ಕಳಸ: ಹೋಬಳಿಯ ಕುಂಬಳಡಿಕೆ ಸರ್ವೆ ನಂ. 153ರಲ್ಲಿ 70ಕ್ಕೂ ಹೆಚ್ಚು ನಿವೇಶನ ರಹಿತರು ಟೆಂಟ್ ಹಾಕಿ ನಮಗೆ ಕೂಡಲೇ ಈ ಭೂಮಿಯನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ಧರಣಿ ಆರಂಭಿಸಿದ್ದಾರೆ.
ಕಳಸ ಎಸ್ಟೇಟ್, ಮಾವಿನಕೆರೆ, ಹಿರೇಬೈಲ್, ಹಳುವಳ್ಳಿ, ಮರಸಣಿಗೆ ಗ್ರಾಮದ ನಿವೇಶನ ರಹಿತರು ಬೆಳಗ್ಗೆ 200ಕ್ಕೂ ಹೆಚ್ಚು ಜನರು ಟೆಂಟ್ ಹಾಕಿ ಸ್ಥಳದಲ್ಲೇ ಅಡುಗೆ ಮಾಡುತ್ತಿದ್ದಾರೆ. ಶಾಸಕರು, ಜಿಲ್ಲಾಧಿಕಾರಿ, ತಹಸೀಲ್ದಾರ್ ಬಂದು ಈ ಜಾಗದಲ್ಲಿ ನಮಗೆ ನಿವೇಶನ ಹಂಚಿಕೆ ಮಾಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
ಜಿಲ್ಲಾ ಬುಡಕಟ್ಟು ಆದಿವಾಸಿ ಸಂಘದ ತಾಲೂಕು ಅಧ್ಯಕ್ಷ ಸಂಜೀವ ಮಾತನಾಡಿ, ಎಂಟು ವರ್ಷಗಳಿಂದ ಕಂದಾಯ ಭೂಮಿಯನ್ನು ಇಲ್ಲಿಯ ನಿವೇಶನ ರಹಿತರಿಗೆ ಹಂಚಬೇಕು ಎಂಬ ಬೇಡಿಕೆ ಇಡುತ್ತಿದ್ದೇವೆ. ಜಿಲ್ಲಾಧಿಕಾರಿಗೂ ನಮ್ಮ ಅಹವಾಲು ಸಲ್ಲಿಸಿದ್ದೆವು. ಶಾಸಕರು ಕೂಡ ಜಿಲ್ಲಾಧಿಕಾರಿಗೆ ಭೂಮಿ ನೀಡಲು ಸೂಚಿಸಿದ್ದರು. ಆದರೆ ಈಗ ಏಕಾಏಕಿ ಈ ಭೂಮಿಯನ್ನು ನೆರೆ ಸಂತ್ರಸ್ತರಿಗೆ ಹಂಚಿಕೆ ಮಾಡುವ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವೇಶನಕ್ಕಾಗಿ 30 ವರ್ಷಗಳಿಂದಲೂ ಬೇಡಿಕೆ ಇಟ್ಟರೂ ಸ್ಪಂದಿಸದ ಜಿಲ್ಲಾಡಳಿತ ಈಗ ಭೂಮಿಯನ್ನು ಬೇರೆಯವರಿಗೆ ಹಂಚಿಕೆ ಮಾಡಲು ಹೊರಟಿದೆ. ಹಾಗಾದಾರೆ ನಾವು ಮನುಷ್ಯರಲ್ಲವೇ? ನೆರೆಪೀಡಿತರಿಗೆ ಭೂಮಿ ಕೊಡಬೇಡಿ ಎಂದು ನಾವು ಹೇಳುತ್ತಿಲ್ಲ. ಇಲ್ಲಿ ಎಸ್ಟೇಟ್ಗಳಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ಕಾರ್ವಿುಕ ನಿರಾಶ್ರಿತ ಕುಟುಂಬಗಳಿಗೆ 5 ಎಕರೆ ಭೂಮಿ ಹಂಚಿಕೆ ಮಾಡಿ ಉಳಿದ ಭೂಮಿಯನ್ನು ಹಂಚಿಕೆ ಮಾಡಲಿ. ನಾವು ಸೂರು ನಿರ್ವಿುಸಿಕೊಳ್ಳಲು ಭೂಮಿ ಕೇಳುತ್ತಿದ್ದೇವೆ. ಈ ಭೂಮಿಯನ್ನು ನಮಗೆ ಹಂಚಿಕೆ ಮಾಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದರು.
ನಿವೇಶನ ರಹಿತ ಪ್ರೇಮಾ ಮಾತನಾಡಿ, ಈ ಜಾಗವನ್ನು ನೆರೆಪೀಡಿತರಿಗಾಗಿ ಸರ್ವೆ ಮಾಡುವಾಗ ಸುಮ್ಮನಿದ್ದ ಇಲ್ಲಿಯ ಸ್ಥಳೀಯರು ಈಗ ನಾವು ಇಲ್ಲಿ ಟೆಂಟ್ ಹಾಕಿದ ಕೂಡಲೇ ನಮ್ಮ ಅಧ್ಯಕ್ಷರಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ನಾವು ಯಾರ ಭೂಮಿಯಲ್ಲೂ ಕುಳಿತಿಲ್ಲ. ಸರ್ಕಾರಿ ಜಾಗದಲ್ಲಿ ಕುಳಿತಿದ್ದೇವೆ. ಈ ಬಾರಿ ಮಳೆಯಿಂದ ನಮಗೆ ಕೂಲಿ ಇಲ್ಲ. ಎಸ್ಟೇಟ್ಗಳಲ್ಲಿ ಕೆಲಸ ಇಲ್ಲ. ಬಾಡಿಗೆ ಮನೆಯಲ್ಲಿ ವಾಸಿಸುವ ಶಕ್ತಿ ನಮಗಿಲ್ಲ. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ನಿವೇಶನ ರಹಿತರಾದ ಸುರೇಶ, ಅರುಣ, ಅಪ್ಪಿ, ಮಂಜುನಾಥ, ಪ್ರೇಮಾ, ಸುಶೀಲಾ, ಸಣ್ಣು, ವಸಂತ ಇತರರಿದ್ದರು.