More

    ಸಮರಸ, ನೆಮ್ಮದಿ ಬದುಕಿಗೆ ಜಾತ್ರೆಗಳು ಸಹಕಾರಿ

    ಲಕ್ಷ್ಮೇಶ್ವರ: ನೆಮ್ಮದಿಯ ಜೀವನ ಸಾಗಿಸಲು ಧರ್ಮಕ್ಷೇತ್ರಗಳ, ಗುರುಗಳ ದರ್ಶನ, ಧರ್ವಚರಣೆ ಅವಶ್ಯಕ. ಆಧ್ಯಾತ್ಮದ ಅರಿವಿಗೆ ಧರ್ಮ ಮಾರ್ಗ ಅವಶ್ಯವಾಗಿದ್ದು ಸಮರಸ ಶಾಂತಿ ಬದುಕಿಗೆ ಜಾತ್ರೆಗಳು ಸಹಕಾರಿಯಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

    ಮಹಾಶಿವರಾತ್ರಿ ಅಂಗವಾಗಿ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಜಾತ್ರಾ ಮಹೋತ್ಸವದ ಧರ್ಮಸಭೆಯ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಮನುಷ್ಯನಿಗೆ ಧರ್ಮ, ನಿಷ್ಠೆ, ನಂಬಿಕೆ ಮುಖ್ಯವಾಗಿದೆ. ಅಜ್ಞಾನದ ಅಂಧಕಾರ ಕಳೆದು ಸುಜ್ಞಾನದ ಬೆಳಕು ಹೊಮ್ಮುವಲ್ಲಿ ಶಿವರಾತ್ರಿ-ಶುಭರಾತ್ರಿಯಾಗಿದೆ. ಈ ನಿಟ್ಟಿನಲ್ಲಿ ಜಾತ್ರಾ ಮಹೋತ್ಸವಗಳು ಪೂರಕ ವಾತಾವರಣ ಕಲ್ಪಿಸಲು ಸಹಕಾರಿಯಾಗಿವೆ ಎಂದರು.

    ವಿಶ್ವ ಮಾನವ ಸಂದೇಶ ಸಾರಿದ ಲಿಂ. ಗಂಗಾಧರ ಜಗದ್ಗುರುಗಳ ಲೋಕೋದ್ಧಾರದ ಚಿಂತನೆಗಳು ಸರ್ವಜನಾಂಗದ ದಾರಿದೀಪವಾಗಿವೆ. ಅವರ ಚಿಂತನೆಗಳು ಮತ್ತು ಆದರ್ಶ ಮೌಲ್ಯಗಳನ್ನು ಸಾಕಾರಗೊಳಿಸುವ ದಾರಿಯಲ್ಲಿ ಭಕ್ತರು ಸಾಗಬೇಕು. ಲಿಂ. ಶ್ರೀಗಳ ತ್ರಿಕೋಟಿಲಿಂಗ ಸ್ಥಾಪನೆಯ ಸಂಕಲ್ಪ ಸಿದ್ಧಿಗೆ ಅಪಾರ ಭಕ್ತರು ನೀಡುತ್ತಿರುವ ಸಹಕಾರ ಧರ್ಮನಿಷ್ಠೆಗೆ ಸಾಕ್ಷಿಯಾಗಿದೆ ಎಂದರು.

    ನೇತೃತ್ವವಹಿಸಿದ್ದ ಪಟ್ಟಾಧ್ಯಕ್ಷರಾದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ, ಗುರು ಕಾರುಣ್ಯವೊಂದಿದ್ದರೆ ಏನೆಲ್ಲವನ್ನೂ ಸಾಧಿಸಲು ಸಾಧ್ಯವಿದೆ. ಶ್ರೀಕ್ಷೇತ್ರದಲ್ಲಿ ಲಿಂ.ಜ.ವೀರ ಗಂಗಾಧರ ಶ್ರೀಗಳ ಸಂಕಲ್ಪಿತ ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಕಾರ್ಯ ಭರದಿಂದ ಸಾಗಿದೆ.

    ಈಗಾಗಲೇ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಶಿವಲಿಂಗಗಳು ಸಿದ್ಧಗೊಂಡಿವೆ. ಈ ಪುಣ್ಯ ಕಾರ್ಯ ಮುಗಿದ ಬಳಿಕ ಕ್ಷೇತ್ರ ವಿಶ್ವ ಪ್ರಸಿದ್ಧಿ ಹೊಂದಲಿದೆ ಎಂದರು.

    ಶಾಸಕ ರಾಮಣ್ಣ ಲಮಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ನಾಡಿನ ನಡೆದಾಡುವ ದೇವರು, ಮಾನವ ಧರ್ಮಕ್ಕೆ ಜಯವಾಗಲಿ ಎಂಬ ವಿಶ್ವಮಂತ್ರ ಸಾರಿದ ಲಿಂ. ಜಗದ್ಗುರುಗಳ ತಪೋಶಕ್ತಿಯಿಂದ ಕ್ಷೇತ್ರದ ಪಾವಿತ್ರ್ಯೆ ಹೆಚ್ಚುತ್ತಿದೆ. ಧರ್ಮಕ್ಷೇತ್ರವನ್ನು ಸಂರ್ಪಸುವ ರಸ್ತೆ ಸುಧಾರಣೆ ಸೇರಿದಂತೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಯತ್ನಿಸುತ್ತೇನೆ ಎಂದರು.

    ಜಿಪಂ ಸದಸ್ಯ ಎಸ್.ಪಿ. ಬಳಿಗಾರ, ಡಾ. ಜಯಶ್ರೀ ಹೊಸಮನಿ ಮಾತನಾಡಿದರು. ಬಂಕಾಪುರ, ಕಲಾದಗಿ, ಸುಳ್ಳದ ಮತ್ತು ಲಕ್ಷ್ಮೇಶ್ವರ ಶ್ರೀಗಳು, ವಿಶ್ವನಾಥ ಎಚ್.ಎಂ, ಮಹೇಶ ಸಾಲಿಮಠ, ಜೆ.ಕೆ. ಶಶಿಧರ, ಜಗದೀಶ ಬೂದಿಹಾಳ, ಕೋಟೆಪ್ಪ ಬಾಗಲ ಇತರರಿದ್ದರು. ಗದಗನ ಪಂ.ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಸಂಗೀತ ಸೇವೆ ಜರುಗಿತು. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts