More

    ತೂಫಾನ್ ನಿರೀಕ್ಷೆಯಲ್ಲಿ ಮೀನುಗಾರರು

    ರಾಮಚಂದ್ರ ಕಿಣಿ ಭಟ್ಕಳ
    ಸಮುದ್ರದಲ್ಲಿ ಏಳುವ ತೂಫಾನ್ ಮೀನುಗಾರರಿಗೆ ನಷ್ಟವನ್ನುಂಟು ಮಾಡುತ್ತದೆ, ಜತೆಗೆ ಲಾಭವೂ ತರುತ್ತದೆ. ಇದೀಗ ತೂಫಾನ್ ಎದ್ದರೆ ನಾಡದೋಣಿಗಳ ಮುಖೇನ ಮೀನುಗಾರಿಕೆಗೆ ತೆರಳುವವರಿಗೆ ಅನುಕೂಲವಾಗಲಿದೆ. ಆದರೀಗ ಅಂಥ ಪೂರಕ ವಾತಾವರಣ ಇಲ್ಲದಿರುವುದರಿಂದ ಮೀನುಗಾರರು ಲಾಕ್​ಡೌನ್ ಬಳಿಕ ಮತ್ತೊಂದು ಆಘಾತ ಎದುರಿಸುವಂತಾಗಿದೆ.
    ಭಟ್ಕಳ ತಾಲೂಕಿನಲ್ಲಿ ಸುಮಾರು 650 ನಾಡದೋಣಿಗಳು ಇವೆ. ಆ ಮಾಲೀಕರು 6 ನಾಟಿಕಲ್ ಮೈಲು ದೂರ ( 12 ಕಿ.ಮೀ) ಮೀನುಗಾರಿಕೆಗೆ ತೆರಳಬೇಕಿತ್ತು. ಆದರೆ, ಕಡಲಿನಲ್ಲಿ ಪೂರಕ ವಾತಾವರಣ ಇಲ್ಲದಿರುವುದು ಮೀನುಗಾರಿಕೆ ವಿಳಂಬವಾಗುತ್ತಿದೆ.
    ಕಳೆದ ವರ್ಷ ಜೂನ್ ಎರಡನೇ ವಾರದಲ್ಲಿ ತೂಫಾನ್ ಕಾಣಿಸಿಕೊಂಡಿತ್ತು. ಆ ನಂತರ ನಾಡದೋಣಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಆದರೆ, ಈ ವರ್ಷ ತೌಕ್ತೆ ಚಂಡಮಾರುತದ ನಂತರ ಈವರೆಗೂ ಯಾವುದೇ ತೂಫಾನ್ ಕಾಣಿಸಿಕೊಂಡಿಲ್ಲ. ಹೀಗಾಗಿ ಮೀನುಗಾರಿಕೆಗೆ ತೆರಳಲು ಪೂರಕ ವಾತಾವರಣ ನಿರ್ವಣವಾಗಿಲ್ಲ.
    ಹೇಗಿರುತ್ತೆ ಪೂರಕ ವಾತಾವರಣ: ಮುಂಗಾರು ಮಳೆ ಸುರಿದ ನಂತರ ಮಳೆ ನೀರಿನ ಜತೆ ತ್ಯಾಜ್ಯವೆಲ್ಲ ಸಮುದ್ರ ಸೇರುವುದರಿಂದ ಮೀನುಗಳು ಆಹಾರ ಅರಿಸಿ ಬರುತ್ತವೆ. ಈ ವೇಳೆ ತೂಫಾನ್ ಎದ್ದರೆ ಅದರ ಜತೆಗೆ ಮೀನುಗಳೆಲ್ಲ ಆಳ ಸಮುದ್ರ ಬಿಟ್ಟು ಹೊರ ಬರುತ್ತವೆ. ಹೀಗಾಗಿ 6 ನಾಟಿಕಲ್ ಮೈಲು ದೂರು ಮೀನುಗಾರಿಕೆ ನಡೆಸುವ ನಾಡದೋಣಿ ಮೀನುಗಾರರಿಗೆ ಪೂರಕ ವಾತಾವರಣ ನಿರ್ವಣವಾದಂತಾಗುತ್ತದೆ. ತಾಲೂಕಿನ ಮುರ್ಡೆಶ್ವರ ಬೈಲೂರು, ಕಾಯ್ಕಿಣಿ, ಬೆಳ್ನಿ, ಮುಂಡಳ್ಳಿ, ಬೆಳಕೆ, ಗೊರ್ಟೆಯಲ್ಲಿ ಇಳಿದಾಣಗಳಿವೆ. ಅಳಿವೆಕೋಡಿ, ತೆಂಗಿನಗುಂಡಿ, ಮಾವಿನಕುರ್ವೆಯಲ್ಲಿ ಬಂದರುಗಳಿವೆ. ಇಲ್ಲಿನ ಬಹುತೇಕ ಭಾಗದ ಮೀನುಗಾರರು ಈಗಾಗಲೇ ಗಂಗಾ ಪೂಜೆ ನಡೆಸಿ ಉತ್ತಮ ವಾತಾವರಣಕ್ಕಾಗಿ ಕಾಯುತ್ತಿದ್ದಾರೆ.


    ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ 10 ಎಚ್​ಪಿಗಿಂತ ಕಡಿಮೆ ಇಂಜಿನ್ ಸಾಮರ್ಥ್ಯ ಇರುವ ನಾಡದೋಣಿಗಳು, ಪೂರಕ ವಾತಾವರಣ ವಿದ್ದರೆ ಪಾತಿ ದೋಣಿಗಳು ಮೀನುಗಾರಿಕೆ ನಡೆಸುತ್ತಿದ್ದವು. ಪ್ರತಿಕೂಲ ವಾತವರಣ, ಸಮುದ್ರ ಪೂಜೆ, ಮಹೂರ್ತ ನೋಡಿ ಕೆಲವರು ಮೀನುಗಾರಿಕೆಗೆ ತೆರಳುತ್ತಾರೆ. ಆ ವಲಯದ ಮೀನುಗಾರರು ಜುಲೈ ಮೊದಲ ವಾರದಲ್ಲಿ ಸಮುದ್ರಕ್ಕೆ ಇಳಿಯುವ ನಿರೀಕ್ಷೆ ಇದೆ. | ರವಿ ಎಂ., ಎಡಿಎಫ್, ಮೀನುಗಾರಿಕೆ ಇಲಾಖೆ ಭಟ್ಕಳ


    ಮಾಟ ಬಲೆ ದೋಣಿಗಳು ಸ್ತಬ್ಧ
    ಲಕ್ಷಾಂತರ ರೂ. ಉದ್ಯಮ ತರುತ್ತಿದ್ದ ಮಾಟ ಬಲೆಯ ದೋಣಿಗಳು ಇನ್ನೂ ಕಡಲಿಗೆ ಇಳಿದಿಲ್ಲ. ಇವರು ಕೂಡ ಒಂದು ಉತ್ತಮ ತೂಫಾನ್​ನ ನಿರೀಕ್ಷೆಯಲ್ಲಿದ್ದಾರೆ. ಮಾಟ ಬಲೆ ದೋಣಿಗಳೆಂದರೆ 3 ನಾಡದೋಣಿಗಳು, 22ರಿಂದ 25 ಮೀನುಗಾರರು ಸೇರಿ ಮೀನುಗಾರಿಕೆಗೆ ತೆರಳುತ್ತಾರೆ. ಇದರಲ್ಲಿ ಒಂದು ದೋಣಿಯನ್ನು ಕ್ಯಾರಿಯರ್ ಎಂದು ಪರಿಗಣಿಸಿ ಒಟ್ಟಾಗಿ ಮೀನುಗಾರಿಕೆ ನಡೆಸುತ್ತಾರೆ. ಉತ್ತಮ ಮೀನುಗಾರಿಕೆ ಆಗುತ್ತಿದ್ದಂತೆಯೇ ಕ್ಯಾರಿಯರ್ ದೋಣಿ ದಡಕ್ಕೆ ಬಂದು ಮೀನುಗಳನ್ನು ಇಳಿಸಿ ಮತ್ತೆ ಕಡಲಿಗೆ ತೆರಳುತ್ತದೆ. ಅಷ್ಟರಲ್ಲಿ ಅವರು ಇನ್ನೊಂದು ಬಾರಿ ಹಂಟಿಂಗ್ ನಡೆಸಿರುತ್ತಾರೆ. ಇವರಿಗೆ ಅದೃಷ್ಟವಿದ್ದರೆ ಸುಮಾರು 10ರಿಂದ 15 ಲಕ್ಷ ರೂ. ವರೆಗೂ ವ್ಯವಹಾರ ನಡೆಸುತ್ತಾರೆ. ತಾಲೂಕಿನಲ್ಲಿ ಒಟ್ಟು 16 ಮಾಟ ಬಲೆಯ ದೋಣಿಗಳಿದ್ದು, ಅದರಲ್ಲಿ 10 ಮುರ್ಡೆಶ್ವರದಲ್ಲಿಯೇ ಇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts