More

    ಮೀನುಗಾರಿಕೆ ಆರಂಭಕ್ಕೆ ಮಿಶ್ರ ಫಲ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಪ್ರತಿಕೂಲ ಪರಿಸ್ಥಿತಿಯಿಂದ ತಡವಾಗಿ ಆರಂಭವಾದ ಮೀನುಗಾರಿಕೆ ಋತುವಿಗೆ ಮಿಶ್ರಫಲ ದೊರೆತಿದೆ. ಮಂಗಳೂರಿನಲ್ಲಿ ಕೆಂಪು ಸಿಗಡಿ, ಬಂಗುಡೆ, ಕಲ್ಲೂರು, ಅಂಜಲ್ ಉತ್ತಮ ಪ್ರಮಾಣದಲ್ಲಿ ಸಿಕ್ಕಿದ್ದು, ಮೀನುಗಾರರು ಸ್ವಲ್ಪ ನಿರಾಳತೆ ಅನುಭವಿಸಿದ್ದಾರೆ. ಆದರೆ ಉಡುಪಿಯಲ್ಲಿ ಮೀನುಗಾರರಿಗೆ ಲಾಭ ತರುವ ಮೀನುಗಳು ವಾಡಿಕೆ ಪ್ರಮಾಣದಲ್ಲಿ ದೊರೆತಿಲ್ಲ.

    ಕಳೆದ ವರ್ಷ ನಿರಂತರ ಚಂಡಮಾರುತ, ವ್ಯತಿರಿಕ್ತ ಹವಾಮಾನದಿಂದ ಮೀನುಗಾರಿಕೆ ನಡೆಸಲು ಅವಕಾಶ ದೊರೆತ ಅವಧಿಯೇ ಅಲ್ಪ. ಕರೊನಾ ಸಂಬಂಧ ಮಾರ್ಚ್ 25ರಂದು ಘೋಷಣೆಯಾದ ಲಾಕ್‌ಡೌನ್, ಜೂನ್ ಮತ್ತು ಜುಲೈಯಲ್ಲಿ ವಾರ್ಷಿಕ ಮೀನುಗಾರಿಕೆ ರಜೆ, ಆಗಸ್ಟ್‌ನಲ್ಲಿ ಪ್ರಕ್ಷುಬ್ಧ ವಾತಾವರಣ ಮೀನುಗಾರರು ಹಾಗೂ ಅವರ ಬದುಕನ್ನು ಕಟ್ಟಿ ಹಾಕಿತ್ತು.

    ಮಂಗಳೂರು ಭಾಗದಲ್ಲಿ ಕಡಲಿಗಿಳಿದ ಬೋಟುಗಳಲ್ಲಿ ಎರಡು ದಿನಗಳಿಂದ ಕೆಂಪು ಸಿಗಡಿ, ಮಾಂಜಿ, ಅಂಜಲ್ ಒಳ್ಳೆಯ ಪ್ರಮಾಣದಲ್ಲಿ ಬಂದಿದೆ. ಮಂಗಳೂರಿನಿಂದ ಹೊರಟ ಕೆಲ ಬೋಟುಗಳು 1000 ಟನ್‌ನಷ್ಟು ಕೆಂಪು ಸಿಗಡಿ ಜತೆ ವಾಪಸ್ ಬಂದಿವೆ. ಮಂಗಳೂರಿಗೆ ಹೋಲಿಸಿದರೆ ಮಲ್ಪೆಯಲ್ಲಿ ಕ್ಲಾಥಿ ಎನ್ನುವ ಮೀನು ಗರಿಷ್ಠ ಪ್ರಮಾಣದಲ್ಲಿ ಬಂದಿದ್ದು, ಕೆಲವೆಡೆ ಈ ಮೀನುಗಳನ್ನು ಇಡಲು ಸ್ಥಳಾವಕಾಶದ ಕೊರತೆ ಉಂಟಾಗಿದೆ. ವಿದೇಶಗಳಿಗೆ ರಫ್ತು ಆಗುತ್ತಿದ್ದರೂ ಮಾರುಕಟ್ಟೆಯಲ್ಲಿ ಈ ಮೀನುಗಳಿಗೆ ಬೆಲೆ ಕಡಿಮೆ. ಕರ್ನಾಟಕ, ಕೇರಳದಲ್ಲಿ ಈ ಮೀನು ತಿನ್ನುವವರಿಲ್ಲ ಎನ್ನುತ್ತಾರೆ ಮೀನುಗಾರರು.

    ಅಧಿಕ ಆದಾಯದ ಮೀನುಗಳು ಕಡಿಮೆ
    ಮಳೆಗಾಲದ ವಾರ್ಷಿಕ ಎರಡು ತಿಂಗಳ ಮೀನುಗಾರಿಕೆ ರಜೆ ಕಳೆದು ಮೀನುಗಾರಿಕೆ ಆರಂಭವಾಗುವ ಸಂದರ್ಭ ಮೀನುಗಾರರಿಗೆ ಅಧಿಕ ಆದಾಯ ತರುವ ಕಪ್ಪೆ ಬೊಂಡಾಸ್, ರಿಬ್ಬನ್ ಫಿಶ್, ಮದಿಮಾಲ್ ಮೀನುಗಳು ಉಡುಪಿಯಲ್ಲಿ ಈ ಬಾರಿ ಸಿಕ್ಕಿಯೇ ಇಲ್ಲ ಎನ್ನುವಷ್ಟು ಕಡಿಮೆ. ಮಂಗಳೂರಿನಲ್ಲೂ ಕಡಿಮೆಯೇ. ಕರಾವಳಿಯ ಆಳಸಮುದ್ರ ಮೀನುಗಾರಿಕೆಯಲ್ಲಿ ಕಾರ್ಮಿಕರಾಗಿ ದುಡಿಯುವರಲ್ಲಿ ಶೇ.95 ಜನ ಆಂಧ್ರಪ್ರದೇಶ, ತಮಿಳುನಾಡು, ಛತ್ತೀಸ್‌ಗಡ ಮುಂತಾದ ರಾಜ್ಯದವರು. ಲಾಕ್‌ಡೌನ್ ಸಂದರ್ಭ ನಾಡಿಗೆ ತೆರಳಿದ್ದ ಈ ಮೀನುಗಾರರಲ್ಲಿ ಶೇ.70 ಮಂದಿ ವಾಪಸಾಗಿದ್ದು, ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

    ಹೊರರಾಜ್ಯಗಳಿಗೆ ತೆರಳಿದ ಕಾರ್ಮಿಕರು ಮರಳಿದ ಬಳಿಕ ಮಂಗಳೂರಿನಲ್ಲಿ ಮೀನುಗಾರಿಕೆ ಸಾಮಾನ್ಯ ಸ್ಥಿತಿಗೆ ಮರಳುವ ಸೂಚನೆ ನೀಡಿದೆ. ಬಂಗುಡೆ, ಕೆಂಪು ಸಿಗಡಿ ಸ್ವಲ್ಪ ಒಳ್ಳೆಯ ಪ್ರಮಾಣದಲ್ಲಿ ಬಂದಿದೆ. ಪರಿಸ್ಥಿತಿ ಇನ್ನಷ್ಟು ಸುಧಾರಣೆಯಾಗಬಹುದು.
    ಪಾರ್ಶ್ವನಾಥ್, ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ

    ಮಂಗಳೂರಿನಲ್ಲಿ ದೀರ್ಘ ವಿರಾಮದ ಬಳಿಕ ಮೀನುಗಾರಿಕೆ ಶುಭಾರಂಭಗೊಂಡಿದೆ. ಪರ್ಸೀನ್, ಟ್ರಾಲ್, ಆಳಸಮುದ್ರ ಸಹಿತ ಎಲ್ಲ ರೀತಿಯ ಮೀನುಗಾರಿಕೆಯಲ್ಲಿ ಉತ್ತಮ ಪ್ರಮಾಣದಲ್ಲಿ ಮೀನುಗಳು ದೊರೆಯುತ್ತಿವೆ.
    ದಿವಾಕರ್ ಉಳ್ಳಾಲ, ಮೀನುಗಾರ ಮುಖಂಡ, ಮಂಗಳೂರು

    ಇದು ಭರವಸೆಯ ಮೀನುಗಾರಿಕೆ ಎಂದು ಅನಿಸುತ್ತಿಲ್ಲ. ಕ್ಲಾಥಿ ಮೀನು ದೊಡ್ಡ ಪ್ರಮಾಣದಲ್ಲಿ ಬಂದಿದೆಯಾದರೂ ಈ ಮೀನುಗಳಿಗೆ ಮಾರುಕಟ್ಟೆ ಬೆಲೆ ಕಡಿಮೆ. ಆದರೆ ಮೀನುಗಾರಿಕೆ ಋತು ಆರಂಭ ಸಂದರ್ಭ ಸಿಗುವ ಒಳ್ಳೆಯ ಬೆಲೆ ತರುವ ಮೀನುಗಳೇ ಈ ಬಾರಿ ಇಲ್ಲಿವರೆಗೆ ಲಭಿಸಿಲ್ಲ.
    ಸತೀಶ್ ಕುಂದರ್, ಮಾಜಿ ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts