More

    ಮ್ಯಾಮ್ಕೋಸ್ ವಿರುದ್ಧ ಆರೋಪಕ್ಕೆ ದಾಖಲಿ ನೀಡಿ: ಮಹೇಶ್ ಸವಾಲು

    ಶಿವಮೊಗ್ಗ: ಮ್ಯಾಮ್ಕೋಸ್ (ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ)ಬಗ್ಗೆ ಕಾಂಗ್ರೆಸ್ ಮುಖಂಡ ಕಡ್ತೂರು ದಿನೇಶ್ ಮಾಡಿರುವ ಆರೋಪಗಳು ನಿರಾಧಾರವಾಗಿವೆ. ಇದು ಷೇರುದಾರರಲ್ಲಿ ಗೊಂದಲ ಮೂಡಿಸಿದೆ. ಆರೋಪಗಳಿಗೆ ಅವರು ನಿಖರವಾದ ದಾಖಲೆಗಳನ್ನು ಒದಗಿಸಲಿ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ ಸವಾಲು ಹಾಕಿದ್ದಾರೆ.

    ಇತ್ತೀಚೆಗೆ ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಡ್ತೂರು ದಿನೇಶ್ ಸಂಘದ ಕಾರ್ಯಚಟುವಟಿಕೆಗೆ ಬಗ್ಗೆ ಗೊಂದಲಪೂರಿತ ಆರೋಪಗಳನ್ನು ಮಾಡಿದ್ದಾರೆ. ಅವರು ನೀಡಿರುವ ಅಂಕಿ ಅಂಶಗಳು, ಕಾರಣಗಳು ವಾಸ್ತವಕ್ಕೆ ಸಮೀಪವೂ ಇಲ್ಲ ಎಂದು ಹೇಳಿದರು.
    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಮಟ್ಟದಲ್ಲಿ ಷೇರುದಾರರ ಸಭೆ ನಡೆಸಲು ಅವಕಾಶವಿಲ್ಲ. ಇದರಿಂದ 3.60 ಕೋಟಿ ರೂ. ಖರ್ಚಾಗಿದೆ ಎಂದು ಕಡ್ತೂರು ದಿನೇಶ್ ಆರೋಪಿಸಿದ್ದಾರೆ. 2005ರಿಂದ ಪ್ರತಿವರ್ಷ ತಾಲೂಕು ಮಟ್ಟದಲ್ಲಿ ಷೇರುದಾರರ ಸಭೆ ನಡೆಸಲಾಗಿದೆ. ಇದಕ್ಕಾಗಿ ಖರ್ಚಾಗಿರುವುದು 79.36 ಲಕ್ಷ ರೂ. ಸಭೆ ನಡೆಸಲು ಪ್ರತಿವರ್ಷ ಷೇರುದಾರರ ಸಾಮಾನ್ಯ ಸಭೆಯಲ್ಲಿ ಅನುಮತಿ ಪಡೆಯಲಾಗುತ್ತಿದೆ. ಹೀಗಾಗಿ ಇದು ಕಾನೂನುಬಾಹಿರವಲ್ಲ ಎಂದು ಸ್ಪಷ್ಟಪಡಿಸಿದರು.
    ಬೈಲಾ ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲು ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆ ಪ್ರಕಾರ ಕ್ರಮ ವಹಿಸಲಾಗಿದೆ. ನಾವು ಕಳುಹಿಸಿರುವ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದೆ ಎಂದು ಕಡ್ತೂರು ದಿನೇಶ್ ಹೇಳಿದ್ದಾರೆ. ಆದರೆ ಈ ಬಗ್ಗೆ ನಮಗೆ ಸರ್ಕಾರದಿಂದ ಯಾವುದೇ ಮಾಹಿತಿ ದೊರೆತಿಲ್ಲ. ಒಂದು ವೇಳೆ ಇದು ನಿಜವಾಗಿದ್ದರೂ ಮೇಲ್ಮನವಿಗೆ ಅವಕಾಶವಿದೆ ಎಂದರು.
    ನಾಲ್ಕು ಸಾವಿರ ಕೋಟಿ ರೂ.ಸುಳ್ಳು: ಮ್ಯಾಮ್ಕೋಸ್‌ನಲ್ಲಿ ವಾರ್ಷಿಕ ನಾಲ್ಕು ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಕೇವಲ ನಾಲ್ಕು ಕೋಟಿ ರೂ. ಲಾಭ ಎಂದು ಹೇಳಲಾಗುತ್ತಿದೆ ಎಂದು ಕಡ್ತೂರು ದಿನೇಶ್ ಮತ್ತೊಂದು ಆರೋಪ ಮಾಡಿದ್ದಾರೆ. ಇದು ಸಂಪೂರ್ಣ ಸುಳ್ಳು. 2022-23ರಲ್ಲಿ ನಮ್ಮ ಸಂಸ್ಥೆ ನಡೆಸಿದ ವಹಿವಾಟು 1,227 ಕೋಟಿ ರೂ. ಮಾತ್ರ. ನಿಯಮಾನುಸಾರ ಸಂಸ್ಥೆಯಿಂದ ಶೇ.10 ಡಿವಿಡೆಂಡ್ ನೀಡಲಾಗುತ್ತಿದೆ. ಇದಲ್ಲದೇ ಸದಸ್ಯರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕರೊನಾ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಸದಸ್ಯರು ನಮ್ಮ ವಿಮೆ ಸೌಲಭ್ಯದ ಪ್ರಯೋಜನ ಪಡೆದಿದ್ದರು ಎಂದು ಎಚ್.ಎಸ್.ಮಹೇಶ್ ಹುಲ್ಕುಳಿ ತಿಳಿಸಿದರು.
    ನಾವು ತಾಲೂಕು ಮಟ್ಟದಲ್ಲಿ ಷೇರುದಾರರ ಸಭೆ ನಡೆಸಿದ ಬಳಿಕ ಸದಸ್ಯರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಸಂಸ್ಥೆಗೆ ಅನುಕೂಲವಾಗಿದೆಯೇ ಹೊರತು ತೊಂದರೆಯಾಗಿಲ್ಲ. ಆದರೆ ಒಂದು ಪಕ್ಷದ ವೇದಿಕೆಯಲ್ಲಿ ಕುಳಿತು ಕಡ್ತೂರು ದಿನೇಶ್ ಮಾಡಿರುವ ಆರೋಪಗಳು ಆಶ್ಚರ್ಯ ಮೂಡಿಸಿದೆ. ಅವರ ಆರೋಪಗಳಿಗೆ ಸದಸ್ಯರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದು ಸಂಸ್ಥೆಯ ಪ್ರಗತಿಯನ್ನು ವಿವರಿಸಿದರು.
    ಚುನಾವಣೆಯೇ ಕಾರಣ: ಇನ್ನು ನಾಲ್ಕು ತಿಂಗಳಲ್ಲಿ ನಡೆಯುವ ಲೋಕಸಭೆ ಚುನಾವಣೆ ಹಾಗೂ ಮುಂದಿನ ವರ್ಷ ನಡೆಯಲಿರುವ ಮ್ಯಾಮ್ಕೋಸ್ ಆಡಳಿತ ಮಂಡಳಿ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕಡ್ತೂರು ದಿನೇಶ್ ಇಂತಹ ಆರೋಪಗಳನ್ನು ಮಾಡಿದ್ದಾರೆ ಎಂಬುದು ಸ್ಪಷ್ಟ. ಸಹಕಾರ ಭಾರತಿ ಮೂಲಕ ಸ್ಪರ್ಧಿಸಿ ಗೆದ್ದಿರುವ ಆಡಳಿತ ಮಂಡಳಿಯ ಎಲ್ಲರೂ ಸಹಕಾರಿ ತತ್ವಗಳಿಗೆ ಬದ್ಧರಾಗಿದ್ದೇವೆ. ನಾವೆಂದೂ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ರಾಜಕೀಯ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಇಂತಹ ಆರೋಪಗಳಿಂದ ಸಂಸ್ಥೆಗೆ ಹಿನ್ನಡೆಯಾಗಬಾರದು ಎಂಬುದಷ್ಟೇ ನಮ್ಮ ಕಾಳಜಿ. ಮ್ಯಾಮ್ಕೋಸ್ ಆಡಳಿತ ಅತ್ಯಂತ ಪಾರದರ್ಶಕವಾಗಿದೆ ಎಂದು ಎಚ್.ಎಸ್.ಮಹೇಶ್ ಹುಲ್ಕುಳಿ ತಿಳಿಸಿದರು.
    ಕಾನೂನು ಕ್ರಮ: ನಾವೆಂದೂ ದ್ವೇಷದ ಪ್ರತಿಕ್ರಿಯೆ ನೀಡುವವರಲ್ಲ. ಮಾಡಿರುವ ಆರೋಪಗಳಿಗೆ ಕಡ್ತೂರು ದಿನೇಶ್ ಸೂಕ್ತ ಸಾಕ್ಷಾೃಧಾರಗಳನ್ನು ನೀಡಬೇಕು. ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆಯೂ ಆಡಳಿತ ಮಂಡಳಿ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಿದೆ. ಅವರ ಆರೋಪಗಳಿಗೆ ನಾವು ಸ್ಪಷ್ಟೀಕರಣ ನೀಡದೇ ಇದ್ದರೆ ಸದಸ್ಯರಲ್ಲಿ ಗೊಂದಲ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಸ್ಪಷ್ಟನೆ ನೀಡಲಾಗಿದೆ ಎಂದು ಮಹೇಶ್ ಹುಲ್ಕುಳಿ ಆಡಳಿತ ಮಂಡಳಿ ನಡೆಯನ್ನು ಸಮರ್ಥಿಸಿಕೊಂಡರು.
    ನಿರ್ದೇಶಕರಾದ ಸಿ.ಬಿ.ಈಶ್ವರ, ಬಿ.ಸಿ.ನರೇಂದ್ರ, ಕೀರ್ತಿರಾಜ್, ಕೆ.ವಿ.ಕೃಷ್ಣಮೂರ್ತಿ, ಕೆ.ರತ್ನಾಕರ, ವೈ.ಎಸ್.ಸುಬ್ರಹ್ಮಣ್ಯ, ಜಿ.ಇ.ವಿರೂಪಾಕ್ಷಪ್ಪ, ಸುರೇಶ್ಚಂದ್ರ, ಕೆ.ಕೆ.ಜಯಶ್ರೀ, ವಿಜಯಲಕ್ಷ್ಮೀ, ಬಡಿಯಣ್ಣ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts