More

  ಚರಕ ಸಂಸ್ಥೆಯಿಂದ ಗೋಶಾಲೆ ನಿರ್ಮಾಣ

  ಸಾಗರ: ಗೋಶಾಲೆ ನಿರ್ಮಾಣ ಸಂಸ್ಕೃತಿ ಕಟ್ಟುವ ಕೆಲಸವಾಗಿದ್ದು, ಚರಕ ಹೊಸ ಸ್ವರೂಪದತ್ತ ಮುನ್ನಡೆದಿದೆ. ಮಹಾತ್ಮ ಗಾಂಧೀಜಿ ಅವರ ಗ್ರಾಮ ರಾಜ್ಯದ ಪರಿಕಲ್ಪನೆಯನ್ನು ಸಹಕಾರಗೊಳಿಸುವಲ್ಲಿ ಚರಕ ಸಂಸ್ಥೆಯ ಪ್ರಯತ್ನ ದೊಡ್ಡದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.

  ಸಮೀಪದ ಹೊನ್ನೇಸರ ಶ್ರಮಜೀವಿ ಆಶ್ರಮದ ಆವರಣದಲ್ಲಿ ಹೊಸದಾಗಿ ನಿರ್ಮಾಣಗೊಂಡ ಗೋಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ಇದುವರೆಗೂ ಚರಕ ಕೈಮಗ್ಗ ಉತ್ಪನ್ನಗಳಿಗೆ ಸಂಬಂಧಿಸಿದ ಕೆಲಸಗಳನ್ನಷ್ಟೇ ಮಾಡುತ್ತಿತ್ತು. ಈಗ ಅದು ಸಮುದಾಯದೊಟ್ಟಿಗೆ ಕೆಲಸ ಮಾಡುವ ಗೋಶಾಲೆಯಂತಹ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ತನ್ನನ್ನು ತೊಡಗಿಸಿಕೊಳ್ಳುತ್ತಿರುವುದು ಪ್ರಶಂಸನೀಯ. ಗೋವುಗಳ ಸಾಕುವಿಕೆ ಮತ್ತು ಸಂರಕ್ಷಣೆಯಿಂದ ರೈತಾಪಿ ಬದುಕು ಹಸನಾಗುತ್ತದೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ಜಾನುವಾರು ಸಾಕುವ ಪ್ರವೃತ್ತಿ ಕಡಿಮೆ ಆಗುತ್ತಿದೆ. ಇದರ ಮಹತ್ವವನ್ನು ಮತ್ತೆ ಪರಿಚಯಿಸಬೇಕಾಗಿದೆ ಎಂದರು.
  ಕರ್ಣಾಟಕ ಬ್ಯಾಂಕ್‌ನ ಎಜಿಎಂ ನಾಗರಾಜ್ ಮಾತನಾಡಿ, ಚರಕ ಎಂದಾಕ್ಷಣ ಬಟ್ಟೆ ಉತ್ಪನ್ನದ ಕಾರ್ಖಾನೆ ಎಂಬ ಮಾತಿತ್ತು. ಈಗ ಅದು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಮುಂದಾಗಿದೆ. ಇದೊಂದು ಮಾದರಿ ಕೆಲಸ. ಚರಕ ಜನಮುಖಿ, ಜೀವನ್ಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದರು.
  ನಮ್ಮ ಬ್ಯಾಂಕ್ ಯಾವಾಗಲೂ ಸಮಾಜಮುಖಿ ಕೆಲಸಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಅದೇ ರೀತಿಯಲ್ಲಿ ಚರಕದ ಸಮಾಜಮುಖಿ ಚಟುವಟಿಕೆಗಳಿಗೆ ತನ್ನ ಪರಿಮಿತಿ ಒಳಗೆ ಕೈಜೋಡಿಸಲು ಸಿದ್ಧವಿದೆ ಎಂದು ಭರವಸೆ ನೀಡಿದರು.
  ಪ್ರಾಸ್ತಾವಿಕ ಮಾತನಾಡಿದ ಚರಕದ ಪ್ರಸನ್ನ, ಗಾಂಧೀಜಿಯ ಗ್ರಾಮ ಸ್ವರಾಜ್ಯದ ನಿರ್ಮಾಣದ ನಿಟ್ಟಿನಲ್ಲಿ ಇಲ್ಲಿನ ಪ್ರತಿಯೊಂದು ಚಟುವಟಿಕೆಗಳು ನಡೆಯುತ್ತಿವೆ. ಗೋಶಾಲೆ ನಿರ್ಮಾಣ ಮೊದಲ ಘಟ್ಟವಾಗಿದೆ. ಇಲ್ಲಿ ಗ್ರಾಮೀಣ ಗುಡಿ ಕೈಗಾರಿಕೆಗಳ ಕುರಿತಂತೆ ನಿರಂತರವಾಗಿ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದರು.
  ಕರ್ಣಾಟಕ ಬ್ಯಾಂಕಿನ ಸ್ಥಳೀಯ ಶಾಖೆಯ ವ್ಯವಸ್ಥಾಪಕ ವಾಮನ ಹೆಬ್ಬಾರ್, ಗ್ರಾಮ ಪಂಚಾಯಿತಿ ಸದಸ್ಯೆ ಸುಮಾ, ಚರಕ ಸಿಇಒ ಪೀಟರ್, ಉಪಾಧ್ಯಕ್ಷೆ ಮಹಾಲಕ್ಷ್ಮಮ್ಮ, ನೀನಾಸಂ ಪ್ರಾಚಾರ್ಯ ಡಾ. ಎಂ.ಗಣೇಶ ಇದ್ದರು.

  70:30 ಆರ್ಥಿಕತೆಯ ಕಲ್ಪನೆಯ ಆಧಾರದಲ್ಲೇ ಇಲ್ಲಿನ ಪ್ರತಿ ಚಟುವಟಿಕೆಗಳು ನಡೆಯುತ್ತವೆ. ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನವನ್ನೇ ಬಳಸಿ ಚರಕದ ಹೆಣ್ಣು ಮಕ್ಕಳು ಗೋಶಾಲೆ ನಿರ್ಮಿಸಿದ್ದಾರೆ. ಗೋಶಾಲೆಯ ದನಗಳಿಗೆ ಇಲ್ಲಿ ಪ್ರತಿ ನಿತ್ಯ ಮೇವು, ನೀರು ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.
  ದೇಸಿ ಪ್ರಸನ್ನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts