More

    ಉಡುಪಿ ಜಿಲ್ಲೆಯಲ್ಲಿ ತರಹೇವಾರಿ ಜ್ವರಗಳ ಬಾಧೆ

    ವಿಜಯವಾಣಿ ಸುದ್ದಿಜಾಲ ಕುಂದಾಪುರ

    ಕರೊನಾ ಆತಂಕ ಸ್ವಲ್ಪ ದೂರವಾದ ಬೆನ್ನಿಗೆ ಮಕ್ಕಳಲ್ಲಿ ಕಾಣಿಸಿಕೊಂಡ ಕಾಲುಬಾಯಿ ಜ್ವರ ಸ್ವಲ್ಪ ಸಮಯ ಕಾಟ ಕೊಟ್ಟಿತು. ಅದರ ಬೆನ್ನಿಗೆ ಡೆಂಘೆ ಜ್ವರ ಪ್ರತ್ಯಕ್ಷ. ಡೆಂಘೆ ಹೊಡೆತ ಇಳಿಮುಖ ಕಂಡ ಕೂಡಲೆ ಇಲಿಜ್ವರ ಕಾರುಬಾರು ಶುರು. ಜತೆಗೆ ಮಂಕಿಪಾಕ್ಸ್ ಗುಮ್ಮವೂ ಕಾಲಿಟ್ಟಿದೆ. ಇವೆಲ್ಲದರಿಂದಾಗಿ ಉಡುಪಿ ಜಿಲ್ಲೆಯ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ.

    ಕುಂದಾಪುರ ತಾಲೂಕಿನಲ್ಲಿ ಅತಿ ಹೆಚ್ಚು ಇಲಿ ಜ್ವರ ಕಾಣಿಸಿಕೊಂಡಿದೆ. ಉಡುಪಿ-28, ಕುಂದಾಪುರ 49, ಕಾರ್ಕಳ ತಾಲೂಕಿನಲ್ಲಿ-18 ಪ್ರಕರಣಗಳು ಪತ್ತೆಯಾಗಿವೆ. ಈ ವರ್ಷ ಜನವರಿಯಲ್ಲಿ 11, ಫೆಬ್ರವರಿ-10, ಮಾರ್ಚ್-9, ಏಪ್ರಿಲ್-6, ಮೇ-15, ಜೂನ್ ತಿಂಗಳಲ್ಲಿ ಅತಿ ಹೆಚ್ಚು-34 ಹಾಗೂ ಜುಲೈ ತಿಂಗಳಲ್ಲಿ 10 ಪ್ರಕರಣ ದೃಢಪಟ್ಟಿದೆ. ಇತ್ತೀಚೆಗೆ ಹೆಬ್ರಿಯ ಯುವಕ ಇಲಿಜ್ವರದಿಂದ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.ಕುಂದಾಪುರದ ಜಡ್ಕಲ್ ಗ್ರಾಮದಲ್ಲಿ ಮಹಿಳೆಯೊಬ್ಬರು ಡೆಂಘೆಗೆ ಬಲಿಯಾಗಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಕಾರಣ ದೃಢವಾಗಲಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಒಟ್ಟು 95 ಇಲಿಜ್ವರ ಪ್ರಕರಣ ಪತ್ತೆಯಾಗಿದ್ದು, ಎಲ್ಲರೂ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

    ಪ್ರಾಣಿಗಳನ್ನೂ ಬಾಧಿಸುತ್ತದೆ: ಇಲಿ ಜ್ವರಕ್ಕೆ ವೈಜ್ಞಾನಿಕವಾಗಿ ಲೆಪ್ಟೊಸ್ಪೈರೋಸಿಸ್ ಎಂದು ಹೆಸರು. ಪ್ರಾಣಿಗಳಿಂದ ಲೆಪ್ಟೊಸ್ಪೈರ್ ಬ್ಯಾಕ್ಟೀರಿಯ ಮೂಲಕ ಮಾನವರಿಗೆ ಹರಡುತ್ತದೆ. ಇಲಿ, ಹೆಗ್ಗಣಗಳಿಂದ ರೋಗಾಣುಗಳು ಹರಡುವುದರಿಂದ ಇದಕ್ಕೆ ಇಲಿಜ್ವರ ಎಂದು ಕರೆಯಲಾಗುತ್ತದೆ. ಇಲಿಜ್ವರ ಮನುಷ್ಯರಿಗಷ್ಟೇ ಅಲ್ಲ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು, ವನ್ಯಮೃಗಗಳಿಗೂ ಬಾಧಿಸುತ್ತದೆ. ರೋಗಪೀಡಿತ ಇಲಿ ನೀರಿರುವ ಗದ್ದೆ ಇನ್ನಿತರ ಜಾಗದಲ್ಲಿ ಓಡಾಡುವುದರಿಂದ ಅದರ ದೇಹದಲ್ಲಿರುವ ಬ್ಯಾಕ್ಟೀರಿಯ ನೀರಿಗೆ ಸೇರಿ ಮನುಷ್ಯರು ಅಥವಾ ಪ್ರಾಣಿಗಳು ಆ ನೀರಿನಲ್ಲಿ ತಿರುಗಾಡಿದಾಗ ಚರ್ಮದಲ್ಲಿ ಸಣ್ಣ ಗೀರಿದ್ದರೂ ಅದರ ಮೂಲಕ ದೇಹ ಸೇರುತ್ತದೆ. ಜ್ವರ ನಿರ್ಲಕ್ಷಿಸಿದರೆ, ಲಿವರ್, ಕಿಡ್ನಿ ಮೇಲೆ ತೀವ್ರ ಪರಿಣಾಮವಾಗಿ ಸಾಯುವ ಸಾಧ್ಯತೆ ಇದೆ.

    ಮುನ್ನೆಚ್ಚರಿಕೆ: ಜ್ವರ ಅಥವಾ ಫ್ಲೂ ರೋಗಲಕ್ಷಣ ಇರುವ ವ್ಯಕ್ತಿಯ ಸಂಪರ್ಕಕ್ಕೆ ಹೋಗಬೇಡಿ. ಕುಟುಂಬದಲ್ಲಿ ಯಾವುದೇ ವ್ಯಕ್ತಿ ಜ್ವರ ಲಕ್ಷಣ ಹೊಂದಿದ್ದರೆ ತಕ್ಷಣ ಪರೀಕ್ಷೆಗೆ ಒಳಗಾಗಬೇಕು. ರೋಗಪೀಡಿತ ಪ್ರಾಣಿಯಿಂದ ದೂರ ಇರಿ. ವಿದೇಶದಿಂದ ಬಂದ ವ್ಯಕ್ತಿಗೆ ಹಾಗೂ 3 -4 ದಿನಗಳ ನಂತರ ಜ್ವರ ಬಂದಿದ್ದರೆ, ತಕ್ಷಣ ವೈದ್ಯರ ಸಂಪರ್ಕಿಸಿ ಪರೀಕ್ಷೆಗೆ ಒಳಗಾಗಿ. ಪಾರ್ಟಿ ಮತ್ತು ಜನದಟ್ಟಣೆ ಸ್ಥಳಗಳಿಗೆ ಹೋಗದಿರುವುದು ಉತ್ತಮ. ಚಿಕನ್‌ಪಾಕ್ಸ್‌ನಂತೆ ಮೈಯಲ್ಲಿ ಗುಳ್ಳೆ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಂಪರ್ಕಿಸಿ. ಮಂಕಿಪಾಕ್ಸ್ ರೋಗಲಕ್ಷಣ ಪತ್ತೆಯಾದರೆ ಮರೆಮಾಚದೆ ಆರೋಗ್ಯ ಇಲಾಖೆಗೆ ತಿಳಿಸಿ.

    ಇಲಿಜ್ವರದ ಎಲ್ಲ ಔಷಧಿ ದಾಸ್ತಾನಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜ್ವರದ ಮೂಲ ಪತ್ತೆ ಮಾಡಿ ಚಿಕಿತ್ಸೆ ಪಡೆದರೆ ಇಲಿಜ್ವರ ಅಪಾಯಕಾರಿಯಲ್ಲ. ಉಡುಪಿ ಜಿಲ್ಲಾಸ್ಪತ್ರೆ ಹಾಗೂ ಮಣಿಪಾಲ ಕೆಎಂಸಿ ಪ್ರಯೋಗಾಲಯದಲ್ಲಿ ಇಲಿಜ್ವರ ಪರೀಕ್ಷೆ ಮಾಡಲಾಗುತ್ತದೆ. ಹಂದಿ ಹಾಗೂ ಹಕ್ಕಿಜ್ವರ ಪ್ರಕರಣ ಇಲ್ಲ. ಜಿಲ್ಲೆಯಲ್ಲಿ ಇದುವರೆಗೆ 356 ಡೆಂಘೆ ಪ್ರಕರಣ ಮತ್ತು 9 ಮಲೇರಿಯಾ ಕೇಸುಗಳು ವರದಿಯಾಗಿವೆ.
    -ಡಾ.ನಾಗಭೂಷಣ ಉಡುಪ, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ

    ರೋಗ ಪೀಡಿತ ಇಲಿ ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಅದರ ಬ್ಯಾಕ್ಟೀರಿಯ ಮೂಲಕ ಇಲಿಜ್ವರ ಮನುಷ್ಯರಿಗೆ ಹರಡುತ್ತದೆ. ಆರಂಭದಲ್ಲಿ ಜ್ವರ ಕಾಣಿಸಿಕೊಂಡು ಮೂರು ದಿನದಲ್ಲಿ ಕಡಿಮೆಯಾಗಿ ಮತ್ತೆ ಕಾಣಿಸಿಕೊಂಡು ಬಾಧಿಸುತ್ತದೆ. ಆರಂಭದಲ್ಲಿ ಕಾಣಿಸಿಕೊಂಡ ಜ್ವರ ಮೂಲ ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ ಸಮಸ್ಯೆ ಆಗುವುದಿಲ್ಲ. 15 ದಿನ ನಂತರ ಎರಡನೇ ಬಾರಿ ಕಾಣಿಸಿಕೊಳ್ಳುವ ಇಲಿಜ್ವರ ರೋಗಿಯ ಕಿಡ್ನಿ, ಲಿವರ್ ಮೇಲೆ ಪರಿಣಾಮ ಬೀರುವ ಜತೆ ಬ್ಲಡ್ ಪ್ಲೇಟ್ಲೆಟ್ ಕೂಡ ಕಡಿಮೆಯಾಗಿ ಗಂಭೀರ ಸ್ಥಿತಿಗೆ ಒಯ್ಯುತ್ತದೆ. ನಿರ್ಲಕ್ಷೃ ಮಾಡದೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಅಪಾಯ ಸಂಭವಿಸದು.
    -ಡಾ.ನಾಗೇಶ್, ವೈದ್ಯಕೀಯ ತಜ್ಞ, ತಾಲೂಕು ಆಸ್ಪತ್ರೆ ಕುಂದಾಪುರ

    ಇಲಿ ಜ್ವರ ನಾಯಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇಲಿ ಜ್ವರ ಇರುವ ಪ್ರದೇಶದಲ್ಲಿ ಜಾನುವಾರುಗಳಲ್ಲೂ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಪ್ರಾಣಿಗಳಲ್ಲಿ ಇಲಿಜ್ವರ ಪತ್ತೆ ಮಡುವುದು ತಡವಾಗುವುದರಿಂದ ಅದರ ಪರಿಣಾಮ ಕಿಡ್ನಿ ಹಾಗೂ ಲಿವರ್ ಮೇಲಾಗುತ್ತದೆ. ಇಲಿಜ್ವರ ಬಂದ ಪ್ರಾಣಿಗಳ ಕಣ್ಣು ಹಳದಿಯಾಗುತ್ತದೆ ಹಾಗೂ ಮೂತ್ರ ಆರಂಭದಲ್ಲಿ ಅರಿಶಿಣವಾಗಿ ನಂತರ ಕೆಂಪುಮಿಶ್ರಿತವಾಗುತ್ತದೆ.
    -ಡಾ.ಸೂರ್ಯನಾರಾಯಣ ಉಪಾಧ್ಯ, ಮುಖ್ಯ ಪಶುವೈದ್ಯಾಧಿಕಾರಿ, ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts