More

    ಕಳಪೆ ಬಿತ್ತನೆ ಬೀಜದಿಂದ ರೈತ ಕಂಗಾಲು, ಬೆಳವಣಿಗೆಯಿಲ್ಲದೆ ಸಾಯುತ್ತಿರುವ ಜೋಳದ ಗಿಡ ದೂರಿಗೆ ಸ್ಪಂದನೆ ಇಲ್ಲ

    ಪ್ರದೀಪ್ ಕುಮಾರ್ ಆರ್. ದೊಡ್ಡಬಳ್ಳಾಪುರ
    ತಾಲೂಕಿನಲ್ಲಿ ಬಿತ್ತನೆಯಾಗಿದ್ದ ಜೋಳ, ರಾಗಿ ಸರಿಯಾಗಿ ಮೊಳಕೆಯೊಡೆಯದೆ ಸಾಯುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಕೊಡಿಗೇಹಳ್ಳಿ, ಕೆಸ್ತೂರು, ಹಣಬೆ, ರಾಜಘಟ್ಟ, ಕಂಟನಕುಂಟೆ, ತಿಪ್ಪೂರು, ನರೆಳಘಟ್ಟ ಸುತ್ತಲಿನ ರೈತರು ಸಿಪಿ 818 ಜೋಳದ ತಳಿ ಬಿತ್ತನೆ ಮಾಡಿದ್ದು, 20 ದಿನ ಕಳೆದರೂ ಸರಿಯಾಗಿ ಬೆಳೆಯದಿರುವ ಕಾರಣ ಬಹುತೇಕ ರೈತರು ಮರು ಬಿತ್ತನೆ ಮಾಡುತ್ತಿದ್ದಾರೆ.

    ಪ್ರತಿ ಚೀಲಕ್ಕೆ 920 ರೂ. ನೀಡಿ ಖರೀದಿಸಿದ ಜೋಳ ಈಗ ಸರಿಯಾಗಿ ಮೊಳಕೆಯಾಗಿಲ್ಲ. ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿರುವುದರಿಂದ ಮುಂದಿನ ನಡೆ ಅತಂತ್ರವಾಗಿದೆ. ಈಗಾಗಲೇ ರೈತರು ಕೃಷಿ ಇಲಾಖೆ ಅಧಿಕಾರಿಗೆ ದೂರು ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ.

    ಕೃಷಿ ಇಲಾಖೆ ನೇತೃತ್ವದಲ್ಲಿ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಜಿಕೆವಿಕೆ ವಿಜ್ಞಾನಿಗಳ ತಂಡವೂ ಪರಿಶೀಲಿಸಿದೆ. ಅವರು ನೀಡುವ ವರದಿ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬಹುದು.
    ಡಾ.ಮಂಜುನಾಥ್, ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ

    20 ದಿನಗಳ ಹಿಂದೆ ಬಿತ್ತನೆ ಮಾಡಿರುವ ಸಿಪಿ 818 ಜೋಳದ ತಳಿಯ ಬೀಜವು ಹುಟ್ಟುವಳಿಯಾಗದೆ ಸಸಿ ಸಾಯುತ್ತಿವೆ. ಕಳಪೆ ಬೀಜ ನೀಡಿರುವ ಕಂಪನಿಯು ತಕ್ಷಣ ರೈತರಿಗೆ ಪರಿಹಾರ ನೀಡಬೇಕು.
    ಟಿ.ಅಶ್ವಥ್, ರೈತ ಕೊಡಿಗೇಹಳ್ಳಿ

    ಈಗಾಗಲೇ ಕಳಪೆ ಬಿತ್ತನೆ ಬೀಜದ ಸಮಸ್ಯೆ ಇರುವ ರೈತರಿಗೆ ಬೇರೆ ಬೀಜ ನೀಡಲಾಗುತ್ತಿದೆ. ವಿಜ್ಞಾನಿಗಳು ನೀಡುವ ವರದಿ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.
    ಡಿ.ರಾಜೇಶ್ವರಿ, ಸಹಾಯಕ ಕೃಷಿ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts