ಚಿಕ್ಕಮಗಳೂರು: ತಾಯಂದಿರು ಮಕ್ಕಳನ್ನು ಯಾವುದೇ ಕೋಮು ಪ್ರಚೋದನೆಗೆ ಒಳಗಾಗದಂತೆ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಸಾಹಿತಿ ಐ.ಎನ್.ಮುಕುಂದರಾಜ್ ಹೇಳಿದರು.
ನಗರದ ಕುವೆಂಪು ವಿದ್ಯಾನಿಕೇತನ ಶಾಲೆ ವಾರ್ಷಿಕೋತ್ಸವ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಭವಿಷ್ಯ ಮುಖ್ಯ. ಹಾಗಾಗಿ ಅವರು ಯಾವುದೇ ಪ್ರಚೋದನೆಗಳಿಗೆ ಒಳಗಾಗದಂತೆ ಜಾಗರೂಕರಾಗಿ ನೋಡಿಕೊಳ್ಳಬೇಕು ಮತ್ತು ಕನ್ನಡದ ಪರಂಪರೆಗೆ ತಕ್ಕ ಹಾಗೆ ಅವರನ್ನು ಬೆಳೆಸಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
ರಾಷ್ಟ್ರಕವಿ ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿ ಅವರಂತೆ ಯೋಚಿಸುವ, ಬರೆಯುವ ಕವಿಗಳು ಜಿಲ್ಲೆಯಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೇರೆ ಧರ್ಮವನ್ನು ನಾವು ಸಹಿಸಿಕೊಂಡಾಗ ಮಾತ್ರ ಸೃಜನಶೀಲ ಮಾನವೀಯ ಜಗತ್ತು ನಿರ್ಮಾಣವಾಗುತ್ತದೆ. ಮಾನವೀಯ ಮೌಲ್ಯಗಳು ಕಳೆದುಹೋದ ಜಾಗದ ಯುವಜನರ ಸೃಜನಶೀಲ ಪ್ರತಿಭೆ ಬತ್ತಿ ಹೋಗುತ್ತದೆ ಎಂದು ಹೇಳಿದರು.
ಶಾರದಾ ಮಠದ ಅಧ್ಯಕ್ಷೆ ಶ್ರೀ ಪ್ರವ್ರಾಜಿಕಾ ಶುಭವ್ರತ ಪ್ರಾಣಾ ಮಾತಾಜಿ ಮಾತನಾಡಿ, ಯಾವ ದಾರಿಯಲ್ಲಿ ನಾವು ಸಾಗಿದರೆ ಬದುಕು ಉಜ್ವಲವಾಗುತ್ತದೆ ಎಂಬುದನ್ನು ಮಕ್ಕಳು ಮೊದಲೇ ಅರಿತು ನಡೆಯಬೇಕು. ಸಾಧನೆ ಮಾಡಬೇಕಾದರೆ ಅಂತಃಶಕ್ತಿ ಮತ್ತು ಇಚ್ಛಾಶಕ್ತಿ, ಛಲ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಸಂದೇಶಗಳು ಮತ್ತು ಬದುಕು ಇಂದಿನ ಮಕ್ಕಳಿಗೆ ಆದರ್ಶವಾಗಬೇಕು. ಅದರ ಬೆಳಕಿನಡಿಯಲ್ಲಿ ಮಕ್ಕಳು ಸಾಗಬೇಕು ಎಂದರು.
ಕುವೆಂಪು ವಿದ್ಯಾನಿಕೇತನದ ಕಾರ್ಯದರ್ಶಿ ಕೆ.ಸಿ.ಶಂಕರ್, ಉಪ ಪ್ರಾಚಾರ್ಯೆ ಶೆಮ್ಮಿ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಸಾಹಿತಿ ಜಗದೀಶ್, ಪ್ರಾಚಾರ್ಯ ರಾಘವೇಂದ್ರ, ಮುಖ್ಯಶಿಕ್ಷಕಿ ಹೊನ್ನಾಂಬಿಕೆ, ಶಿಕ್ಷಕರಾದ ವಸುಧಾ, ಬಿಂದು ಇದ್ದರು.