More

    ಧ್ವಜಾರೋಹಣ ಸಿಬ್ಬಂದಿಗಿಲ್ಲ ಪ್ರತ್ಯೇಕ ವೇತನ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಗ್ರಾಮ ಪಂಚಾಯಿತಿ ಕಾರ್ಯಾಲಯಗಳ ಮೇಲೆ ಮೇಲೆ ಪ್ರತಿದಿನ ಬೆಳಗ್ಗೆ ಧ್ವಜಾರೋಹಣ, ಸಂಜೆ ಅವರೋಹಣ ಕೈಗೊಳ್ಳುವ ಸಿಬ್ಬಂದಿಗೆ ಸರ್ಕಾರದಿಂದ ಪ್ರತ್ಯೇಕ ವೇತನ ಸಿಗುತ್ತಿಲ್ಲ. ಗ್ರಾಪಂನ ನಿಧಿ-2ರಡಿ ಹಣ ಇದ್ದರೆ ಮಾತ್ರ ವೇತನ. ಈ ವರ್ಷದ ಬಜೆಟ್‌ನಲ್ಲಾದರೂ ಅನುದಾನ ಮೀಸಲಿಡಬಹುದೇ ಎಂಬ ನಿರೀಕ್ಷೆಯಲ್ಲಿ ಸಿಬ್ಬಂದಿ ಇದ್ದಾರೆ.

    ಪ್ರತ್ಯೇಕ ಸಿಬ್ಬಂದಿ ಇಲ್ಲ: ರಾಜ್ಯದ 6022 ಗ್ರಾಪಂಗಳಲ್ಲಿ ರಾಷ್ಟ್ರಧ್ವಜ ಹಾರಿಸಲೆಂದೇ ಪ್ರತ್ಯೇಕ ಸಿಬ್ಬಂದಿ ಇಲ್ಲ. ಹಾಗಾಗಿ ಪ್ರತಿದಿನ ರಾಷ್ಟ್ರ ಧ್ವಜ ಹಾರಿಸುವ ಹಾಗೂ ಇಳಿಸುವ ಜವಾಬ್ದಾರಿಯನ್ನು ಗ್ರಾಪಂ ಬಿಲ್ ಕಲೆಕ್ಟರ್, ವಾಟರ್‌ಮನ್ ಇಲ್ಲವೆ ಕಾರ್ಯದರ್ಶಿಗಳು ನಿರ್ವಹಿಸುತ್ತಿದ್ದಾರೆ. ಅವರಿಗೆ ಗ್ರಾಪಂ ಸಾಮಾನ್ಯ ನಿರ್ವಹಣೆ ಮೊತ್ತ (ನಿಧಿ-2) ರಿಂದ ಪ್ರತಿದಿನ 30 ರೂ.ರಂತೆ ಮಾಸಿಕ 900 ರೂ. ಭತ್ಯೆ ನೀಡುತ್ತಿದ್ದಾರೆ. ಆದರೆ, ತೆರಿಗೆ ಹಣ ಸಂಗ್ರಹವಾಗದಿದ್ದರೆ ಧ್ವಜ ಹಾರಿಸುವ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ.

    ರಜೆ ತೆಗೆದುಕೊಳ್ಳಲೂ ಇಲ್ಲ ಅವಕಾಶ: ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ, ಬೆಳಗಾವಿಯ ಸುವರ್ಣ ವಿಧಾನಸೌಧ, ಹೈಕೋರ್ಟ್ ಹಾಗೂ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಾರಿಸಲೆಂದೆ ಪ್ರತ್ಯೇಕ ಸಿಬ್ಬಂದಿ ಇರುತ್ತಾರೆ. ಅದೇ ಮಾದರಿಯಲ್ಲಿ ತಾಪಂ ಹಾಗೂ ಜಿಪಂಗಳಲ್ಲಿಯೂ ಧ್ವಜ ಹಾರಿಸಲು ಸಿಬ್ಬಂದಿ ನೇಮಿಸಿದ್ದಾರೆ. ಆದರೆ, ಗ್ರಾಪಂಗಳಲ್ಲಿ ಪ್ರತ್ಯೇಕ ಸಿಬ್ಬಂದಿ ಇಲ್ಲ.

    ದಿನ ನಿತ್ಯದ ಕೆಲಸದ ಜತೆಗೆ ಡಿ ದರ್ಜೆ ನೌಕರರು ಇಲ್ಲವೆ ತೆರಿಗೆ ವಸೂಲಿಗಾರರು ನಿತ್ಯ ಧ್ವಜ ಹಾರಿಸುವ ಕೆಲಸ ಮಾಡಬೇಕು. ಮಾಸಿಕ ವೇತನದ ಜತೆಗೆ ಧ್ವಜ ಹಾರಿಸಿದ್ದಕ್ಕೆ ಹೆಚ್ಚುವರಿ ಸಂಭಾವನೆ ನೀಡಲಾಗುತ್ತಿದೆ. ಅದೂ ಸರಿಯಾಗಿ ಕೈ ಸೇರುತ್ತಿಲ್ಲ. ರಜೆ ಸೌಲಭ್ಯವೂ ಇಲ್ಲದಂತಾಗಿದೆ. ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲೂ ಬಂದು ಧ್ವಜ ಹಾರಿಸಲು ದಿನಕ್ಕೆ 30 ರೂಪಾಯಿ ನೀಡುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ತೆರಿಗೆ ಸಂಗ್ರಹವಾಗದಿರುವುದು ಸಮಸ್ಯೆ : ಧ್ವಜಾರೋಹಣ ಮಾಡುವ ಸಿಬ್ಬಂದಿಗೆ ತಲಾ 30 ರೂ. ರಂತೆ 6022 ಗ್ರಾಪಂಗಳಿಗೆ ಸರ್ಕಾರ ನಿತ್ಯ 1,80,660 ರೂ. ಪಾವತಿಸಬೇಕು. ಆದರೆ, ಸರ್ಕಾರವು ಗ್ರಾಮ ಪಂಚಾಯಿತಿ ನಿಧಿ-2ಗೆ ಸರಿಯಾಗಿ ಅನುದಾನ ಬಿಡುಗಡೆ ಮಾಡದಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ರೂ. ಬಾಕಿ ಉಳಿದುಕೊಂಡಿದೆ. ಕೆಲ ಗ್ರಾಪಂಗಳಲ್ಲಿ ಆದಾಯಕ್ಕೆ ಅನುಗುಣವಾಗಿ ಸರಿಯಾಗಿ ಮಾಸಿಕ ಭತ್ಯೆ ನೀಡಲಾಗುತ್ತಿದೆ. ಬಹುತೇಕ ಗ್ರಾಪಂಗಳಲ್ಲಿ ಸರಿಯಾಗಿ ತೆರಿಗೆ ಸಂಗ್ರಹವಾಗದಿರುವುದು ಭತ್ಯೆ ನೀಡದಿರಲು ಕಾರಣ ಎಂದು ತಾಪಂ ಅಧಿಕಾರಿಗಳು ತಿಳಿಸಿದ್ದಾರೆ.

    ಕಾಡುತ್ತಿರುವ ಸಿಬ್ಬಂದಿ ಕೊರತೆ

    ರಾಜ್ಯ ಸರ್ಕಾರವು 2013ರಲ್ಲಿಯೇ ಗ್ರಾಮೀಣ, ನಗರ ಪ್ರದೇಶಗಳಲ್ಲಿನ ಜನರಲ್ಲಿ ದೇಶಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಗ್ರಾಪಂ, ತಾಪಂ ಹಾಗೂ ಜಿಪಂ ಕಾರ್ಯಾಲಯಗಳ ಮೇಲೆ ಪ್ರತಿದಿನ ರಾಷ್ಟ್ರಧ್ವಜ ಹಾರಿಸುವುದನ್ನು ಕಡ್ಡಾಯಗೊಳಿಸಿತ್ತು. ಆದರೆ, ಅದಕ್ಕಾಗಿ ಪ್ರತ್ಯೇಕ ಸಿಬ್ಬಂದಿ, ವೇತನ ನಿಗದಿಪಡಿಸಲಿಲ್ಲ. ಈಗಾಗಲೇ ಗ್ರಾಪಂ ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ದಿನನಿತ್ಯದ ಕೆಲಸ ಮಾಡುವ ಸಿಬ್ಬಂದಿಯೇ ಧ್ವಜಾರೋಹಣ ಮಾಡುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಜಿಪಂ, ಗ್ರಾಪಂ ಸದಸ್ಯರು ದೂರಿದ್ದಾರೆ.

    ಗ್ರಾಮ ಪಂಚಾಯಿತಿ ನೌಕರರ ಆಕ್ರೋಶ

    ಪ್ರತಿದಿನ ಬೆಳಗ್ಗೆ ಧ್ವಜ ಹಾರಿಸಿ ನಮನ ಸಲ್ಲಿಸುತ್ತೇವೆ. ಸಂಜೆ ಸೂರ್ಯಾಸ್ತದ ಹೊತ್ತಿಗೆ ಧ್ವಜ ಇಳಿಸುತ್ತೇವೆ. ಈ ಕೆಲಸವನ್ನು ಡ್ಯೂಟಿ ಎಂದು ಭಾವಿಸಿ ಮಾಡುತ್ತಿಲ್ಲ. ಸ್ವಾಭಿಮಾನ, ಶ್ರದ್ಧೆ ಮತ್ತು ಗೌರವದಿಂದ ಮಾಡುತ್ತಿದ್ದೇವೆ. ರಜೆ ಇಲ್ಲದೆ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲೂ ಧ್ವಜ ಹಾರಿಸುತ್ತಿದ್ದೇವೆ. ಆದರೆ ಧ್ವಜ ಹಾರಿಸುವವರಿಗೆ ಪ್ರತ್ಯೇಕ ವೇತನ ನೀಡುತ್ತಿಲ್ಲ ಎಂದು ಮೂಡಲಗಿ, ಸವದತ್ತಿ, ಬೈಲಹೊಂಗಲ, ಕಿತ್ತೂರು, ಬೆಳಗಾವಿ ತಾಲೂಕು ವ್ಯಾಪ್ತಿಯ ಗ್ರಾಪಂ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗ್ರಾಪಂಗಳು ತಮ್ಮ ಸಾಮಾನ್ಯ ನಿರ್ವಹಣೆ ಮೊತ್ತದಲ್ಲಿಯೇ ರಾಷ್ಟ್ರಧ್ವಜ ಹಾರಿಸುವ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಭತ್ಯೆ ನೀಡುವಂತೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಈ ಸಿಬ್ಬಂದಿ ಭತ್ಯೆ ಬಾಕಿ ಉಳಿಸಿಕೊಳ್ಳುವಂತಿಲ್ಲ. ಅದಕ್ಕಾಗಿ ಸರ್ಕಾರದಿಂದ ಪ್ರತ್ಯೇಕ ಅನುದಾನ ಬರುವುದಿಲ್ಲ.
    | ಎಸ್.ಬಿ.ಮುಳ್ಳಳ್ಳಿ, ಜಿಪಂ ಅಭಿವೃದ್ಧಿ ಉಪ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts