More

    ಫಸಲು ನಷ್ಟ ಭೀತಿಯಲ್ಲಿ ರೈತರು

    ನರೇಂದ್ರ ಎಸ್ ಮರಸಣಿಗೆ

    ಪ್ರಸಕ್ತ ವರ್ಷ ಮಳೆ ಪ್ರಮಾಣ ಕಡಿಮೆಯಾದ ಪರಿಣಾಮ ಹಳ್ಳ, ನದಿ, ತೋಡುಗಳಲ್ಲಿ ನೀರು ಬರಿದಾಗಿದ್ದು, ಭತ್ತದ ಗದ್ದೆ ಒಣಗಿ ನಿಂತಿದೆ. ಇದು ನೇರ ಇಳುವರಿ ಮೇಲೆ ಪರಿಣಾಮ ಬೀರಲಿದೆ. ರೈತರು ಮತ್ತೊಮ್ಮೆ ನಷ್ಟಕ್ಕೊಳಗಾಗುವ ಭೀತಿ ಎದುರಿಸುತ್ತಿದ್ದಾರೆ.

    ಈ ವರ್ಷ ಒಟ್ಟು 4534 ಮಿಮಿ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಕೇವಲ 3524 ಮಳೆಯಾಗಿದ್ದು, ಶೇ.22ರಷ್ಟು ಮಳೆ ಕೊರತೆಯಾಗಿದೆ. ಪ್ರಮುಖವಾಗಿ ಜೂನ್,ಆಗಸ್ಟ್ ಹಾಗೂ ಅಕ್ಟೋಬರ್‌ನಲ್ಲಿ ಅತಿ ಕಡಿಮೆ ಮಳೆಯಾಗಿದ್ದು ನೀರಿನ ಸಮಸ್ಯೆಗೆ ಕಾರಣವಾಗಿದೆ.

    ಪಂಪಿನಿಂದ ನೀರು

    ಗದ್ದೆಗಳಿಗೆ ಪಂಪುಗಳನ್ನು ಬಳಸಿ ನೀರು ಹಾಯಿಸಲಾಗುತ್ತಿದೆ. ಶ್ರೀಮಂತ ರೈತರು ಪಂಪ್ ಹೊಂದಿದ್ದು, ಆದರೆ ಬಡ ರೈತ ಪಂಪ್ ಇಲ್ಲದಿರುವುದರಿಂದ ನೀರು ಹಾಯಿಸಲು ಸಾಧ್ಯವಿಲ್ಲ.

    ಬರಪೀಡಿತ ತಾಲೂಕು

    ರಾಜ್ಯ ಸರ್ಕಾರ ಹೆಬ್ರಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಿದೆ. ಸುಮಾರು 36 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮುಂಗಾರು ಬೆಳೆ ಅಂದಾಜಿಸಲಾಗಿತ್ತು. ಆದರೆ ಬಿತ್ತನೆ ಮಾಡಿದ್ದು ಕೇವಲ 30 ಸಾವಿರ ಹೆಕ್ಟರ್ ಪ್ರದೇಶದಲ್ಲಿ. ಈ ಕಾರಣದಿಂದ ಶೇ 22ರಷ್ಟು ಕೊರತೆ ಕಂಡಿದೆ.

    ನೀರಿನ ಕೊರತೆಯ ಪರಿಣಾಮ

    ಪೈರು ಹಾಲು ಕಟ್ಟುವ ಸಂದರ್ಭ ನೀರಿನ ಕೊರತೆ ಉಂಟಾದರೆ ಶೇಕಡ 25 ರೈತರಿಗೆ ಫಸಲು ದೊರಕುವುದಿಲ್ಲ. ಹಾಲು ಕಟ್ಟಿದ ಮೇಲೆ ಸುಮಾರು 25 ದಿನ ಕನಿಷ್ಠ ನೀರಿನ ಲಭ್ಯತೆ ಇರಬೇಕು ಇಲ್ಲದಿದ್ದಲ್ಲಿ ಫಸಲು ಕಡಿತವಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹೆಬ್ರಿಯ ಸೀತಾ ನದಿಯಲ್ಲೂ ನೀರು ಕಡಿಮೆಯಾಗಿದ್ದು, ಸಣ್ಣ ಸಣ್ಣ ತೋಡುಗಳಿಗೆ ಕಟ್ಟಹಾಕಿ ನೀರಿನ ಸಂಗ್ರಹ ಈಗಿನಿಂದಲೇ ಆರಂಭಿಸಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ.

    ಈ ವರ್ಷ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಿಲಿಮೀಟರ್ ಮಳೆಯ ಕೊರತೆ ಕಂಡಿದೆ.ಭತ್ತದ ತೆನೆ ಹಾಲು ಕಟ್ಟುವ ಹಂತದಲ್ಲಿ ನೀರಿನ ಕೊರತೆಯಾದರೆ ಶೇ 75ರಷ್ಟು ಫಸಲಿನ ಕೊರತೆ ಕಾಣುತ್ತದೆ. ರೈತರು ಸಣ್ಣ ತೋಡುಗಳಿಗೆ ಕಟ್ಟ ಹಾಕಿದಾಗ ಅಂತರ್ಜಲ ವೃದ್ಧಿಗೂ ಕಾರಣವಾಗುತ್ತದೆ.
    – ಡಾ.ಧನಂಜಯ ಬಿ, ಹಿರಿಯ ವಿಜ್ಞಾನಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ

    ಮುಂಗಾರು ಹಾಗೂ ಹಿಂಗಾರು ಬೆಳೆಗೆ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಭತ್ತ ಬೆಳೆಯುವ ಪ್ರಮಾಣ ಕಡಿಮೆಯಾಗಿದೆ. ಜೂನ್, ಅಗಸ್ಟ್ ಹಾಗೂ ಅಕ್ಟೋಬರ್‌ನಲ್ಲಿ ತೀರ ಕಡಿಮೆ ಮಳೆಯಿಂದ ನೀರಿನ ಕೊರತೆಯಾಗಿದೆ. ಈ ಕಾರಣಕ್ಕೆ ರೈತರು ಹಿಂಗಾರು ಬೆಳೆ ಬೆಳೆಯಲು ಹಿಂದೇಟು ಹಾಕಿದ್ದಾರೆ.
    – ಸತೀಶ್ ಸಹಾಯಕ ಕೃಷಿ ನಿರ್ದೇಶಕ ಉಡುಪಿ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts