More

    ಕರೆಂಟ್ ಕೈಕೊಟ್ರೆ, ಪೈಪ್ ಒಡೆದ್ರೆ ಸಮಸ್ಯೆ- ಹೂವಿನಹಡಗಲಿ ತಾಲೂಕಿಗೆ ಎರಡು ಹಂತದಲ್ಲಿ ಜೀವಜಲ ಪೂರೈಕೆ

    ಮಧುಸೂದನ ಕೆ.ಹೂವಿನಹಡಗಲಿ
    ಪಟ್ಟಣ ಮತ್ತು ತಾಲೂಕಿಗೆ ಹೊಂದಿಕೊಂಡು ತುಂಗಭದ್ರಾ ನದಿ ಹರಿಯುವುದರಿಂದ ಪಟ್ಟಣ ಸೇರಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬರುವುದಿಲ್ಲ.

    ಬೇಸಿಗೆ ಸಂದರ್ಭದಲ್ಲಿ ವಿದ್ಯುತ್ ಕೈಕೊಟ್ಟರೆ, ಪೈಪ್ ಒಡೆದು ಹೋದರೆ ಮಾತ್ರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಎನ್ನುವುದು ತಾಲೂಕಿನ ಜನರ ಆತಂಕ. ಕೋಟ್ನಿಕಲ್ ಸಮೀಪದ ನದಿ ಮತ್ತು ಸಿಂಗಟಾಲೂರು ಬ್ಯಾರೇಜ್‌ನಿಂದ ಎರಡು ಹಂತದಲ್ಲಿ ಪಟ್ಟಣಕ್ಕೆ ನೀರು ಪೂರೈಕೆಯಾಗುತ್ತದೆ. ಈ ಹಿಂದೆ ನದಿಯಲ್ಲಿ ನೀರು ಖಾಲಿಯಾದ ಸಂದರ್ಭದಲ್ಲಿ ಪಟ್ಟಣದ ನಾಗರಿಕರು ನೀರು ತರಲು ಖಾಸಗಿ ಕೊಳವೆ ಬಾವಿಗಳನ್ನು ಅವಲಂಬಿಸಿದ್ದರು. ಸಿಂಗಟಾಲೂರು ಬ್ಯಾರೇಜಿನಲ್ಲಿ ಸತಸತವಾಗಿ ನೀರಿರುವುದರಿಂದ ಜೀವಜಲಕ್ಕೆ ಅಷ್ಟೇನು ಸಮಸ್ಯೆ ಇಲ್ಲ.

    ಕರೆಂಟ್ ಕೈಕೊಟ್ರೆ, ಪೈಪ್ ಒಡೆದ್ರೆ ಸಮಸ್ಯೆ- ಹೂವಿನಹಡಗಲಿ ತಾಲೂಕಿಗೆ ಎರಡು ಹಂತದಲ್ಲಿ ಜೀವಜಲ ಪೂರೈಕೆ
    ಹೂವಿನಹಡಗಲಿ ಪಟ್ಟಣದಲ್ಲಿರುವ ಓವರ್‌ಹೆಡ್‌ಟ್ಯಾಂಕ್ ನೀರನ್ನು ತಳ್ಳು ಬಂಡಿಯ ಮೂಲಕ ಕೊಡಗಳಲ್ಲಿ ತುಂಬಿಕೊಂಡು ಹೋಗುತ್ತಿರುವುದು.

    ಹೂವಿನಹಡಗಲಿ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಿಗೆ ಮೂರು ದಿನಕ್ಕೆ ಒಂದು ಬಾರಿ ನೀರು ಪೂರೈಸಲಾಗುತ್ತದೆ. ಅಂದಾಜು 14 ರಿಂದ 15 ಸಾವಿರ ಮನೆಗಳಲ್ಲಿ 9 ಸಾವಿರಕ್ಕಿಂತ ಹೆಚ್ಚು ನಳಗಳ ಸಂಪರ್ಕವಿದೆ. ಪಟ್ಟಣದಲ್ಲಿ 33 ಬೋರ್‌ವೆಲ್‌ಗಳಿಂದಲೂ ನೀರನ್ನು ಪೂರೈಕೆ ಮಾಡಲಾಗುತ್ತದೆ. (ಬಹುತೇಕ ಬೋರ್‌ವೆಲ್‌ಗಳನ್ನು ದುರಸ್ತಿ ಗೊಳಿಸಬೇಕಾಗಿದೆ) ಪಟ್ಟಣದಲ್ಲಿ ನಾಲ್ಕು ಓವರ್‌ಹೆಡ್ ಟ್ಯಾಂಕ್‌ಗಳ ಮೂಲಕ ದಿನ ಬಿಟ್ಟು ದಿನ ನೀರು ಪೂರೈಕೆಯಾಗುತ್ತಿದೆ. ಪಟ್ಟಣದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ನೀಡುವ ನಿಟ್ಟಿನಲ್ಲಿ ಅನೇಕ ಭಾಗಗಳಲ್ಲಿ ಆರ್‌ಒ ಪ್ಲಾಂಟ್‌ಗಳಿದ್ದರೂ ಅವುಗಳಲ್ಲಿ ಬಹುತೇಕ ಪ್ಲಾಂಟ್‌ಗಳು ಕೆಟ್ಟು ವರ್ಷಗಳೇ ಕಳೆದರೂ ದುರಸ್ತಿ ಕೆಲಸ ನಡೆದಿಲ್ಲ. ಬೇಸಿಗೆ ಸಂದರ್ಭದಲ್ಲಿ ತಾಲೂಕಿನ ಇಟ್ಟಿಗಿ ಹೋಬಳಿಯ 13 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲು ಕ್ರಮ ಕೈಗೊಂಡಿದ್ದಾರೆ.

    ಬಳಕೆಯಾಗುತ್ತಿಲ್ಲ ಜಲಜೀವನ್ ಮಿಷನ್
    ಹೂವಿನಹಡಗಲಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಕೆ ಸಂಪರ್ಕ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದರೂ ಇಲ್ಲಿವರೆಗೆ ಆ ನಳಗಳ ಮೂಲಕ ಕುಡಿಯುವ ನೀರು ದೊರೆಯುತ್ತಿಲ್ಲ. ತಾಲೂಕಿನ ಹಿರೇಮಲ್ಲನಕೇರಿ, ಬಸರಹಳ್ಳಿತಾಂಡಾ, ಬಾವಿಹಳ್ಳಿ, ಹೊಳಗುಂದಿ, ಮಹಜನದಹಳ್ಳಿ, ಅಡವಿಮಲ್ಲನಕೇರಿ, ಅಡವಿಮಲ್ಲನಕೇರಿತಾಂಡಾ, ಕೆಂಚಮ್ಮನಹಳ್ಳಿ, ಎಂ.ಕಲ್ಲಹಳ್ಳಿ, ತಳಕಲ್, ನಾಗತಿಬಸಾಪುರ, ಮಾನ್ಯರ ಮಸಲವಾಡ, ಕೆ.ಕೆ.ತಾಂಡಾ, ಸೇರಿ ಅನೇಕ ಗ್ರಾಮಗಳಲ್ಲಿ ಸರಿಯಾದ ಕ್ರಮದಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ.

    ಕರೆಂಟ್ ಕೈಕೊಟ್ರೆ, ಪೈಪ್ ಒಡೆದ್ರೆ ಸಮಸ್ಯೆ- ಹೂವಿನಹಡಗಲಿ ತಾಲೂಕಿಗೆ ಎರಡು ಹಂತದಲ್ಲಿ ಜೀವಜಲ ಪೂರೈಕೆ
    ಹೂವಿನಹಡಗಲಿ ತಾಲೂಕಿನ ಕೊಟ್ನಿಕಲ್ ಬಳಿ ಹರಿಯುವ ನದಿಯಲ್ಲಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಮೋಟಾರನ್ನು ಅಳವಡಿಸಿದರುವುದು.

    ಕೆರೆ ನೀರು ಕಡಿಮೆಯಾದ್ರೆ ಬೋರ್‌ವೆಲ್ ಗತಿ
    ಸಿಂಗಟಾಲೂರು ಏತನೀರಾವರಿ ಯೋಜನೆಯಿಂದ ತಾಲೂಕಿನ 26 ಕೆರಗಳಿಗೆ ನೀರು ತುಂಬಿಸುವ ಯೋಜನೆ ಬಳಿಕೆ ತಾಲೂಕಿನ ಬಹುತೇಕ ಗ್ರಾಮಗಳು ಕುಡಿಯುವ ನೀರಿನ ಸೌಲಭ್ಯವನ್ನು ಪಡೆದುಕೊಂಡಿವೆ. ಆದರೆ, ಕೆರೆಯಲ್ಲಿ ನೀರು ಕಡಿಮೆಯಾದ ಸಂದರ್ಭದಲ್ಲಿ ಬೋರ್‌ವೆಲ್‌ಗಳ ಮೂಲಕವಾಗಿ ನೀರು ಸರಬರಾಜಾಗುತ್ತದೆ. ನದಿ ತೀರದ ಹಳ್ಳಿಗಳನ್ನು ಹೊರತುಪಡಿಸಿ ಇನ್ನುಳಿದ ಗ್ರಾಮಗಳಿಗೆ ನೀರಿನ ಸೌಲಭ್ಯಗಳು ದೊರಕುವುದು ಕಷ್ಟಕರವಾಗಿತ್ತು. ಆದರೆ, ಪ್ರಸ್ತುತ ಕುಡಿಯುವ ನೀರಿ ಯೋಜನೆ ಮೂಲಕ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿದೆ. ಬೇಸಿಗೆ ಸಂದರ್ಭದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗದಂತೆ ಅಧಿಕಾರಿಗಳು ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

    ಯೋಜನೆ ಅನುಷ್ಠಾನ ಅಸಮರ್ಪಕ
    ಹೂವಿನಹಡಗಲಿ ಹೋಬಳಿ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಗೊಂಡು ಐದು ವರ್ಷಗಳಾದರೂ, ಯೋಜಯ ಲಾಭ ಮಾತ್ರ ಹೋಬಳಿ ವ್ಯಾಪ್ತಿಯ ಗ್ರಾಮಸ್ಥರಿಗೆ ಸಿಗುತ್ತಿಲ್ಲ. ಅಯ್ಯನಹಳ್ಳಿ, ವಡ್ಡಿನಹಳ್ಳಿತಾಂಡಾ, ಶಿವಪುರ, ಶಿವಪುರತಾಂಡ, ತಿಮಲಾಪುರ, ತಿಪ್ಪಾಪುರ, ಅಲ್ಲಿಪುರ, ಅಲ್ಲಿಪುರ ಹೊಸಪ್ಲಾಟ್, ರಾಜವಾಳ ಗ್ರಾಮಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದ ಕಾರಣ ಈ ಹಳ್ಳಿಗಳ ಜನರ ಬೋರ್‌ವೆಲ್ ನೀರನ್ನೇ ಆಶ್ರಯಿಸಿದ್ದಾರೆ.

    ಕರೆಂಟ್ ಕೈಕೊಟ್ರೆ, ಪೈಪ್ ಒಡೆದ್ರೆ ಸಮಸ್ಯೆ- ಹೂವಿನಹಡಗಲಿ ತಾಲೂಕಿಗೆ ಎರಡು ಹಂತದಲ್ಲಿ ಜೀವಜಲ ಪೂರೈಕೆ
    ಹೂವಿನಹಡಗಲಿಯ ಓಣಿಯೊಂದರಲ್ಲಿ ಯುವಕನೊಬ್ಬ ಕುಡಿಯುವ ನೀರನ್ನು ಹಿಡಿಯುತ್ತಿರುವುದು.

    ಹೂವಿನಹಡಗಲಿ ಪಟ್ಟಣ ವ್ಯಾಪ್ತಿಯಲ್ಲಿ ಇಲ್ಲಿಯವರೆಗೂ ನೀರಿನ ಸಮಸ್ಯೆ ಕಂಡುಬಂದಿಲ್ಲ. ಎರಡು ಹಂತದಲ್ಲಿ ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದೆ. ನದಿಯಲ್ಲಿ ನೀರು ಖಾಲಿಯಾದ ಸಂದರ್ಭದಲ್ಲಿ ಸಿಂಗಟಾಲೂರು ಬ್ಯಾರೇಜ್‌ನಿಂದ ನೇರವಾಗಿ ಪಟ್ಟಣಕ್ಕೆ ನೀರು ಪೂರೈಕೆಯಾಗುತ್ತಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ತೊಂದರೆಗಳು ಕಂಡುಬಂದಲ್ಲಿ ಶೀಘ್ರ ಪರಿಹರಿಸಲಾಗುವುದು.
    ಎಚ್.ಇಮಾಮ್ ಸಾಹೇಬ್
    ಹೂವಿನಹಡಗಲಿ ಪುರಸಭೆ ಮುಖ್ಯಾಧಿಕಾರಿ

    ಬೇಸಿಗೆ ಸಂದಂರ್ಭದಲ್ಲಿ ಇಟ್ಟಿಗಿ ಹೊಬಳಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದೆಂದು ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ವರದಿ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಆಯಾ ಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
    ಕೆ.ಶರಣಮ್ಮ
    ಹೂವಿನಹಡಗಲಿ ತಹಸೀಲ್ದಾರ್

    ಹೂವಿನಹಡಗಲಿ ಜಲ ಸಮೃದ್ಧಿ ಹೊಂದಿದ ತಾಲೂಕಾಗಿದೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಕಂಡು ಬರುವುದಿಲ್ಲ. ನದಿ ತೀರದ ಗ್ರಾಮಗಳನ್ನು ಹೊರತುಪಡಿಸಿ ಬೇರೆ ಭಾಗದ ಹಳ್ಳಿಗಳಲ್ಲಿ ಸ್ವಲ್ಪ ಮಟ್ಟಿಗೆ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುವುದು.
    ಎಸ್.ಎಸ್.ಪ್ರಕಾಶ್
    ಹೂವಿನಹಡಗಲಿ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts