More

    ಪಾಳು ಕಟ್ಟಡವೇ ಆಶ್ರಯ

    ವಿಜಯವಾಣಿ ಸುದ್ದಿಜಾಲ ಲಕ್ಷೆ್ಮೕಶ್ವರ

    ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ ಸುರಿದ ಭಾರಿ ಮಳೆಗೆ ಮನೆ ಕಳೆದುಕೊಂಡು ಬೀದಿಗೆ ಬಂದ ಕಟುಂಬಗಳು ಇಂದಿಗೂ ನರಕಯಾತನೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳ ಗೊಂದಲಮಯ ಮಾನದಂಡದಿಂದ ಸಮರ್ಪಕ ಪರಿಹಾರ ದೊರೆಯದೆ ಸಂತ್ರಸ್ತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ!

    ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಮನೆ ಕೆಳದುಕೊಂಡ 3 ಬಡ ಕುಟುಂಬಗಳು ಪಾಳು ಬಿದ್ದಿರುವ ಸರ್ಕಾರಿ ಆಸ್ಪತ್ರೆಯ ಕಟ್ಟಡದಲ್ಲಿ ಕಷ್ಟದ ಜೀವನ ಸಾಗಿಸುತ್ತಿರುವುದೇ ಇದಕ್ಕೆ ಕಾರಣ.

    ರೂಪಾ ಹುಕ್ಕೇರಿ, ದೇವಕ್ಕ ಗೋಣೆಪ್ಪನವರ ಹಾಗೂ ಗೀತಾ ಗೋಣೆಪ್ಪನವರ ಕುಟುಂಬಗಳು ಪಾಳುಬಿದ್ದ ಕಟ್ಟಡದಲ್ಲಿ ಆಶ್ರಯ ಪಡೆದಿದ್ದು, ಸರ್ಕಾರದ ಸಹಾಯಕ್ಕೆ ಅಂಗಲಾಚುತ್ತಿವೆ.

    ಮುಂಗಾರಿನ ಅತಿಯಾದ ಮಳೆಗೆ ಈ ಕುಟುಂಬಗಳ ಮನೆಗಳು ನೆಲ ಕಚ್ಚಿದವು. ಇದಕ್ಕೆ ಅಧಿಕಾರಿಗಳು ನೀಡಿದ ಬಿಡಿಗಾಸು ಪರಿಹಾರದಲ್ಲಿ ಮನೆ ದುರಸ್ತಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿ ಮನೆ ಕಳೆದುಕೊಂಡ ಸಂತ್ರಸ್ತರು ಗುಡಿ, ಗುಂಡಾರ, ಪಾಳುಬಿದ್ದ ಕಟ್ಟಡಗಳಲ್ಲಿ ವಾಸಿಸುತ್ತ ಕಣ್ಣೀರಲ್ಲಿ ಕೈ ತೊಳೆಯುವಂತಾಯಿತು.

    ಮಾನದಂಡವೇ ಗೊಂದಲ: ಸರ್ಕಾರ ಪರಿಹಾರಧನ ವಿತರಣೆಯಲ್ಲೂ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂಬಂತೆ ವರ್ತಿಸುತ್ತಿದೆ. ಒಕ್ಕದ ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ನಿರ್ಗತಿಕರಿಗೆ ಸಾಕಷ್ಟು ಪರಿಹಾರಧನ ನೀಡಿದ್ದರೆ, ಅದೇ ಕಂದಾಯ ಇಲಾಖೆಯವರು ಗದಗ ಜಿಲ್ಲೆಯಲ್ಲಿ ಯಾವ ಮಾನದಂಡ ಬಳಸಿ ಪರಿಹಾರ ನೀಡಿದರೋ ಎಂಬುದೇ ತಿಳಿಯುತ್ತಿಲ್ಲ. ಈ ಭಾಗದ ಜನರಿಗೆ ಬಂದಿದ್ದು 3,200 ರೂ. ಮಾತ್ರ. ಪೂರ್ಣ ಮನೆ ಬಿದ್ದವರಿಗೂ ಇದೇ ಪರಿಹಾರ ನೀಡಿರುವುದು ಕಂದಾಯ ಇಲಾಖೆಯವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಪ್ರಜ್ಞಾವಂತರು ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

    5-6 ತಿಂಗಳ ಹಿಂದೆ ಸುರಿದ ಮಳೆಗೆ ನಮ್ಮ ಮನೆ ಕುಸಿದು ಹೋಗಿದ್ದು, ನಾವು ನಿರಾಶ್ರಿತರಾಗಿದ್ದೇವೆ. ನಿತ್ಯ ದುಡಿದು ಜೀವನ ಸಾಗಿಸುತ್ತಿರುವ ನಮ್ಮಂತಹ ಬಡ ಕುಟುಂಬಗಳು ಮತ್ತೆ ಸೂರು ಕಾಣುವ ಕನಸು ಕನಸಾಗಿಯೇ ಉಳಿದಿದೆ. ಸರ್ಕಾರ ಕೊಟ್ಟಿರುವ 3,200 ರೂ. ನೆರವು ಯಾವುದಕ್ಕೂ ಸಾಲದಾಗಿದೆ. ಇದರಿಂದಾಗಿ ನಾವು ಪಾಳು ಬಿದ್ದ ಸರ್ಕಾರಿ ಕಟ್ಟಡದಲ್ಲಿ ವಾಸವಾಗಿದ್ದೇವೆ. ಇದು ಯಾವಾಗ ಬೀಳುತ್ತದೋ ಗೊತ್ತಿಲ್ಲ. ಮಕ್ಕಳು ಮರಿ ಕಟ್ಟಿಕೊಂಡು ಭಯದಲ್ಲೇ ಜೀವನ ಸಾಗಿಸುತ್ತಿದ್ದೇವೆ. ಸರ್ಕಾರ ನಮ್ಮಂತ ನಿರಾಶ್ರಿತರಿಗೆ ಆಶ್ರಯ ಯೋಜನೆಯಲ್ಲಿ ಮನೆ ನಿರ್ವಿುಸಿಕೊಳ್ಳಲು ನೆರವು ನೀಡಬೇಕು

    | ರೂಪಾ ಮನೋಹರ ಹುಕ್ಕೇರಿ ನೆರೆ ಸಂತ್ರಸ್ತೆ

    ಸರ್ಕಾರ ಬಡವರಿಗಾಗಿ ಕೊಡುತ್ತಿರುವ ಆಶ್ರಯ ಯೋಜನೆಯನ್ನು ಸದ್ಯ ಸ್ಥಗಿತಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಈ ಕುಟುಂಬಗಳಿಗೆ ಆಶ್ರಯ ಯೋಜನೆ ಅಡಿಯಲ್ಲಿ ಮನೆ ನಿರ್ವಿುಸಿಕೊಳ್ಳಲು ಪ್ರಥಮ ಆದ್ಯತೆ ನೀಡಲಾಗುವುದು.

    | ಬಿ.ಟಿ. ಅಮ್ಮನವರ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts