More

    ಫ್ಲೈಓವರ್ ನಿರ್ಮಾಣಕ್ಕೆ ಗಡ್ಕರಿ ಚಾಲನೆ

    ಹುಬ್ಬಳ್ಳಿ: ರಾಣಿ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಶುಕ್ರವಾರ ಕೇಂದ್ರ ಭೂಸಾರಿಗೆ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ನಿತಿನ್ ಗಡ್ಕರಿ ಶಿಲಾನ್ಯಾಸ ನೆರವೇರಿಸುವ ಮೂಲಕ ಈ ಭಾಗದ ಜನರ ದಶಕದ ಕನಸು ನನಸಾಗಿಸಲು ಮುನ್ನುಡಿ ಬರೆದರು.

    ಹುಬ್ಬಳ್ಳಿಯ ಟ್ರಾಫಿಕ್ ಐಲ್ಯಾಂಡ್ ಎಂದು ಕರೆಸಿಕೊಳ್ಳುವ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಸದಾ ಟ್ರಾಫಿಕ್ ಜಾಮ್ ಅಪಘಾತಗಳಿಂದಾಗಿ ‘ಟೆರಫಿಕ್ ಐಲ್ಯಾಂಡ್’ ಎಂದು ಹೇಳುವಂತಾಗಿತ್ತು. ಅದಕ್ಕೆ ಸೂಕ್ತ ಪರಿಹಾರ ನೀಡುವ ದಿಸೆಯಲ್ಲಿ ಸುಮಾರು 322 ಕೋಟಿ ರೂ. ವೆಚ್ಚದ ಸುಸಜ್ಜಿತ, ಅತ್ಯಾಧುನಿಕ ಫ್ಲೈಓವರ್ ನಿರ್ವಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಶುಕ್ರವಾರ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ 25 ಕೋಟಿ ರೂಪಾಯಿ ವೆಚ್ಚದ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪದ ಬಳಿಯ ರಾಷ್ಟ್ರೀಯ ಹೆದ್ದಾರಿ 63ರ ಚತುಷ್ಪಥ ರಸ್ತೆ (2.77 ಕಿ.ಮೀ.) ಹಾಗೂ ಸಣ್ಣ ಸೇತುವೆ ನಿರ್ವಣಕ್ಕೂ ಹಸಿರು ನಿಶಾನೆ ತೋರಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರ ಮಧ್ಯೆ ರಾಜ್ಯ ಹೆದ್ದಾರಿಯಾಗಿ ಮಾರ್ಪಟ್ಟಿರುವ ಈ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಅನುದಾನ ನೀಡಲು ತಾಂತ್ರಿಕ ಅಡಚಣೆ ಇತ್ತು. ಸಚಿವ ಪ್ರಲ್ಹಾದ ಜೋಶಿ ಅವರೊಂದಿಗಿನ ಬಾಂಧವ್ಯ, ಪ್ರೀತಿಯಿಂದಾಗಿ ಇದಕ್ಕೆ ಮಂಜೂರಿ ನೀಡಿದ್ದೇನೆ. ಈ ಕೆಲಸ ಪಟ್ಟು ಹಿಡಿದು ಮಾಡಿಸಿಕೊಳ್ಳುವುದರಲ್ಲಿ ಜೋಶಿ ಚಾಣಾಕ್ಷತನ ಮೆರೆದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ಉತ್ತರ ಕರ್ನಾಟಕದಲ್ಲಿ ಈಗಾಗಲೇ ಘೋಷಿಸಲಾಗಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಬಾಕಿ ಕಾಮಗಾರಿಗಳನ್ನು ಶೀಘ್ರ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಕರ್ನಾಟಕದಲ್ಲಿ ಸಿಆರ್​ಎಫ್ ಅಡಿ ಸುಮಾರು 3ರಿಂದ 4 ಸಾವಿರ ಕೋಟಿ ರೂ. ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಅವುಗಳನ್ನು ರಾಜ್ಯ ಸರ್ಕಾರ ಸಾಫ್ಟ್ ಲೋನ್ ಪಡೆದುಕೊಂಡು ಮುಗಿಸಬೇಕು. ನಂತರದಲ್ಲಿ ಅದನ್ನು ಕೇಂದ್ರ ಸರ್ಕಾರ ಭರಿಸಲಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಎಲ್ಲೆಲ್ಲಿ ಭೂಸ್ವಾಧೀನ ಅಗತ್ಯ ಇದೆಯೋ ಅಲ್ಲಿ ಮಾಡಿಕೊಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹಕಾರ ನೀಡಬೇಕು ಎಂದು ಕೇಂದ್ರ ಸಚಿವ ಗಡ್ಕರಿ ಮನವಿ ಮಾಡಿದರು.

    ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಶಂಕರಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts