More

    ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್​ ಮತ್ತು ಇಬ್ಬರಿಗೆ ಬಂಧನದ ಭೀತಿ?: ಎಫ್​ಐಆರ್​ ದಾಖಲಿಸಿರುವ ಪೊಲೀಸರು

    ಔರಂಗಾಬಾದ್​: ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಮೊಹಮ್ಮದ್ ಅಜರುದ್ದೀನ್ ಮತ್ತು ಇತರ ಇಬ್ಬರ ವಿರುದ್ಧ ವಂಚನೆ ಪ್ರಕರಣದ ಎಫ್​ಐಆರ್ ದಾಖಲಾಗಿದೆ.
    ಟ್ರಾವೆಲ್ ಏಜೆಂಟ್ ಒಬ್ಬರಿಗೆ 2019ರ ನವೆಂಬರ್​ನಲ್ಲಿ 20.96 ಲಕ್ಷ ರೂಪಾಯಿ ವಂಚಿಸಿದ ಆರೋಪವನ್ನು ಇವರು ಎದುರಿಸುತ್ತಿದ್ದಾರೆ.

    ಎಫ್​ಐಆರ್ ದಾಖಲಾಗಿರುವ ವಿಚಾರವನ್ನು ತನಿಖಾಧಿಕಾರಿ ಪಿಎಸ್​ಐ ಅಮರನಾಥ್ ಡಿ ನಗ್ರೆ ಖಚಿತಪಡಿಸಿದ್ದು, ಅಜರುದ್ದೀನ್ ಮತ್ತು ಇತರ ಇಬ್ಬರು ಟ್ರಾವೆಲ್ ಏಜೆಂಟ್​ಗೆ ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ. ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಒಂದೊಮ್ಮೆ ಅವರು ಕೋರ್ಟ್​ನಲ್ಲಿ ಕೂಡಲೇ ವಂಚಿಸಿದ ಹಣವನ್ನು ಪಾವತಿಸಿದರೆ ಅವರಿಗೆ ತತ್​​ಕ್ಷಣವೆ ರಿಲೀಫ್ ಸಿಗಲಿದೆ. ಇಲ್ಲದೇ ಹೋದರೆ ಮೂವರನ್ನೂ ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

    ಈ ನಡುವೆ, ಟ್ರಾವೆಲ್ ಏಜೆಂಟ್ ಆರೋಪವನ್ನು ಅಲ್ಲಗಳೆದಿರುವ ಅಜರುದ್ದೀನ್, ಔರಂಗಾಬಾದ್​ನಲ್ಲಿ ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆ. ನನ್ನ ಲೀಗಲ್​ ಟೀಮ್​ ಅನ್ನು ಸಂಪರ್ಕಿಸಿದ್ದು ಮುಂದಿನ ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ.

     

    ಏನಿದು ಪ್ರಕರಣ?: ಮಹಾರಾಷ್ಟ್ರದ ಔರಂಗಾಬಾದ್​ ನಲ್ಲಿರುವ ದಾನಿಶ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಏಜೆನ್ಸಿಯ ಮಾಲೀಕ ಶಹಾಬ್​ ಮೊಹಮ್ಮದ್ ವಂಚನೆಗೊಳಗಾದ ವ್ಯಕ್ತಿ. ಈತ ನೀಡಿರುವ ದೂರಿನ ಪ್ರಕಾರ, ಅಜರುದ್ದೀನ್ ಮತ್ತು ಇತರೆ ಇಬ್ಬರು ಕಳೆದ ವರ್ಷ ನವೆಂಬರ್​ನಲ್ಲಿ ಶಹಾಬ್ ಮೊಹಮ್ಮದ್ ಏಜೆನ್ಸಿ ಮೂಲಕ 20.96 ಲಕ್ಷ ರೂಪಾಯಿ ಮೌಲ್ಯದ ಹಲವು ಇಂಟರ್ ನ್ಯಾಷನಲ್ ಫ್ಲೈಟ್ ಟಿಕೆಟ್​ಗಳನ್ನು ಬುಕ್ ಮಾಡಿದ್ದರು. ಇದನ್ನು ಅಜರುದ್ದೀನ್ ಅವರ ಪರ್ಸನಲ್ ಅಸಿಸ್ಟೆಂಟ್ ಮುಜೀಬ್ ಖಾನ್ ಮನವಿ ಮೇರೆಗೆ ಮಾಡಲಾಗಿತ್ತು.

    ಹಣಪಾವತಿಸುವಂತೆ ಕೋರಿದಾಗ ಪ್ರತಿ ಸಲವೂ ಆನ್​ಲೈನ್ ಪೇಮೆಂಟ್​ನ ಭರವಸೆ ನೀಡಲಾಗಿತ್ತು. ಆದರೆ, ಯಾವುದೇ ಹಣ ವರ್ಗಾಯಿಸಿರಲಿಲ್ಲ. ಕೊನೆಗೆ ಇ-ಮೇಲ್​ ಮೂಲಕ ಖಾನ್ ಅವರ ಸಹಚರ ಸುದೇಶ್ ಅವಕ್ಕಲ್​ ಅವರು ಉತ್ತರಿಸಿದ್ದು, 10.6 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾಗಿ ಹೇಳಿದ್ದರು. ಆದರೆ, ಹಣ ಖಾತೆಗೆ ಜಮೆ ಆಗಿರಲಿಲ್ಲ.

    ನನಗೆ ಖಾನ್ ಅವರು ಬಹಳ ವರ್ಷಗಳಿಂದ ಚಿರಪರಿಚಿತರು. ಅಜರುದ್ದೀನ್ ಅವರಿಗೆ ಫ್ಲೈಟ್ ಟಿಕೆಟ್​ಗಳನ್ನು ಇಲ್ಲಿಂದಲೇ ಬುಕ್ ಮಾಡಲಾಗುತ್ತಿತ್ತು. ಈ ಸಲ ಅವರು ನವೆಂಬರ್ 9ರಂದು ಪ್ರಯಾಣಿಸಿದ್ದು ಮುಂಬೈನಿಂದ ದುಬೈ ಅಲ್ಲಿಂದ ಪ್ಯಾರಿಸ್​ಗೆ ಬಳಿಕ ದೆಹಲಿ ಮೂಲಕ ಮುಂಬೈಗೆ ವಿಮಾನದ ಮೂಲಕವೇ ನವೆಂಬರ್ 12ರಂದು ವಾಪಸಾಗಿದ್ದಾರೆ. ಇದರ ಟಿಕೆಟ್ ಮೊತ್ತವೇ 20.96 ಲಕ್ಷ ರೂಪಾಯಿ ಎಂದು ದೂರಿನಲ್ಲಿ ವಿವರಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts