More

    ಭತ್ತ ಕೃಷಿಯತ್ತ ರೈತರ ಚಿತ್ತ

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ಕಳೆದ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಭತ್ತದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ಅನ್ನದಾತರು ಇದೀಗ, ಬೇಸಿಗೆ ಆರಂಭದಲ್ಲೇ ತುಂಗಭದ್ರಾ ನದಿ ನೀರು ನಂಬಿಕೊಂಡು ಭತ್ತ ನಾಟಿಗೆ ಮುಂದಾಗಿದ್ದಾರೆ.

    ತಾಲೂಕಿನ ತುಂಗಭದ್ರಾ ಮತ್ತು ಕುಮದ್ವತಿ ನದಿ ಪಾತ್ರದಲ್ಲಿರುವ ತುಮ್ಮಿನಕಟ್ಟಿ, ಲಿಂಗದಹಳ್ಳಿ, ಮುಷ್ಟೂರು, ನಂದಿಹಳ್ಳಿ, ಸಣ್ಣಸಂಗಾಪುರ, ಹೊಳೆ ಹಾಲಗೇರಿ, ಕೊಡಿಹಾಳ, ಐರಣಿ, ಹಿರೇಬಿದರಿ, ಮೇಡ್ಲೇರಿ, ಬೇಲೂರು, ಉದಗಟ್ಟಿ ಸೇರಿ 40ಕ್ಕೂ ಅಧಿಕ ಗ್ರಾಮಗಳ ರೈತರು ಬಿಡುವಿಲ್ಲದಂತೆ ಭತ್ತದ ನಾಟಿ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

    ಈ ಬಾರಿ ಉತ್ತರ ಕನ್ನಡ ಭಾಗದಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ತುಂಗಭದ್ರಾ ಹಾಗೂ ಕುಮದ್ವತಿ ನದಿಗಳು ಈವರೆಗೂ ತುಂಬಿ ಹರಿಯುತ್ತಿದ್ದು, ರೈತರ ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ. ನೀರಾವರಿ ಆಧರಿಸಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರು ಈಗ ಗದ್ದೆಗಳಲ್ಲಿ ಭತ್ತದ ನಾಟಿ ಮಾಡುವ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

    ಮೊನಾಲಿ ಸೋನಾ, ಶ್ರೀರಾಮ ಸೋನಾ, ನಲ್ಲೂರು, ಕಾವೇರಿ ಸೇರಿ ವಿವಿಧ ಬಗೆಯ ಭತ್ತದ ಸಸಿಗಳನ್ನು ನಾಟಿ ಮಾಡುತ್ತಿದ್ದಾರೆ. ನದಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿರುವ ರೈತರು ಉತ್ತಮ ಫಸಲಿನ ನೀರಿಕ್ಷೆಯಲ್ಲಿದ್ದಾರೆ. ಜನವರಿ ಕೊನೆಯ ವಾರದಿಂದ ಫೆಬ್ರವರಿ ಕೊನೆಯ ವಾರದವರೆಗೆ ಭತ್ತ ನಾಟಿ ಮಾಡಲು ಸೂಕ್ತ ಸಮಯ. ಈ ಸಮಯದಲ್ಲಿ ನಾಟಿ ಮಾಡುವ ಕಾರ್ಯ ಪೂರ್ಣಗೊಳಿಸಿದರೆ, ಮುಂದಿನ ಮೂರು ತಿಂಗಳಲ್ಲಿ ಉತ್ತಮ ಫಸಲು ಬಂದು ಪೈರು ಕಟಾವಿಗೆ ಅನುಕೂಲವಾಗುತ್ತದೆ ಎಂಬುದು ರೈತರ ಅಭಿಪ್ರಾಯ. ಹೀಗಾಗಿ ಪ್ರತಿಯೊಬ್ಬ ರೈತರೂ ಭತ್ತದ ನಾಟಿಗೆ ಮುಂದಾಗಿದ್ದು, ಕೃಷಿ ಕಾರ್ವಿುಕರಿಗೂ ಎಲ್ಲಿಲ್ಲದ ಬೇಡಿಕೆ ಬಂದಿದೆ.

    ಶ್ರೀರಾಮ ಸೋನಾಗೆ ಬೇಡಿಕೆ: ಮೊನಾಲಿ ಸೋನಾ ಹಾಗೂ ಶ್ರೀರಾಮ ಸೋನಾ ಭತ್ತವನ್ನು ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಬಿಸಿಲಿನ ಪ್ರಖರತೆ ಹಾಗೂ ನದಿ ನೀರಿನ ಬಳಕೆಯಿಂದ ಭತ್ತವು ಅಚ್ಚುಕಟ್ಟಾಗಿ ಬೆಳೆದು, ಅಕ್ಕಿ ಕೂಡ ರುಚಿಕಟ್ಟಾಗಿರುತ್ತದೆ. ಹೀಗಾಗಿ ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ದಾವಣಗೆರೆ, ಶಿವಮೊಗ್ಗ, ಶಿಕಾರಿಪುರಗಳಲ್ಲಿ ಇಲ್ಲಿಯ ಭತ್ತಕ್ಕೆ ಬಾರಿ ಬೇಡಿಕೆಯಿದೆ.

    ಉತ್ತಮ ಫಸಲಿನ ನಿರೀಕ್ಷೆ: ಪ್ರಸಕ್ತ ವರ್ಷದಲ್ಲಿ ತಾಲೂಕಿನಾದ್ಯಂತ 4500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಮಾಡುವ ಗುರಿ ಹೊಂದಿದ್ದು, ಈಗಾಗಲೇ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಭತ್ತದ ಗದ್ದೆಗೆ ಅವಶ್ಯಕತೆ ಇರುವ ನೀರು, ವಿದ್ಯುತ್ ಕೂಡ ಸಮರ್ಪಕವಾಗಿದೆ. ಹೀಗಾಗಿ ಈ ಉತ್ತಮ ಫಸಲು ಬರುವ ನಿರೀಕ್ಷೆ ಕೂಡ ಇದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಶಿವಾನಂದ ಹಾವೇರಿ‘ವಿಜಯವಾಣಿ’ಗೆ ತಿಳಿಸಿದರು.

    ====================

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts