More

    ಶೋಭಾ ಕರಂದ್ಲಾಜೆಗೆ ಟಿಕೆಟ್ ಫಿಕ್ಸ್?

    ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ತಮ್ಮದೇ ಆದ ಆಯಾಮದಲ್ಲಿ ಟಿಕೆಟ್‌ಗಾಗಿ ಬೇಡಿಕೆ ಇಡಲಾರಂಭಿಸಿದ್ದಾರೆ. ಇದೆಲ್ಲದರ ನಡುವೆಯೇ ಹಾಲಿ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಫಿಕ್ಸ್ ಎನ್ನಲಾಗುತ್ತಿದೆ.

    ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್‌ಗಾಗಿ ಪ್ರಮುಖವಾಗಿ ನಾಲ್ವರು ಆಕಾಂಕ್ಷಿಗಳಿದ್ದರು. ಹಾಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಸಿ.ಟಿ.ರವಿ, ಡಿ.ಎನ್.ಜೀವರಾಜ್, ಪ್ರಮೋದ್ ಮಧ್ವರಾಜ್ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಎಲ್ಲರೂ ಕ್ಷೇತ್ರದಾದ್ಯಂತ ಈಗಾಗಲೇ ಪ್ರವಾಸವನ್ನೂ ಮಾಡುತ್ತಿದ್ದಾರೆ. ಸಿ.ಟಿ.ರವಿ ಹೊರತುಪಡಿಸಿ ಉಳಿದ ಎಲ್ಲರೂ ತಮಗೇ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ತಮಗೆ ಟಿಕೆಟ್ ಸಿಗದಿದ್ದಲ್ಲಿ ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುವುದಾಗಿ ಹೇಳಿಕೆ ನೀಡುವ ಮೂಲಕ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದಾರೆ.
    ಶೋಭಾ ಕರಂದ್ಲಾಜೆ ಪರ ಚಿಕ್ಕಮಗಳೂರಿನಲ್ಲಿ ಬ್ಯಾಟಿಂಗ್ ನಡೆಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಶೋಭಾ ಕರಂದ್ಲಾಜೆ ಕಳೆದ ಚುನಾವಣೆಯಲ್ಲಿ 3.50 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅದಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಹೇಳುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಅವರೇ ಅಭ್ಯರ್ಥಿ ಎಂದು ಪರೋಕ್ಷವಾಗಿ ಘೋಷಿಸಿದ್ದಾರೆ.
    ಕಳೆದ ಒಂದು ವರ್ಷದಿಂದಲೂ ಮಾಜಿ ಸಚಿವ ಉಡುಪಿಯ ಪ್ರಮೋದ್ ಮಧ್ವರಾಜ್ ಉಡುಪಿ ಸೇರಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಿರಂತರವಾಗಿ ಓಡಾಟ ನಡೆಸುತ್ತಿದ್ದಾರೆ. ಈ ಮೂಲಕ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇನ್ನು ಡಿ.ಎನ್.ಜೀವರಾಜ್ ಪಕ್ಷ ನನಗೆ ಟಿಕೆಟ್ ನೀಡಿದರೆ ನಾನು ಸ್ಪರ್ಧಿಸಲು ಸಿದ್ಧ ಎಂದು ನೇರವಾಗಿಯೇ ಹೇಳುತ್ತಿದ್ದಾರೆ.
    ತಮ್ಮ ವಿರುದ್ಧ ಕ್ಷೇತ್ರದಲ್ಲಿ ಅಭಿಯಾನ ಜೋರಾದ ಬೆನ್ನಲ್ಲೇ ಕಾಫಿನಾಡಿಗೆ ಬಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಮ್ಮ ವಿರುದ್ಧ ಅಭಿಯಾನ ನಡೆಸುತ್ತಿರುವವರ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮ ವಿರುದ್ಧ ಹೋರಾಟ ನಡೆಸುತ್ತಿರುವವರು ಬಿಜೆಪಿ ಕಾರ್ಯಕರ್ತರಾಗಿರಲು ಸಾಧ್ಯವೇ ಇಲ್ಲ. ಒಬ್ಬರ ತೇಜೋವಧೆ ಮಾಡಿ ಇನ್ನೊಬ್ಬರು ಟಿಕೆಟ್ ಕೇಳುವುದು ಸರಿಯಲ್ಲ ಎಂದು ಹೇಳುವ ಜತೆಗೆ ಈ ಬಾರಿಯೂ ತಾವೇ ಚುನಾವಣೆಗೆ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
    ನಾನೇನು ರಾಜಕೀಯ ಸನ್ಯಾಸಿಯಲ್ಲ:
    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಲ್ಲಿ ಸೋತವರಲ್ಲಿ ನಾನೂ ಒಬ್ಬ. ಕೇವಲ 200 ಮತಗಳ ಅಂತರದಲ್ಲಿ ಸೋತಿದ್ದೇನೆ. ನಾನು ಇನ್ನು 100 ಮತಗಳನ್ನು ಪಡೆದಿದ್ದರೆ ಸಾಕು ನಾನೇ ಗೆಲ್ಲುತ್ತಿದ್ದೆ. ನಾನೇನು ರಾಜಕೀಯ ಸನ್ಯಾಸಿಯಲ್ಲ. ಪಕ್ಷ ಅವಕಾಶ ಮಾಡಿಕೊಟ್ಟಲ್ಲಿ ನಾನು ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ವಿಜಯವಾಣಿಗೆ ತಿಳಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರವೇನೂ ಖಾಲಿ ಇಲ್ಲ. ನಮ್ಮವರೇ ಸಂಸದರು ಇದ್ದಾರೆ. ಅವರಿಗೇ ಟಿಕೆಟ್ ಕೊಟ್ಟರೂ ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ. ನಮ್ಮಿಂದ ಯಾವುದೇ ಗೊಂದಲ ಸೃಷ್ಟಿ ಆಗುವುದಿಲ್ಲ. ಪಕ್ಷದ ಚೌಕಟ್ಟಿನಲ್ಲಿ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಪಕ್ಷ ಸೂಚಿಸಿದರೆ ಮಾತ್ರ ನಾನು ಚುನಾವಣೆಗೆ ನಿಲ್ಲುತ್ತೇನೆ. ಯಾರಿಗೇ ಟಿಕೆಟ್ ನೀಡಿದರೂ ಅವರ ಪರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
    ನಾನು ಯಾವುದನ್ನೂ ಕೇಳಿ ಪಡೆದಿಲ್ಲ:
    ಇದುವರೆಗೆ ಪಕ್ಷದಿಂದ ನಾನು ಏನನ್ನೂ ಕೇಳಿ ಪಡೆದಿಲ್ಲ. ಎಲ್ಲವನ್ನೂ ಪಕ್ಷವೇ ನನಗೆ ಕೊಟ್ಟಿದೆ. ಈ ಬಾರಿಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾನು ಆಕಾಂಕ್ಷಿಯಲ್ಲ. ಅಭಿಮಾನಿಗಳು ನನಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ಮಾಜಿ ಸಚಿವ ಸಿ.ಟಿ.ರವಿ ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ. ಪಕ್ಷ ಒಂದು ವೇಳೆ ಸೂಚಿಸಿದಲ್ಲಿ ಸ್ಪರ್ಧೆಗೆ ರೆಡಿ ಎನ್ನುವುದನ್ನು ಸಿ.ಟಿ.ರವಿ ಪರೋಕ್ಷವಾಗಿ ಹೇಳಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಮಲವೇ ನಮ್ಮ ಅಭ್ಯರ್ಥಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಹೀಗಾಗಿ ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದಿದ್ದಾರೆ.
    ಮೀನುಗಾರರಿಗೆ ಟಿಕೆಟ್ ನೀಡಿ:
    ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಗುಜರಾತ್‌ನಿಂದ ಹಿಡಿದು ಪಶ್ಚಿಮ ಬಂಗಾಳದವರೆಗೆ ಇರುವ ಸಮುದ್ರ ತೀರ ವ್ಯಾಪ್ತಿಯಲ್ಲಿ ಎಲ್ಲಿಯೂ ಮೀನುಗಾರರಿಗೆ ಬಿಜೆಪಿಯಿಂದ ಟಿಕೆಟ್ ನೀಡಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಮೀನುಗಾರ ಸಮುದಾಯಕ್ಕೆ ಸೇರಿದ ತಮಗೇ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಪಕ್ಷದ ನಾಯಕರಲ್ಲಿ ಮನವಿ ಮಾಡಿದ್ದೇನೆ ಎಂದು ಪ್ರಮೋದ್ ಮಧ್ವರಾಜ್ ವಿಜಯವಾಣಿಗೆ ಮಾಹಿತಿ ನೀಡಿದರು. ನಾನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಬಿಜೆಪಿಗೆ ಸೇರಿದ್ದೇನೆ. ಈಗ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಒಂದು ವೇಳೆ ಟಿಕೆಟ್ ಸಿಗದಿದ್ದಲ್ಲಿ ಬಿಜೆಪಿ ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ. ನನ್ನ ಜೀವವಿರುವರೆಗೆ ಬಿಜೆಪಿಯಲ್ಲೇ ಇರುತ್ತೇನೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.
    ಸಭೆ ನಡೆಸಿದ ಕೇಂದ್ರ ಸಚಿವೆ:
    ಚಿಕ್ಕಮಗಳೂರು ಜಿಲ್ಲೆಯಲ್ಲಿ ಗೋ ಬ್ಯಾಕ್ ಶೋಭಾ ಅಭಿಯಾನ ದೊಡ್ಡಮಟ್ಟದಲ್ಲಿ ಆರಂಭಗೊಳ್ಳುತ್ತಿದ್ದಂತೆ ಚಿಕ್ಕಮಗಳೂರಿಗೆ ಆಗಮಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ನಾಯಕರ ಜತೆ ಸಭೆ ನಡೆಸಿ ಅಭಿಯಾನದ ಕುರಿತು ಮಾಹಿತಿ ಪಡೆದರು. ಪಕ್ಷದ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಸೇರಿ ಪ್ರಮುಖ ನಾಯಕರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ತನ್ನ ವಿರುದ್ಧ ಅಭಿಯಾನ ನಡೆಸುತ್ತಿರುವವರು ಯಾರು? ಅಭಿಯಾನ ನಡೆಸಲು ಕಾರಣವೇನು? ಅವರ ಹಿಂದೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ಮಾಹಿತಿ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts