More

    ಐಪಿಎಲ್​ ಕಾಮೆಂಟರಿ ವಿವಾದ; ಗಾವಸ್ಕರ್‌ ಬೆಂಬಲಕ್ಕೆ ನಿಂತ ಫಾರೂಖ್​ ಇಂಜಿನಿಯರ್ ಹೇಳಿದ್ದೇನು?

    ನವದೆಹಲಿ: ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರು ಲಾಕ್‌ಡೌನ್ ಸಮಯದಲ್ಲಿ ಬ್ಯಾಟಿಂಗ್ ಅಭ್ಯಾಸದ ಕೊರತೆ ಎದುರಿಸಿದ ಬಗ್ಗೆ ವಿವರಿಸುತ್ತ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಹೆಸರು ಉಲ್ಲೇಖಿಸಿ ಜೀತಿ ಎದುರಿಸಿದ್ದ ಭಾರತದ ದಿಗ್ಗಜ ಹಾಗೂ ಜನಪ್ರಿಯ ವೀಕ್ಷಕವಿವರಣೆಕಾರ ಸುನೀಲ್ ಗಾವಸ್ಕರ್ ಅವರಿಗೆ ಮಾಜಿ ಕ್ರಿಕೆಟಿಗ ಫಾರೂಖ್ ಇಂಜಿನಿಯರ್ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಗಾವಸ್ಕರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಎದುರಾಗಿದ್ದಲ್ಲದೆ, ಅನುಷ್ಕಾ ಶರ್ಮ ಕೂಡ ಗಾವಸ್ಕರ್ ಬಗ್ಗೆ ಕಿಡಿ ಕಾರಿದ್ದರು. ಆದರೆ ಭಾರತೀಯರ ಹಾಸ್ಯಪ್ರಜ್ಞೆಯ ಕೊರತೆಯೇ ಈ ವಿವಾದಕ್ಕೆ ಕಾರಣ ಎಂದಿರುವ ಫಾರೂಖ್ ಇಂಜಿನಿಯರ್, ‘ಅನುಷ್ಕಾ ಮತ್ತು ಕೊಹ್ಲಿ ಬಗ್ಗೆ ಗಾವಸ್ಕರ್ ಏನೇ ಹೇಳಿದ್ದರೂ ಅದು ಹಾಸ್ಯ ಮನೋಭಾವದಿಂದ ಹೇಳಿದ್ದಾಗಿರುತ್ತದೆ. ಯಾವುದೇ ಕೆಟ್ಟ ಅಭಿರುಚಿಯಿಂದ ಖಂಡಿತವಾಗಿಯೂ ಅವರು ಹೇಳಿರುವುದಿಲ್ಲ’ ಎಂದು ಹೇಳಿದ್ದಾರೆ.

    ‘ಸುನೀಲ್ ಗಾವಸ್ಕರ್ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಅವರು ತಮಾಷೆಯಾಗಿ ಹೇಳಿರುತ್ತಾರೆ. ನಾನು ಅನುಷ್ಕಾ ಬಗ್ಗೆ ತಮಾಷೆಯಾಗಿ ಹೇಳಿಕೆ ನೀಡಿದಾಗಲೂ ಜನರು ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದರು’ ಎಂದು ಮಾಜಿ ವಿಕೆಟ್ ಕೀಪರ್ ಫಾರೂಖ್ ಇಂಜಿನಿಯರ್ ಹೇಳಿದ್ದಾರೆ.

    ಇದನ್ನೂ ಓದಿ: ಐಪಿಎಲ್ ಕಾಮೆಂಟರಿ ವಿವಾದಕ್ಕೆ ಅನುಷ್ಕಾ ಗರಂ, ಗಾವಸ್ಕರ್ ಪುತ್ರನಿಂದ ಟಾಂಗ್

    2019ರ ಏಕದಿನ ವಿಶ್ವಕಪ್ ವೇಳೆ ಫಾರೂಖ್ ಕೂಡ ಅನುಷ್ಕಾ ಹೆಸರು ಉಲ್ಲೇಖಿಸಿ ವಿವಾದಕ್ಕೆ ಸಿಲುಕಿಕೊಂಡಿದ್ದರು. ಆಗ ಅವರು, ‘ಭಾರತ ತಂಡದ ಆಯ್ಕೆಗಾರರು ಅನುಷ್ಕಾಗೆ ಚಹಾ ತಂದುಕೊಡುವುದನ್ನು ನೋಡಿದ್ದೇನೆ’ ಎಂದಿದ್ದರು. ಇದು ದೊಡ್ಡ ವಿವಾದ ಸೃಷ್ಟಿಸಿದಾಗ ಅನುಷ್ಕಾ ಕೂಡ ಹೇಳಿಕೆ ನೀಡಿ, ನಾನು ಚಹಾವನ್ನೇ ಕುಡಿಯುವುದಿಲ್ಲ. ನಾನು ಕುಡಿಯುವುದು ಕಾಫಿ ಎಂದಿದ್ದರು. ಆಗ ಫಾರೂಖ್, ನಾನು ತಮಾಷೆಯಾಗಿ ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದಿದ್ದರು.

    ಗಾವಸ್ಕರ್ ವಿವರಣೆ ನೀಡಬೇಕೆಂದು ಅನುಷ್ಕಾ ಶರ್ಮ ಬೇಡಿಕೆ ಇಟ್ಟ ಬೆನ್ನಲ್ಲಿಯೇ ಕ್ರಿಕೆಟ್ ಪ್ರೇಮಿಗಳು ಗಾವಸ್ಕರ್ ಬೆಂಬಲಕ್ಕೆ ನಿಂತಿದ್ದಾರೆ. ‘ವಿ ಸಪೋರ್ಟ್ ಗಾವಸ್ಕರ್’ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಕೂಡ ಆರಂಭಗೊಂಡಿದೆ. ಗಾವಸ್ಕರ್ ಯಾವುದೇ ವಿವರಣೆ ನೀಡಬೇಕಾಗಿಲ್ಲ. ಗಾವಸ್ಕರ್ ಅವರೇ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಅಭಿಮಾನಿಗಳು ಟ್ವೀಟಿಸಿದ್ದಾರೆ. ಅನುಷ್ಕಾ ಸಿಂಪಥಿ ಗಿಟ್ಟಿಸಿಕೊಳ್ಳಲು ನಾಟಕವಾಡುತ್ತಿದ್ದಾರೆ. ಅವರ ಪ್ರತಿಕ್ರಿಯೆ ಅತಿರೇಕದ್ದಾಗಿದೆ ಎಂದೂ ದೂರಿದ್ದಾರೆ.

    ಐಪಿಎಲ್ ಕಾಮೆಂಟರಿಗಾಗಿ ಯುಎಇಯಲ್ಲಿರುವ 71 ವರ್ಷದ ಗಾವಸ್ಕರ್ ಅವರೂ, ಅಭಿಮಾನಿಗಳಿಂದ ಸಿಕ್ಕಿರುವ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ್ದು, ನಾನೇನೂ ತಪ್ಪು ಮಾಡಿಲ್ಲ ಎಂದು ಮತ್ತೊಮ್ಮೆ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts