಲಿನಲ್ಲಿ ಮುಂಗಾರಿಗೆ ಜಿಲ್ಲೆಯಲ್ಲಿ 85,100 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲು ರೈತರು ಸಿದ್ಧತೆ ನಡೆಸಿದ್ದಾರೆ. ಉಳಿದಂತೆ ಜೋಳ ಹಾಗೂ ರಾಗಿ ತಲಾ 8,355 ಹೆಕ್ಟೇರ್, ಮೆಕ್ಕೆಜೋಳ 15,291 , ಸಜ್ಜೆ 8,544, ಸಿರಿಧಾನ್ಯ 3,655, ತೊಗರಿ 8,565, ಶೇಂಗಾ 4,350, ಸೂರ್ಯಕಾಂತಿ 2,550 ಹೆಕ್ಟೇರ್ ಸೇರಿ ಒಟ್ಟು 1,31,097 ಹೆಕ್ಟೇರ್‌ನಲ್ಲಿ ಆಹಾರ ಧಾನ್ಯ ಬೆಳೆಯಲು ಭೂಮಿ ಸಜ್ಜಾಗಿದೆ. ಇನ್ನು ವಾಣಿಜ್ಯ ಬೆಳೆಗಳಾದ ಹತ್ತಿ 34,850, ಕಬ್ಬು 850 ಹೆಕ್ಟೇರ್‌ನಲ್ಲಿ ಬೆಳೆಯಲು ಸಿದ್ಧತೆ ನಡೆದಿದೆ.

    ವಾಡಿಕೆಗಿಂತ ಕಡಿಮೆ ಮಳೆ

    ಜಿಲ್ಲೆಯ ಐದು ತಾಲೂಕುಗಳ ಪೈಕಿ ಮೂರರಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಸಂಡೂರು ತಾಲೂಕಿನಲ್ಲಿ ಮೇ ಮಾಸಾಂತ್ಯಕ್ಕೆ 73.8 ಮಿಮೀ ಮಳೆ ಬೀಳಬೇಕಿತ್ತು. ಆದರೆ 49.9 ಮಿಮೀ ಮಳೆ ಸುರಿದಿದೆ. ಶೇ.32 ಮಳೆ ಕೊರತೆಯಾಗಿದೆ. ಸಿರಗುಪ್ಪ ತಾಲೂಕಿನಲ್ಲಿ 41.9 ಮಿಮೀ ಮಳೆ ಆಗಬೇಕಿತ್ತು. 26.6 ಮಿಮೀ ಮಳೆ ಆಗಿದ್ದು, ಶೇ.37 ವರುಣನ ಅವಕೃಪೆ ತೋರಿದ್ದಾನೆ. ಬಳ್ಳಾರಿ ತಾಲೂಕಿನಲ್ಲಿ 55.9 ಮಿಮೀ ಮಳೆ ಬೀಳಬೇಕಿತ್ತು. ಆದರೆ 50.3 ಎಂ.ಎಂ.ಮಳೆ ಆಗಿದೆ. ಕುರುಗೋಡು ಮತ್ತು ಕಂಪ್ಲಿ ಭಾಗದಲ್ಲಿ ವಾಡಿಕೆಗಿಂತ ಸ್ವಲ್ಪ ಹೆಚ್ಚಿನ ಮಳೆ ಆಗಿದ್ದು, ರೈತರಿಗೆ ಖುಷಿ ತರಿಸಿದೆ

    ಇದನ್ನೂ ಓದಿ: ಚುರುಕಾಯ್ತು ಕೃಷಿ ಚಟುವಟಿಕೆ: ಮುಂಗಾರು ಹಂಗಾಮಿಗೆ ಸಿದ್ಧತೆ


    ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು

    ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಈಗಾಗಲೇ ಕೃಷಿ ಇಲಾಖೆ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ. 1.24 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿತ್ತು, ಪ್ರಸ್ತುತ 47,266 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಅದರಲ್ಲಿ ಯೂರಿಯಾ 21,334 ಮೆ.ಟನ್, ಡಿಎಪಿ 7757, ಎಂಒಪಿ 940, ಎನ್‌ಪಿಕೆ 17,007, ಎಸ್‌ಎಸ್‌ಪಿ 226 ಮೆ.ಟನ್ ಲಭ್ಯವಿದೆ.

    ಅದರಲ್ಲಿ 10,989 ಮೆ.ಟನ್ ರಸಗೊಬ್ಬರ ವಿತರಿಸಲಾಗಿದೆ. ಇನ್ನು 6130 ಕ್ವಿಂಟಾಲ್ ಬಿತ್ತನೆ ಬೀಜ ಪೂರೈಸಲು ಬೇಡಿಕೆ ಸಲ್ಲಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಭತ್ತ 4038 ಕ್ವಿಂಟಾಲ್, ಜೋಳ 125, ರಾಗಿ 192, ಮೆಕ್ಕೆಜೋಳ 1017, ಸಜ್ಜೆ 41, ಶೇಂಗಾ 413, ಸೂರ್ಯಕಾಂತಿ 225 ಕ್ವಿಂಟಾಲ್ ಬಿತ್ತನೆ ಬೀಜವನ್ನು ರಿಯಾಯಿತಿ ಯೋಜನೆಯಡಿ ಪೂರೈಸಲು ಕೃಷಿ ಇಲಾಖೆಗೆ ಮಾಹಿತಿ ನೀಡಲಾಗಿದೆ.


    ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ರೈತರಿಗೆ ತೊಂದರೆ ಆಗದಂತೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಮಾಡಲು ರೈತ ಸಂಪರ್ಕ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ.
    ಡಾ.ಮಲ್ಲಿಕಾರ್ಜುನ ಜಂಟಿ ನಿರ್ದೇಶಕ, ಕೃಷಿ ಇಲಾಖೆ ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts