More

    ಫುಟ್‌ಬಾಲ್ ಪಂದ್ಯಾವಳಿಗಿಲ್ಲ ಆತಿಥೇಯ ತಂಡ

    ಮಂಡ್ಯ: ನಗರದಲ್ಲಿ ಶುಕ್ರವಾರದಿಂದ ಅಖಿಲ ಭಾರತ ಆಹ್ವಾನ ಫುಟ್‌ಬಾಲ್ ಪಂದ್ಯಾವಳಿ ಆರಂಭವಾಗಿದೆ. ಬಹುಶಃ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಆತಿಥೇಯ ತಂಡವೇ ಇಲ್ಲದ ದಾಖಲೆಗೆ ಈ ಪಂದ್ಯಾವಳಿ ಸಾಕ್ಷಿಯಾಗಿದೆ.
    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ, ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ಸರ್ ಎಂ.ವಿ.ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಕಪ್ ಪಂದ್ಯಾವಳಿ ಆರಂಭವಾಗಿದ್ದು, ಬೆಂಗಳೂರಿನ 4, ಮಂಗಳೂರಿನ 1, ಆಂಧ್ರಪ್ರದೇಶದ 2, ಕೇರಳದ 1 ತಂಡಗಳು ಮಾತ್ರ ಪಾಲ್ಗೊಂಡಿವೆ.
    ಮೈತ್ರಿ ಸರ್ಕಾರವಿದ್ದಾಗ ಎಚ್.ಡಿ.ಕುಮಾರಸ್ವಾಮಿ, ಸಿಎಂ ಕಪ್ ಆಯೋಜಿಸಲು 25ಲಕ್ಷ ರೂ. ಮಂಜೂರು ಮಾಡಿ, 10ಲಕ್ಷ ರೂ. ಬಿಡುಗಡೆಯಾಗಿತ್ತು. ಉಳಿದ ಹಣ ಈಗ ಬಿಡುಗಡೆ ಆಗಲಿದೆ. ಇಷ್ಟು ಹಣ ವ್ಯಯಿಸಿ ಕೇವಲ 8 ತಂಡಗಳನ್ನು ಆಹ್ವಾನಿಸಿ ಆತಿಥೇಯ ತಂಡವಿಲ್ಲದೆ ಪಂದ್ಯಾವಳಿ ನಡೆಸುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಸ್ಥಳೀಯ ಫುಟ್‌ಬಾಲ್ ಪ್ರೇಮಿಗಳನ್ನು ಕಾಡುತ್ತಿದೆ.

    13 ಕ್ಲಬ್‌ಗಳಿವೆ: ಜಿಲ್ಲಾ ಫುಟ್‌ಬಾಲ್ ಸಂಸ್ಥೆಯಡಿ 13 ಕ್ಲಬ್‌ಗಳು ನೋಂದಣಿಯಾಗಿವೆ. ಎಲ್ಲ ಕ್ಲಬ್‌ಗಳ ನಾಯಕರನ್ನೇ ಒಂದು ತಂಡವಾಗಿಸಿ ಆಡಿಸಿದ್ದರೆ, ಇಬ್ಬರು ಹೆಚ್ಚುವರಿ ಆಟಗಾರರು ಸಿಗುತ್ತಿದ್ದರು. ಆದರೆ, ಸಂಸ್ಥೆ ಏಕೆ ತನ್ನ ತಂಡವನ್ನು ಇಳಿಸಲಿಲ್ಲ ಎಂಬ ಅನುಮಾನ ಕಾಡುತ್ತಿದೆ. ಅಂದರೆ ಕ್ಲಬ್‌ಗಳು ನಾಮ್ ಕೇ ವಾಸ್ತೆಗೆ ಇದ್ದು, ಆಟಗಾರರು ಇಲ್ಲವೇ ಎಂಬ ಪ್ರಶ್ನೆಗೆ ಫುಟ್‌ಬಾಲ್ ಸಂಸ್ಥೆ ಮುಖ್ಯಸ್ಥರು ಉತ್ತರಿಸಬೇಕಿದೆ.

    ಸ್ವರ್ಣಕ್ಕೂ ಅವಕಾಶವಿಲ್ಲ: 2001ರಲ್ಲಿ ನೋಂದಣಿಯಾದ ಸ್ವರ್ಣ ಫುಟ್‌ಬಾಲ್ ಅಭಿವೃದ್ಧಿ ಸಂಸ್ಥೆಗೂ ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಅವಕಾಶ ಕಲ್ಪಿಸದಿರುವುದರ ಹಿಂದೆ ರಾಜಕೀಯವಿದೆ ಎನ್ನಲಾಗುತ್ತಿದೆ.
    ಸದ್ಯ ಮಂಡ್ಯ ಜಿಲ್ಲಾ ಫುಟ್‌ಬಾಲ್ ಅಭಿವೃದ್ಧಿ ಸಂಸ್ಥೆಯಾಗಿರುವ ಸ್ವರ್ಣ ಪುಟ್‌ಬಾಲ್ ಅಕಾಡೆಮಿ ಜಿಲ್ಲೆಯಲ್ಲಿ ಫುಟ್‌ಬಾಲ್ ಆಟಗಾರರನ್ನು ಬೆಳೆಸಲು ವಾರ್ಷಿಕ 1.30 ಲಕ್ಷ ರೂ. ಖರ್ಚು ಮಾಡುತ್ತಿದೆ.
    ಇದರಡಿ ನೇತಾಜಿ, ಮಂಡ್ಯ ರೆಡ್, ಎಸ್.ಡಿ.ಜಯರಾಮ್, ಸ್ವರ್ಣ, ಬೆನಕ ಪುಟ್‌ಬಾಲ್ ಕ್ಲಬ್‌ಗಳಿದ್ದು, ಎಲ್ಲ ಕ್ಲಬ್‌ಗಳಲ್ಲೂ ನುರಿತ ಆಟಗಾರರಿದ್ದಾರೆ. ಫುಟ್‌ಬಾಲ್ ಅಭಿವೃದ್ಧಿ ಸಂಸ್ಥೆಯಡಿ ಪಳಗಿದ ಆಟಗಾರ ಸುನೀಲ್, 16 ವಯೋಮಿತಿಯ ಭಾರತ ತಂಡವನ್ನು ಪ್ರತಿನಿಧಿಸಿ ಇಂಗ್ಲೆಂಡ್‌ನಲ್ಲಿ ಆಡಿದ್ದಾನೆ.
    ಮೂವರು ಕೋಚ್‌ಗಳಿದ್ದು, ಇಲ್ಲಿ ತರಬೇತಿ ಪಡೆದ ನಾಲ್ವರು ಹೊರ ಜಿಲ್ಲೆಯಲ್ಲಿ ಕೋಚ್‌ಗಳಾಗಿದ್ದಾರೆ. 10ಕ್ಕೂ ಹೆಚ್ಚು ಆಟಗಾರರು ಕ್ರೀಡೆ ಕೋಟಾದಡಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ಹಾಲಿ 130 ಆಟಗಾರರು ತರಬೇತಿ ಪಡೆಯುತ್ತಿದ್ದಾರೆ.

    ಉತ್ತಮ ತಂಡವಿದೆ: ಜಿಲ್ಲಾ ಫುಟ್‌ಬಾಲ್ ಅಭಿವೃದ್ಧಿ ಸಂಸ್ಥೆ ಉತ್ತಮ ತಂಡವನ್ನು ಹೊಂದಿದ್ದು, ಮಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ದಸರಾ ಕ್ರೀಡಾಕೂಡದಲ್ಲಿ 4ಬಾರಿ 2ನೇ ಸ್ಥಾನ ಗಳಿಸಿದೆ. 2008ರಿಂದ ಮಂಡ್ಯ ಜಿಲ್ಲಾ ಲೀಗ್‌ನಲ್ಲಿ ಮೊದಲ, 2ನೇ ಸ್ಥಾನಗಳನ್ನು ಕಾಯಂ ಆಗಿ ಉಳಿಸಿಕೊಂಡು ಬಂದಿದೆ.
    ವಿಶ್ವವಿದ್ಯಾಲಯದ ತಂಡದಲ್ಲಿ ಪ್ರತಿ ವರ್ಷ 5 ಆಟಗಾರರು ಸ್ಥಾನ ಗಿಟ್ಟಿಸುತ್ತಾರೆ. 2016ರಲ್ಲಿ 9 ಆಟಗಾರರು ಆಡಿದ್ದರು. ಮೂರು ಬಾರಿ 17 ವಯೋಮಿತಿಯ ಗ್ರಾಮೀಣ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದೆ. 2001-2016ರ ತನಕ ಇಬ್ಬರು 17 ವಯೋಮಿತಿಯ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ.

    ಪ್ರತಿವರ್ಷ ನಮ್ಮ ಸಂಸ್ಥೆಯಿಂದ ರಾಜ್ಯಮಟ್ಟದ ಕಾಲೇಜು, ಪ್ರೌಢಶಾಲೆ ಪಂದ್ಯಾವಳಿ ಆಯೋಜಿಸುತ್ತೇವೆ. 2015ರಲ್ಲಿ ದಕ್ಷಿಣ ಭಾರತ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಿದ್ದು, ಅಂದು ಕರ್ನಾಟಕ ಪೊಲೀಸ್ ತಂಡ ಪ್ರಥಮ, ತಮಿಳುನಾಡಿನ ಪೋಸ್ಟಲ್ ತಂಡ ದ್ವಿತೀಯ ಬಹುಮಾನ ಗಳಿಸಿದ್ದವು. ನಮ್ಮ ತಂಡಕ್ಕೆ ಅವಕಾಶ ಕಲ್ಪಿಸದಿರುವುದು ನೋವು ತಂದಿದೆ.
    ವೆಂಕಟ್ ಮಂಡ್ಯ ಜಿಲ್ಲಾ ಫುಟ್‌ಬಾಲ್ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ

    ಇಡೀ ರಾಜ್ಯದಲ್ಲೇ ಎಲ್ಲಿಯೂ ಉಚಿತವಾಗಿ ತರಬೇತಿ ನೀಡುವುದಿಲ್ಲ. ನಮ್ಮ ಸಂಸ್ಥೆ ಫುಟ್‌ಬಾಲ್ ಬೆಳೆಸುವ ಸಲುವಾಗಿ ಆಟಗಾರರಿಂದ ಯಾವುದೇ ಶುಲ್ಕ ಪಡೆಯದೆ ಶೂ, ಟಿ ಶರ್ಟ್ ಕೊಟ್ಟು ತರಬೇತಿ ನೀಡುತ್ತೇವೆ. 8 ವರ್ಷದಿಂದ ಉಚಿತವಾಗಿ ಬೇಸಿಗೆ ಶಿಬಿರ ಹಮ್ಮಿಕೊಂಡು ಬರುತ್ತಿದ್ದೇವೆ. ನಮ್ಮ ತಂಡಕ್ಕೆ ಅವಕಾಶ ನೀಡದಿರಲು ಕಾರಣವೇನೆಂಬ ಪ್ರಶ್ನೆ ಕಾಡುತ್ತಿದೆ.
    ಆಟೋ ನಾಗರಾಜು ಮಂಡ್ಯ ಜಿಲ್ಲಾ ಫುಟ್‌ಬಾಲ್ ಅಭಿವೃದ್ಧಿ ಸಂಸ್ಥೆ ಕಾರ್ಯಾಧ್ಯಕ್ಷ

    ನಮ್ಮಲ್ಲಿ ಆ ತಂಡಗಳನ್ನು ಎದುರಿಸುವ ತಂಡವಿಲ್ಲ. ಆದ್ದರಿಂದ ತಂಡವನ್ನು ಇಳಿಸಿಲ್ಲ. ಜಿಲ್ಲಾ ಫುಟ್‌ಬಾಲ್ ಅಭಿವೃದ್ಧಿ ಸಂಸ್ಥೆ ನೋಂದಣಿಯಾಗಿಲ್ಲ. ಆದ್ದರಿಂದ ಅದರ ತಂಡಕ್ಕೆ ಆಹ್ವಾನ ನೀಡಿಲ್ಲ. ರಾಜ್ಯ ಮಟ್ಟದ ಪಂದ್ಯಾವಳಿಗೆ ಆತಿಥೇಯ ತಂಡಗಳಿಗೆ ಅವಕಾಶ ನೀಡಲಾಗುವುದು.
    ಚಂದ್ರಶೇಖರ್ ಜಿಲ್ಲಾ ಪುಟ್‌ಬಾಲ್ ಸಂಸ್ಥೆ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts