More

    ಮೊದಲ ದಿನ 3 ಲಕ್ಷ ಲಸಿಕೆ; ದೇಶದ ಬೃಹತ್ ಲಸಿಕೆ ಅಭಿಯಾನಕ್ಕೆ ನಾಳೆ ಚಾಲನೆ

    ನವದೆಹಲಿ: ದೇಶದಲ್ಲಿ ಕರೊನಾ ಲಸಿಕೆ ಅಭಿಯಾನಕ್ಕೆ ಶನಿವಾರ ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಆನ್​ಲೈನ್ ಮೂಲಕ ಚಾಲನೆ ನೀಡಲಿದ್ದು, ಮೊದಲ ದಿನ 3 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ದೇಶಾದ್ಯಂತ 3006 ಸ್ಥಳಗಳಲ್ಲಿ ಲಸಿಕೆ ಅಭಿಯಾನ ಆರಂಭವಾಗಲಿದೆ. ಪ್ರತಿ ಕೇಂದ್ರದಲ್ಲಿ 100 ಜನರಿಗೆ ಲಸಿಕೆ ನೀಡಲಾಗುತ್ತದೆ. ಕ್ರಮೇಣ ಕೇಂದ್ರಗಳ ಸಂಖ್ಯೆಯನ್ನು 5000ಕ್ಕೆ ಹೆಚ್ಚಿಸಲಾಗುತ್ತದೆ ಎಂದು ನೀತಿ ಆಯೋಗದ ಸದಸ್ಯ ಹಾಗೂ ರಾಷ್ಟ್ರೀಯ ಕರೊನಾ ಕಾರ್ಯ ಪಡೆ ಮುಖ್ಯಸ್ಥ ವಿ.ಕೆ. ಪೌಲ್ ಗುರುವಾರ ತಿಳಿಸಿದ್ದಾರೆ.

    ಮೊದಲ ಹಂತದಲ್ಲಿ ಆದ್ಯತೆ ಮೇಲೆ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ಆರೋಗ್ಯ ಸೇವಾ ಸಿಬ್ಬಂದಿಯ ದತ್ತಾಂಶದ ಆಧಾರದಲ್ಲಿ ರಾಜ್ಯಗಳಿಗೆ ಲಸಿಕೆಯನ್ನು ನಿಗದಿಪಡಿಸಲಾಗಿದೆ. ಲಸಿಕೆ ಪಡೆಯಲು ಆರೋಗ್ಯ ಸೇವಾ ಸಿಬ್ಬಂದಿ ಗಾಬರಿ ಪಡಬೇಕಾಗಿಲ್ಲ. ಅವರು ಇತರರಿಗೆ ಆದರ್ಶಪ್ರಾಯರಾಗಬೇಕು ಎಂದು ಪೌಲ್ ಹೇಳಿದರು. ಶನಿವಾರ ಲಸಿಕೆ ಅಭಿಯಾನ ಆರಂಭವಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೆಲವು ನಗರಗಳ ಆರೋಗ್ಯ ಕಾರ್ಯಕರ್ತರೊಂದಿಗೆ ಆನ್​ಲೈನ್​ನಲ್ಲಿ ಸಂವಾದ ನಡೆಸಲಿದ್ದಾರೆ.

    ಅಡ್ಡ ಪರಿಣಾಮವಾದರೆ ಸಂಸ್ಥೆಗಳಿಗೆ ದಂಡ: ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಪಡೆದಿರುವ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳಿಂದ ಅಡ್ಡ ಪರಿಣಾಮ ಆದರೆ ಅವುಗಳನ್ನು ತಯಾರಿಸುವ ಸಂಸ್ಥೆಗಳು ದಂಡ ತೆರಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಆಕ್ಸ್​ಫರ್ಡ್-ಆಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್​ನ್ನು ಪುಣೆಯ ಸೆರಂ ಸಂಸ್ಥೆ ಉತ್ಪಾದಿಸುತ್ತಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಹೈದರಾಬಾದ್​ನ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ. ಭಾರತ ಸೆರಂ ಸಂಸ್ಥೆ (ಎಸ್​ಐಐ) ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ದಂಡ ನೀಡಬೇಕಾಗುತ್ತದೆ ಎಂಬ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದು ಮುಂದೆ ಅನುಮೋದಿಸಲಾಗುವ ಲಸಿಕೆ ಕಂಪನಿಗಳಿಗೂ ಅನ್ವಯವಾಗುತ್ತದೆ. ಲಸಿಕೆ ಖರೀದಿ ಒಪ್ಪಂದದಲ್ಲಿ ಈ ಅಂಶ ಅಡಕವಾಗಿದೆ. ಸಿಡಿಎಸ್​ಸಿಒ/ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾನೂನು/ಡಿಸಿಜಿಐ ನೀತಿ/ಅನುಮೋದನೆ ಅನ್ವಯ ಲಸಿಕೆ ಪಡೆದವರ ಆರೋಗ್ಯದಲ್ಲಿ ವ್ಯತ್ಯಯವಾದರೆ ಸಂಬಂಧಿತ ಕಂಪೆನಿಗಳು ದಂಡ ತೆರುವುದು ಕಡ್ಡಾಯ ಎಂದು ಖರೀದಿ ಒಪ್ಪಂದದಲ್ಲಿ ತಿಳಿಸಲಾಗಿದೆ. ಗಂಭೀರ ಅಡ್ಡ ಪರಿಣಾಮ ಉಂಟಾದಲ್ಲಿ ಅದನ್ನು ಕಂಪನಿಗಳು ಸರ್ಕಾರಕ್ಕೆ ತಿಳಿಸಬೇಕಾಗುತ್ತದೆ ಎಂದೂ ಸ್ಪಷ್ಟಪಡಿಸಲಾಗಿದೆ.

    ಇಂಡೆಮ್ನಿಟಿ ಅಸಾಧ್ಯ: ಅಡ್ಡ ಪರಿಣಾಮವಾದರೆ ಅದಕ್ಕೆ ದಂಡ ತೆರುವುದು ಹಾಗೂ ಕಾನೂನು ಕ್ರಮದಿಂದ ವಿನಾಯಿತಿ ನೀಡಬೇಕೆನ್ನುವುದನ್ನು (ಇಂಡೆಮ್ನಿಟಿ) ಒಪ್ಪಲು ಸಾಧ್ಯವೇ ಇಲ್ಲ ಎಂದು ಸರ್ಕಾರ ಹೇಳಿದೆ. ಫೈಜರ್ ಜೊತೆಗೆ ಭಾರತ ಸರ್ಕಾರ ಲಸಿಕೆ ಖರೀದಿ ಸಂಬಂಧ ಮಾತುಕತೆ ನಡೆಸುತ್ತಿದ್ದು ಇಂಡೆಮ್ನಿಟಿಗಾಗಿ ಫೈಜರ್ ಆಗ್ರಹಿಸಿದೆ. ಸೆರಂ ಸಿಇಒ ಆದರ್ ಪೂನಾವಾಲಾ, ಭಾರತ್ ಬಯೋಟೆಕ್ ಕೂಡ ಇದೇ ಆಗ್ರಹ ಮುಂದಿಟ್ಟಿದೆ.

    ಲಸಿಕೆ ಪಡೆಯುವ ಪ್ರಥಮ ಸಂಸದ: ಗೌತಮಬುದ್ಧ ನಗರದ ಲೋಕಸಭಾ ಸದಸ್ಯ ಡಾ. ಮಹೇಶ್ ಶರ್ಮಾ ಕೋವಿಡ್-19 ಲಸಿಕೆ ಪಡೆಯಲಿರುವ ಮೊದಲ ಸಂಸದರಾಗಲಿದ್ದಾರೆ. ಅಭಿಯಾನದ ಮೊದಲ ದಿನವಾದ ಶನಿವಾರ ಶರ್ಮಾ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ.

    ಪಲ್ಸ್ ಪೋಲಿಯೊ 31ಕ್ಕೆ

    ಕೋವಿಡ್-19 ಲಸಿಕೆ ಅಭಿಯಾನ ಜನವರಿ 16ರಂದು ಆರಂಭವಾಗಲಿರುವುದರಿಂದ ಪೋಲಿಯೊ ಹನಿ ನೀಡಿಕೆ ದಿನಾಂಕವನ್ನು ಜನವರಿ 31ಕ್ಕೆ ನಿಗದಿಪಡಿಸಲಾಗಿದೆ. ಜನವರಿ 17ರಂದು ಪೋಲಿಯೊ ಲಸಿಕೆ ನೀಡಿಕೆ ನಿಗದಿಪಡಿಸಲಾಗಿತ್ತು. ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುತ್ತದೆ. ಜನವರಿ 31 ‘ಪೋಲಿಯೊ ಭಾನುವಾರ’ ಆಗಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ ಜನವರಿ 30ರಂದು ಪಲ್ಸ್ ಪೋಲಿಯೊ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

    ವುಹಾನ್ ತಲುಪಿದ ಡಬ್ಲ್ಯುಎಚ್​ಒ ತಂಡ

    ಕರೊನಾ ವೈರಸ್ ಮೂಲದ ಪತ್ತೆಗಾಗಿ ನಿಯುಕ್ತಿಗೊಂಡಿರುವ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್​ಒ) 10 ಸದಸ್ಯರ ತಜ್ಞರ ತಂಡ ಗುರುವಾರ ವುಹಾನ್​ಗೆ ಬಂದಿಳಿದಿದೆ. ಕರೊನಾ ಮಹಾಮಾರಿ 2019ರಲ್ಲಿ ಮೊದಲ ಬಾರಿಗೆ ವುಹಾನ್ ಪ್ರಾಂತ್ಯದಲ್ಲಿ ಪತ್ತೆಯಾಗಿತ್ತು. ತಂಡದ ಭೇಟಿಗೆ ಮೊದಮೊದಲು ಅನುಮತಿ ನಿರಾಕರಿಸಿದ್ದರಿಂದ ಚೀನಾ ಸರ್ಕಾರ ವ್ಯಾಪಕ ಟೀಕೆಗೆ ಒಳಗಾಗಿತ್ತು. ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ, ಜಪಾನ್, ಬ್ರಿಟನ್, ರಷ್ಯಾ, ನೆದರ್ಲೆಂಡ್, ಕತಾರ್ ಮತ್ತು ವಿಯೆಟ್ನಾಂ ತಜ್ಞರು ತಂಡದಲ್ಲಿದ್ದಾರೆ.

    24*7 ಕಾಲ್​ಸೆಂಟರ್: ಕೋವಿಡ್-19 ಸಾಂಕ್ರಾಮಿಕತೆ, ಲಸಿಕೆ ಲಭ್ಯತೆ ಮತ್ತು ಕೊ-ವಿನ್ ಸಾಫ್ಟ್​ವೇರ್ ಕುರಿತ ಅನುಮಾನ ಹಾಗೂ ಪ್ರಶ್ನೆಗಳಿಗೆ ಉತ್ತರಿಸಲು ದಿನವಿಡೀ ಕಾರ್ಯ ನಿರ್ವಹಿಸುವ ಕಾಲ್​ಸೆಂಟರ್ ಸ್ಥಾಪಿಸಲಾಗಿದೆ. ಕರೆ ಮಾಡಬೇಕಾದ ಸಂಖ್ಯೆ 1075.

    ಭಾರತದಲ್ಲಿ ಕರೊನಾ

    • ಹೊಸ ಪ್ರಕರಣ: 16,946
    • ಒಟ್ಟು ಪ್ರಕರಣ: 1.05 ಕೋಟಿ
    • ಒಟ್ಟು ಸಾವು: 1,51,000
    • ಚೇತರಿಕೆ: 1.01 ಕೋಟಿ
    • ಸಕ್ರಿಯ ಪ್ರಕರಣ: 2,13,603.

    12 ನಗರಗಳಿಗೆ ಲಸಿಕೆ: ಮೊದಲ ಹಂತದಲ್ಲಿ ನೀಡಲು ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳನ್ನು 12 ನಗರಗಳಿಗೆ ರವಾನಿಸಲಾಗಿದೆ.

    165 ಲಕ್ಷ ಡೋಸ್ ಖರೀದಿ: 110 ಲಕ್ಷ ಡೋಸ್ ಕೋವಿಶೀಲ್ಡ್ ಮತ್ತು 55 ಲಕ್ಷ ಕೊವ್ಯಾಕ್ಸಿನ್ ಲಸಿಕೆಯನ್ನು ಸರ್ಕಾರ ಖರೀದಿಸಿದೆ. ಲಸಿಕೆ ಅಭಿಯಾನ ಆರಂಭವಾದ ನಂತರ ಪ್ರಧಾನಿಯೊಂದಿಗೆ ಸಂವಾದ ನಡೆಸಲು ತಮಿಳುನಾಡಿನ ಕೊಯಮತ್ತೂರು ಮೆಡಿಕಲ್ ಕಾಲೇಜ್ ಮತ್ತು ಪೊಲ್ಲಾಚಿಯಲ್ಲಿರುವ ಸರ್ಕಾರಿ ಆಸ್ಪತ್ರೆ ಸನ್ನದ್ಧಗೊಳ್ಳುತ್ತಿವೆ.

    ಗಂಡನನ್ನು ಬಿಟ್ಟಿರಲಾಗದೆ ಕೋರ್ಟ್ ಮಹಡಿಯಿಂದ ಕೆಳಕ್ಕೆ ಹಾರಿದಳು!

    ನಿವೃತ್ತ ಸೈನಿಕರ ಪುತ್ರಿಯನ್ನೇ ಅಪಹರಿಸಿ ಮತಾಂತರಿಸಿದನಾ ಕರ್ನಾಟಕದ ಈ ವ್ಯಕ್ತಿ?!

    ಕೆಲಸ ಕಳೆದುಕೊಂಡ ಅಪ್ಪನಿಗಾಗಿ ಆಟೋ ಡ್ರೈವರ್​ ಆದ ಮಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts