More

    ಕರಾವಳಿಯ ಮೂವರಿಗೆ ಜಾನಪದ ಗೌರವ

    ಮಂಗಳೂರು: ಕರ್ನಾಟಕ ಜಾನಪದ ಅಕಾಡೆಮಿ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಅವಿಭಜಿತ ದ.ಕ. ಜಿಲ್ಲೆಗೆ ಒಟ್ಟು ಮೂರು ಪ್ರಶಸ್ತಿಗಳು ಸಂದಿವೆ. ಡಾ.ಜೀ.ಶಂ.ಪ. ಜಾನಪದ ತಜ್ಞ ಪ್ರಶಸ್ತಿಗೆ ಸ್ತ್ರೀವಾದಿ ಚಿಂತಕಿ, ಸಂಸ್ಕೃತಿ ವಿಮರ್ಶಕಿ, ಜಾನಪದ ವಿದ್ವಾಂಸರಾದ ಮಂಗಳೂರಿನ ಡಾ.ಗಾಯತ್ರಿ ನಾವಡ ಹಾಗೂ ವಾರ್ಷಿಕ ಪ್ರಶಸ್ತಿ ಗೌರವಗಳಿಗೆ ಬಂಟ್ವಾಳ ತಾಲೂಕಿನ ಗೋಪಾಲಕೃಷ್ಣ ಬಂಗೇರ ಮದ್ವ (ಗೊಂಬೆ ಕುಣಿತ)ಮತ್ತು ಉಡುಪಿಯ ರಮೇಶ್ ಕಲ್ಮಾಡಿ (ಕರಗ ಕೋಲಾಟ) ಪಾತ್ರರಾಗಿದ್ದಾರೆ.

    ಡಾ.ಗಾಯತ್ರಿ ನಾವಡ
    ಡಾ.ಗಾಯತ್ರಿ ನಾವಡ ಸಾಂಸ್ಕೃತಿಕ ಸಬಲೀಕರಣ, ಸ್ತ್ರೀವಾದಿ ಜಾನಪದದಂತಹ ಹೊಸ ಶೋಧಗಳನ್ನು ಸಂಶೋಧನಾ ಲೋಕಕ್ಕೆ ನೀಡಿದವರು. ಕರಾವಳಿಯ ಮಾತೃರೂಪಿ ಸಂಸ್ಕೃತಿಯ ತುಳು, ಕನ್ನಡ ಮೌಖಿಕ ಪರಂಪರೆಯ ಬಗ್ಗೆ ಸ್ತ್ರೀವಾದಿ ದೃಷ್ಟಿಕೋನದಿಂದ ಸಂಶೋಧನೆ ನಡೆಸಿದ ಮೊದಲಿಗರು. ಉಡುಪಿಯ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಸಂಶೋಧಕಿಯಾಗಿ ಕಾರ್ಯನಿರ್ವಹಿಸಿದ ಅವರು ಅನೇಕ ಸಂಶೋಧನಾ ಯೋಜನೆಗಳನ್ನು ಪೂರೈಸಿದ್ದಾರೆ.
    ಮಣಿಪಾಲ ವಿಶ್ವವಿದ್ಯಾಲಯದಿಂದ ಡಾ.ಟಿ.ಎಂ.ಎ.ಪೈ ರಾಷ್ಟ್ರೀಯ ಫೆಲೋಶಿಪ್ ಪಡೆದು ಮೂರು ವರ್ಷ ಸಿರಿಪಂಥದ ಬಗ್ಗೆ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಹಂಪಿ ಕನ್ನಡ ವಿವಿ ಸಿಂಡಿಕೇಟ್ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಾನಪದ ವಿವಿ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 25ಕ್ಕೂ ಅಧಿಕ ಕೃತಿ ರಚಿಸಿದ್ದು, ಡಾ.ಪೀಟರ್ ಕ್ಲಾಸ್ ಮಹಿಳಾ ಜಾನಪದ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಪುಸ್ತಕ ಬಹುಮಾನ, ಶಾಶ್ವತಿ ಸದೋದಿತ ಪ್ರಶಸ್ತಿ, ಕಿತ್ತೂರು ಚನ್ನಮ್ಮ ಸಾಹಿತ್ಯ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಗಳಿಸಿದ್ದಾರೆ.

    ಗೋಪಾಲಕೃಷ್ಣ ಬಂಗೇರ ಮದ್ವ
    ಬಂಟ್ವಾಳ: ಗೋಪಾಲಕೃಷ್ಣ ಬಂಗೇರ ಮದ್ವ 25 ವರ್ಷಗಳಿಂದ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ಸಕ್ರಿಯ ಕಲಾವಿದನಾಗಿದ್ದು, ಇದುವರೆಗೂ ಕೀಲು ಕುದುರೆಯ ರಾಜವೇಷಧಾರಿಯಾಗಿದ್ದಾರೆ.
    ಕಾವಳಪಡೂರು ಗ್ರಾಮದ ಮಧ್ವ ನಿವಾಸಿಗಳಾದ ಜಾರಪ್ಪ ಪೂಜಾರಿ – ಮೋನಮ್ಮ ದಂಪತಿ ಪುತ್ರ ಗೋಪಾಲಕೃಷ್ಣ ಗ್ರಾಮೀಣ ಪ್ರದೇಶದ ಸಾಹಸ ಮನರಂಜನೆಯ ಸೈಕಲ್ ಬ್ಯಾಲೆನ್ಸ್ ಮೂಲಕ ಸಾಮಾಜಿಕ ಬದುಕಿಗೆ ಮುನ್ನುಡಿ ಬರೆದವರು. ಬಳಿಕ ಬೆಳ್ತಂಗಡಿಯ ಶೆಟ್ಟಿ ಆರ್ಟ್ಸ್‌ನಲ್ಲಿ ಕೆಲವು ವರ್ಷ ತೊಡಗಿಸಿಕೊಂಡಿದ್ದು, ಬಳಿಕ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗಕ್ಕೆ ಜತೆಯಾಗಿದ್ದರು.
    ಮೈಸೂರು ದಸರಾ, ಮಂಗಳೂರು ದಸರಾ, ಹಂಪಿ ಉತ್ಸವ, ವಿಶ್ವ ತುಳು ಸಮ್ಮೇಳನ, ವಿಶ್ವ ನುಡಿಸಿರಿ ವಿರಾಸತ್, ವಿಶ್ವ ಕನ್ನಡ ಸಮ್ಮೇಳನ, ವಿಶ್ವ ಕೊಂಕಣಿ ಸಮ್ಮೇಳನ, ಮುಂಬೈ, ಕೇರಳ ಸಹಿತ ನಾಡಿನ ನಾನಾ ಕಡೆ ನಡೆದ ಸಾವಿರಕ್ಕೂ ಮಿಕ್ಕಿ ಪ್ರದರ್ಶನಗಳಲ್ಲಿ ರಾಜವೇಷಧಾರಿಯಾಗಿ ಜನಮನ್ನಣೆ ಗಳಿಸಿದ್ದಾರೆ. ರಂಗ್, ಒರಿಯರ್ದೊರಿ ಅಸಲ್ ತುಳು ಚಿತ್ರಗಳು, ಕನ್ನಡ ಧಾರಾವಾಹಿ ಸಹಿತ ಸಿನಿಮಾಗಳಲ್ಲಿ ನಡೆದ ಗೊಂಬೆ ಕುಣಿತಗಳ ಪ್ರದರ್ಶನದಲ್ಲೂ ರಾಜನಾಗಿ ಮಿಂಚಿದವರು.
    ‘ಇಷ್ಟು ವರ್ಷಗಳ ಕಲಾಸೇವೆಗೆ ಪ್ರತಿಫಲವಾಗಿ ಪ್ರಶಸ್ತಿ ಬಂದಿರುವುದು ಖುಷಿ ನೀಡಿದೆ’ ಎಂದು ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ.

    ರಮೇಶ್ ಕಲ್ಮಾಡಿ
    ಉಡುಪಿ: ತುಳು, ಕನ್ನಡ ನಾಡಿನ ವಿಭಿನ್ನ ಜಾನಪದ ಕಲೆಗಳನ್ನು ಮೈಗೂಡಿಸಿಕೊಂಡು 35 ವರ್ಷಗಳಿಂದ ಜಾನಪದ ಹಿರಿಮೆ ಸಾರುತ್ತಿರುವವರು ಹಿರಿಯ ಕಲಾವಿದ, ನಿವೃತ್ತ ಶಿಕ್ಷಕ ರಮೇಶ್ ಕಲ್ಮಾಡಿ.
    ಲಕ್ಷ್ಮಣ- ಸೀತು ಕಲ್ಮಾಡಿ ದಂಪತಿ ಪುತ್ರ ರಮೇಶ್ ಶಾಲಾ ದಿನಗಳಲ್ಲೇ ಜಾನಪದ ಕಲೆ ಒಲವು ಮೂಡಿಸಿಕೊಂಡವರು. ಜಾನಪದ ಶಿಕ್ಷಕ, ಸಂಘಟಕ, ಕಲಾವಿದ, ನಿರ್ದೇಶಕರಾಗಿ ಪ್ರಸಿದ್ಧರು. ವಿದ್ಯಾರ್ಥಿ ಜೀವನದಿಂದಲೇ ಯುವಜನ ಮೇಳದಲ್ಲಿ ಜಿಲ್ಲಾ, ರಾಜ್ಯಮಟ್ಟದಲ್ಲಿ ಭಾಗವಹಿಸಿ, ಜಾನಪದ ಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿದವರು.
    ತುಳುನಾಡಿನ ಜಾನಪದ ಕಲೆಗಳಾದ ಕಂಗೀಲು, ಆಟಿ ಕಳಂಜ, ಮಹಂಕಾಳಿ, ಚೆಲ್ಲು ಕುಣಿತ, ಪಿಲಿಪಂಜು ಕುಣಿತ, ಮಾಜಿರ ಕುಣಿತ, ಕನ್ನಡ ಜಾನಪದ ಕಲೆಗಳಾದ ಕಂಸಾಳೆ, ವೀರಗಾಸೆ, ಕರಗ ಕೋಲಾಟ, ಸೋಮನ ಕುಣಿತ, ಪೂಜಾ ಕುಣಿತದ ಪರಿಣಿತ ಕಲಾವಿದ- ಶಿಕ್ಷಕರಾಗಿದ್ದಾರೆ. 1972ರಿಂದ ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇವರು, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ. ಜಾನಪದ ಪರಿಷತ್ತಿನ ಕಾರ್ಯಕಾರಿ ಸಮಿತಿ, ತುಳು ಪಠ್ಯ ರಚನಾ ಸಮಿತಿ ಸದಸ್ಯ. ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಣ್ಣರ ಅಂಗಳದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts