More

    ಕಡಲಿಗಿಳಿದ ನಾಡದೋಣಿ ಮೀನುಗಾರರು, ಮೀನು ವಿಲೇ ಮಾಡಲು ಸ್ಥಳ ನಿಗದಿ

    ಮಂಗಳೂರು/ಉಡುಪಿ/ಉಳ್ಳಾಲ: ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಸರ್ಕಾರ ಅನುಮತಿ ನೀಡಿದ ಕಾರಣ ಮೀನುಗಾರರು ಫುಲ್‌ಖುಷ್ ಆಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 600ರಷ್ಟು ನಾಡದೋಣಿಗಳು ಭಾನುವಾರ ನಿರ್ಭೀತಿಯಿಂದ ಮೀನುಗಾರಿಕೆಗೆ ತೆರಳಿವೆ.

    ದ.ಕ. ಜಿಲ್ಲೆಯಲ್ಲಿ 1,300ದಷ್ಟು ನಾಡದೋಣಿಗಳಿವೆ. ಭಾನುವಾರ ಬೆಳಗ್ಗೆಯಿಂದಲೇ ಮೀನುಗಾರಿಕೆ ನಡೆಯುತ್ತಿದ್ದು, ಸರಾಸರಿ ಒಂದು ಬೋಟ್‌ನಲ್ಲಿ 50-60 ಕೆ.ಜಿ.ಯಷ್ಟು ಕೊಡ್ಡೆ , ಬಂಗುಡೆ, ಬೂತಾಯಿ ಜಾತಿಯ ಮೀನುಗಳು ಸಿಗುತ್ತಿದೆ.
    ನಾಡದೋಣಿಗಳಿಗೆ ಮೀನುಗಳನ್ನು ಬಂದರು ದಕ್ಕೆಯಲ್ಲಿ ಇಳಿಸಲು ಅವಕಾಶ ಇಲ್ಲ. ಬದಲಾಗಿ ಬೈಕಂಪಾಡಿ, ಗುಡ್ಡಕೊಪ್ಲ, ಮುಕ್ಕ, ಸಸಿಹಿತ್ಲು, ಸುಲ್ತಾನ್ ಬತ್ತೇರಿ, ಹೊಯಿಗೆಬಜಾರ್, ಉಳ್ಳಾಲ ಕೋಡಿ, ಕೋಟೆಪುರ, ಮೊಗವೀರಪಟ್ಣ, ಉಳ್ಳಾಲ, ಸೋಮೇಶ್ವರ- ಈ 11 ಸ್ಥಳಗಳಲ್ಲಿ ನಾಡದೋಣಿಯಲ್ಲಿ ತಂದ ಮೀನುಗಳನ್ನು ಮಾರಾಟಕ್ಕೆ ಅವಕಾಶ ನೀಡಲಾಗಿದೆ.

    ಮೀನುಗಾರ ಮಹಿಳೆಯರು ಮೀನು ಮಾರಾಟ ಮಾಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ. ಕೆಲವು ಕಡೆ ಗೊಂದಲ ಉಂಟಾಗಿದೆ ಎಂದು ನಾಡದೋಣಿ ಮಾಲೀಕ ದಯಾನಂದ ಪುತ್ರನ್ ತಿಳಿಸಿದ್ದಾರೆ. ಸಂಕಷ್ಟಕ್ಕೊಳಗಾದ ಮೀನುಗಾರರಿಗೆ ಈಗ ನಿರಾಳತೆ ಸಿಕ್ಕಿದೆ ಎಂದು ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಸೋಲಾರ್ ಪ್ರತಿಕ್ರಿಯಿಸಿದ್ದಾರೆ.

    ಸ್ಥಳೀಯವಾಗಿ ಮಾರಾಟ: ನಾಡದೋಣಿ ಮೀನುಗಾರಿಕೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮೀನು ಲಭ್ಯವಾಗುವುದರಿಂದ ಸ್ಥಳೀಯವಾಗಿ ಮಾರಾಟವಾಗುತ್ತದೆ. ದೂರದ ಊರುಗಳಿಗೆ ಲಭಿಸುವ ಸಾಧ್ಯತೆ ಕಡಿಮೆ. ದರವೂ ಹೆಚ್ಚಾಗಿರುತ್ತದೆ. ಮೀನುಗಾರ ಮಹಿಳೆಯರು ರಖಂ ಆಗಿ ಖರೀದಿಸಿ, ಸ್ಥಳೀಯ ಮಾರುಕಟ್ಟೆ ಹಾಗೂ ಮನೆ ಮನೆಗೆ ಕೊಂಡೊಯ್ದು ಚಿಲ್ಲರೆಯಾಗಿ ಮಾರಾಟ ಮಾಡುತ್ತಾರೆ.

    ಸಾಮಾಜಿಕ ಅಂತರಕ್ಕೆ ಸೂಚನೆ:

    ಮಂಗಳೂರು: ನಾಡದೋಣಿ ಮೀನುಗಾರರು ಸರ್ಕಾರದ ಎಲ್ಲ ಸೂಚನೆಗಳನ್ನು ಪಾಲಿಸಬೇಕು. ಮೀನು ಖರೀದಿ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು. ಕರಾವಳಿ ರಕ್ಷಣಾ ಪೊಲೀಸರು ಈ ಬಗ್ಗೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ. ಭಾನುವಾರ ಮೀನುಗಾರ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ಮೀನುಗಾರರು ಮೀನು ಹಿಡಿದು ತಂದು ಚಿಲ್ಲರೆಯಾಗಿ ಮಾರಾಟ ಮಾಡುವಂತಿಲ್ಲ. ನಿಗದಿತ ಸ್ಥಳಕ್ಕೆ ದೋಣಿ ತಂದು, ಹರಾಜು ಕೂಗಿ, ನಿಗದಿಪಡಿಸಿದ ಖರೀದಿದಾರರಿಗೆ ಮಾತ್ರ ಮಾರಾಟ ಮಾಡಬೇಕು ಎಂದರು.

    ದಕ್ಷಿಣ ಕನ್ನಡ ಜಿಲ್ಲೆಯ 1300ರಷ್ಟು ನಾಡದೋಣಿಗಳ ಪೈಕಿ ಶೇ.50ರಷ್ಟು ಮಳೆಗಾಲ ಹಾಗೂ ಉಳಿದ ಶೇ.50ರಷ್ಟು ದೋಣಿಗಳು ಬೇಸಿಗೆಯಲ್ಲಿ ಮೀನುಗಾರಿಕೆ ನಡೆಸುತ್ತವೆ. ಲಾಕ್‌ಡೌನ್ ನಡುವೆಯೂ ಸರ್ಕಾರ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ.
    -ಸುಭಾಶ್ಚಂದ್ರ ಕಾಂಚನ್, ಕಾರ್ಯಾಧ್ಯಕ್ಷ, ನಾಡದೋಣಿ ಮೀನುಗಾರರ ಸಂಘ ದ.ಕ.ಜಿಲ್ಲೆ

    ಮೀನು ಮಾರುಕಟ್ಟೆ ತೆರೆಯಲು ಬೇಡಿಕೆ
    ಉಡುಪಿ: ಮಲ್ಪೆ, ಕೋಡಿ-ಬೇಂಗ್ರೆ, ಕನ್ಯಾನ, ಸಾಸ್ತಾನ ವಲಯದ ನಾಡದೋಣಿ ಮೀನುಗಾರರು ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 500ರಷ್ಟು ಸಾಂಪ್ರದಾಯಿಕ ಒಳನಾಡು ನಾಡದೋಣಿ ಮೀನುಗಾರಿಕೆ ಬೋಟುಗಳಿವೆ. ಭಾನುವಾರ 70ಕ್ಕೂ ಅಧಿಕ ಬೋಟುಗಳು ಮೀನುಗಾರಿಕೆಗೆ ತೆರಳಿವೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಮೀನುಗಾರಿಕೆ ನಡೆಸುವುದು, ವಿಲೇವಾರಿ, ಮಾರಾಟ ಮಾಡುವ ಬಗ್ಗೆ ಸಲಹೆ ಸೂಚನೆ ನೀಡಲಾಗಿದೆ. ಬಾಪುತೋಟ ಸೇತುವೆ ಬಳಿ, ತೊಟ್ಟಂ ಸಮೀಪ ಮತ್ತು ಮೀನುಗಾರಿಕೆ ನಡೆಸುವವರ ಮನೆಯ ಬಳಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಯಾವ್ಯಾವ ಮೀನು?: ಕಲ್ಲರ್ ಮೀನು, ಮಣಂಗ್, ಕಡಿಮೆ ಪ್ರಮಾಣದಲ್ಲಿ ಬಂಗುಡೆ, ಬೊಳೆಂಜಿಲ್, ಕಂಡಿಗೆ, ಬಯ್ಯ, ಇರ್ಪೆ ಮೀನುಗಳು ನಾಡದೋಣಿ ಮೀನುಗಾರರ ಬಲೆಗೆ ಬೀಳುತ್ತಿವೆ. ಇಳುವರಿ ಅಷ್ಟಾಗಿ ಇಲ್ಲ ಎನ್ನುತ್ತಾರೆ ಮೀನುಗಾರರು.
    ಮಾರುಕಟ್ಟೆಗೆ ಆಗ್ರಹ: ಜಿಲ್ಲೆಯಲ್ಲಿ ದೊಡ್ಡದೊಡ್ಡ ಮೀನು ಮಾರುಕಟ್ಟೆಗಳಿದ್ದು, ಅವುಗಳನ್ನು ಸಮಯ ನಿಗದಿಪಡಿಸಿ ತೆರೆದು ಮೀನು ಮಾರಾಟಕ್ಕೆ ಅನುಕೂಲ ಕಲ್ಪಿಸಿದರೆ ಉತ್ತಮ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹಿಳಾ ಮೀನು ಮಾರಾಟಗಾರರ ಮೀನಿನ ವಾಹನ ಸಾಗಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

    ಈಗಾಗಲೇ ಕೆಲವು ನಾಡದೋಣಿ ಮೀನುಗಾರಿಕೆ ಬೋಟುಗಳು ಮೀನುಗಾರಿಕೆ ಆರಂಭಿಸಿವೆ. ಮೀನು ಮಾರುಕಟ್ಟೆಗಳನ್ನು ತೆರೆದು, ಸಮಯ ನಿಗದಿಪಡಿಸಿದರೆ ಉತ್ತಮ. ಮಹಿಳಾ ಮೀನು ಮಾರಾಟಗಾರರ ರಿಕ್ಷಾ, ಟೆಂಪೋಗಳ ಮೀನು ಸಾಗಾಟಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು.
    – ಕೃಷ್ಣ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ

    14 ಸಾವಿರ ನಾಡದೋಣಿ
    ಕಸುಬು ಆರಂಭ
    ಉಡುಪಿ: ರಾಜ್ಯಾದ್ಯಂತ 14 ಸಾವಿರ ನಾಡದೋಣಿಗಳು ಕಸುಬು ಆರಂಭಿಸಲಿವೆ ಎಂದು ಮೀನುಗಾರಿಕೆ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ. ದೋಣಿಗಳು ಬಂದರಿಗೆ ಬರುವಂತಿಲ್ಲ. ಮನೆ ಮನೆಗೆ ಭೇಟಿ ಕೊಟ್ಟು ಮೀನನ್ನು ಗ್ರಾಹಕರಿಗೆ ಮಾರಾಟ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬೆಂಗಳೂರಿಗೆ ಕರಾವಳಿಯ ಮೀನು ಸದ್ಯಕ್ಕೆ ಪೂರೈಕೆ ಮಾಡುವುದಿಲ್ಲ. ಕರಾವಳಿಯ ಮೂರು ಜಿಲ್ಲೆಗಳ ಬೇಡಿಕೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts