More

    ಮೀನುಗಾರರಿಗೆ ಪಿಂಚಣಿ ಅವಶ್ಯ: ಡಿ.ಕೆ ಶಿವಕುಮಾರ್ ಅಭಿಮತ

    ಉಡುಪಿ: ನಿವೃತ್ತ ಮೀನುಗಾರರಿಗೆ ಪಿಂಚಣಿ ಸೌಲಭ್ಯ ಅಗತ್ಯವಾಗಿದ್ದು, ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೆ ಕೇರಳ ಮಾದರಿಯಲ್ಲಿ ಮೀನುಗಾರರಿಗೆ ಪಿಂಚಣಿ ಯೋಜನೆ ಜಾರಿಗೆ ತರಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

    ಮಲ್ಪೆ ಬಂದರುನಲ್ಲಿ ಮಂಗಳವಾರ ಜರುಗಿದ ಸಮಾಲೋಚನೆ ಸಭೆಯಲ್ಲಿ ಮೀನುಗಾರರ ಅಹವಾಲು ಆಲಿಸಿ, ಮಾತನಾಡಿದರು. ಮೀನುಗಾರಿಕೆಯನ್ನು ನಂಬಿ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿವೆ. ಇದಕ್ಕೆ ಪೂರಕವಾದ ಉದ್ಯಮ, ಉದ್ಯೋಗ ನಂಬಿಕೊಂಡಿರುವ ವರ್ಗವಿದೆ. ಮೀನುಗಾರರಿಗೆ ಸರ್ಕಾರದಿಂದ ಪೂರಕ ಸಹಕಾರ ಸಿಗುತ್ತಿಲ್ಲ. ಸಮುದ್ರದಲ್ಲಿ ಪ್ರಾಣ ಒತ್ತೆಯಿಟ್ಟು ದುಡಿಯುವ ವರ್ಗಕ್ಕೆ ಪಿಂಚಣಿ ಸೌಲಭ್ಯ ಅಗತ್ಯವಾಗಿ ಬೇಕಿದೆ ಎಂದರು.

    ಡೀಸೆಲ್, ಸೀಮೆಎಣ್ಣೆ ಸಬ್ಸಿಡಿ ಬಾಕಿ ಇರಿಸದೆ ಸರ್ಕಾರ ಕೂಡಲೇ ಸಬ್ಸಿಡಿ ಹಣವನ್ನು ಮೀನುಗಾರರಿಗೆ ಬಿಡುಗಡೆ ಮಾಡಬೇಕು. ಈ ಬಗ್ಗೆ ಸದನದಲ್ಲಿ ಮೀನುಗಾರರ ಪರವಾಗಿ ದನಿ ಎತ್ತಲಾಗುವುದು ಎಂದರು. ಕರಾವಳಿ ಸಹಿತ ರಾಜ್ಯಾದ್ಯಂತ ಮೀನುಗಾರರಿಗೆ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ ಎಂದು ಭರವಸೆ ನೀಡಿದರು.

    ಒಂದು ತಿಂಗಳೊಳಗೆ ಅಂಬುಲೆನ್ಸ್: ಮಲ್ಪೆಯ ಮುಳುಗು ತಜ್ಞ, ಜೀವ ರಕ್ಷಕ ಈಶ್ವರ ಮಲ್ಪೆ ಅವರನ್ನು ಡಿ.ಕೆ ಶಿವಕುಮಾರ್ ಅಭಿನಂದಿಸಿದರು. ಪ್ರವಾಸಿಗರು, ಅಪಾಯದಲ್ಲಿ ಸಿಲುಕಿದಾಗ ಅವರ ರಕ್ಷಣೆಗೆ ತುರ್ತು ಆಸ್ಪತ್ರೆಗೆ ಸಾಗಿಸಲು ಅಥವ ಮೃತದೇಹ ಕೊಂಡೊಯ್ಯಲು ಅಗತ್ಯವಾಗಿರುವ ಅಂಬುಲೆನ್ಸ್ ಬಗ್ಗೆ ಈಶ್ವರ ಮಲ್ಪೆ ಪ್ರಸ್ತಾಪಿಸಿದರು. ಮಲ್ಪೆ ಬಂದರುಗೆ ಒಂದು ತಿಂಗಳ ಒಳಗೆ ಅಂಬುಲೆನ್ಸ್ ಒಂದನ್ನು ಪಕ್ಷದ ಸಂಸದರು ಅಥವ ವಿಧಾನ ಪರಿಷತ್ತಿನ ಸದಸ್ಯರ ನಿಧಿಯಿಂದ ಕೊಡಮಾಡಲಾಗುವುದು ಎಂದರು.

    ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಸ್ತಾವಿಸಿದರು. ಮಲ್ಪೆ ಮೀನುಗಾರರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೀವ ಕರ್ಕೇರ, ಮಹಿಳಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷೆ ರಾಧಾ ಸುವರ್ಣ, ಅಖಿಲ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘದ ಗೌರವಾಧ್ಯಕ್ಷ ಬಾಬು ಕುಬಾಲ್, ಕಾರ್ಯದರ್ಶಿ ರಮೇಶ ಕುಂದರ್, ವಿವಿಧ ಮೀನುಗಾರಿಕಾ ಸಂಘಗಳ ಪದಾಧಿಕಾರಿಗಳಾದ ನಾಗರಾಜ ಸುವರ್ಣ, ಮೋಹನ ಕುಂದರ್, ಹರಿಶ್ಚಂದ್ರ ಕಾಂಚನ್, ಜಲಜಾ ಕೋಟ್ಯಾನ್, ಕಿಶೋರ ಸುವರ್ಣ, ಗುರುದಾಸ ಬಂಗೇರ ಸುರೇಶ ಮೆಂಡನ್ ಉಪಸ್ಥಿತರಿದ್ದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಮಾಜಿ ಸಚಿವ ವಿನಯಕುಮಾರ ಸೊರಕೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಐವನ್ ಡಿ’ಸೋಜ, ಮಾಂಕಾಳ ವೈದ್ಯ, ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಮುಖಂಡ ಪ್ರಸಾದ್ ರಾಜ್ ಕಾಂಚನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts