ಶ್ರವಣ್‌ಕುಮಾರ್ ನಾಳ ಪುತ್ತೂರು
ಬಗೆ ಬಗೆಯ ಹಲ್ವ, ಗೋಡಂಬಿ, ಬಿಸ್ಕತ್‌ಗಳು ಅರ್ಧಬೆಲೆ ಹಾಗೂ ಮಾರುಕಟ್ಟೆ ಬೆಲೆಗಿಂತ ಶೇ.70 ಕಡಿಮೆ ದರದಲ್ಲಿ ಸಿಕ್ಕರೆ ಎಲ್ಲರೂ ಮುಗಿಬೀಳುವುದು ಸಹಜ!. ತಳ್ಳುಗಾಡಿ ಹಾಗೂ ವಾಹನಗಳಲ್ಲಿ ಮಾರಾಟ ಮಾಡುವ ಕೇರಳದ ನಕಲಿ ಆಹಾರ ದಂಧೆೆ ಹೊರಜಿಲ್ಲೆಯನ್ನು ಸಂಪರ್ಕಿಸುವ ಹೆದ್ದಾರಿ ಅಕ್ಕಪಕ್ಕ ಎಗ್ಗಿಲ್ಲದೆ ನಡೆಯುತ್ತಿದೆ. ಹಾಗಿದ್ದರೂ ಕೃತಕ ಉತ್ಪನ್ನಗಳ ಮಾರಾಟ ದಂಧೆ ಬಗ್ಗೆ ರಾಜ್ಯದ ಆಹಾರ ಸುರಕ್ಷತಾ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ!
ಶಿರಾಡಿ, ಚಾರ್ಮಾಡಿ, ಆಗುಂಬೆ ಘಾಟ್ ಸೇರಿದಂತೆ ಅಂತರ್ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳ ಬದಿಯಲ್ಲಿ ಮೈದಾ ಬಳಸಿ ತಯಾರಿಸಿದ ಕೇರಳದ ನಕಲಿ ಗೋಡಂಬಿ, ಹಲ್ವ, ಬಿಸ್ಕತ್‌ಗಳನ್ನು ವಾಹನಗಳಲ್ಲಿಟ್ಟು ಮಾರಾಟ ಮಾಡಲಾಗುತ್ತಿದೆ. ರೋಸ್ಟೆಡ್ ಗೋಡಂಬಿ, ವಿಧವಿಧದ ಹಲ್ವ ಇಲ್ಲಿ ಮಾರುಕಟ್ಟೆ ದರಕ್ಕಿಂತ ಶೇ.70 ಕಡಿಮೆ ದರದಲ್ಲಿ ಸಿಗುತ್ತದೆ. ಕಂಪನಿಯಿಂದಲೇ ನೇರ ಮಾರಾಟವಾಗವ ಕಾರಣ, ಕಡಿಮೆ ದರದಲ್ಲಿ ನೀಡುತ್ತಿದ್ದೇವೆ ಎಂಬುದು ಈ ವ್ಯಾಪಾರಿಗಳು ಗ್ರಾಹಕರಿಗೆ ನೀಡುವ ಸಬೂಬು.
ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರೇ ಟಾರ್ಗೆಟ್: ಕೃತಕ ಆಹಾರ ಉತ್ಪನ್ನಗಳ ಮಾಹಿತಿ ಪಡೆದು ಯಾವುದಾದರೊಂದು ಜಿಲ್ಲೆಯ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ಪರಿಶೀಲನೆ ಬರುವುದು ಗೊತ್ತಾದರೆ, ಈ ದಂಧೆಕೋರರು ತಮ್ಮ ಕಾರ್ಯವ್ಯಾಪ್ತಿಯನ್ನು ಮತ್ತೊಂದು ಜಿಲ್ಲಾ ವ್ಯಾಪ್ತಿಗೆ ಒಳಪಡುವ ಹೆದ್ದಾರಿಗೆ ಸ್ಥಳಾಂತರಿಸುತ್ತಾರೆ. ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿ ಬಿಟ್ಟು ಬೇರೆ ಕಡೆ ತಪಾಸಣೆಗೆ ತೆರಳಲು ಅವಕಾಶ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದಂಧೆಕೋರರು ತಮ್ಮ ದಂಧೆಯನ್ನು ನಿರಾತಂಕವಾಗಿ ಮುಂದುವರಿಸುತ್ತಿದ್ದಾರೆ. ಹೊರ ಜಿಲ್ಲೆಗಳಿಂದ ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ಪುಣ್ಯಕ್ಷೇತ್ರಗಳಿಗೆ ಬರುವ ಪ್ರವಾಸಿಗರೇ ಇವರ ಟಾರ್ಗೆಟ್.
ಆರೋಗ್ಯ ಇಲಾಖೆಗೆ ಜವಾಬ್ದಾರಿ: ಆಹಾರ ಉತ್ಪನ್ನ ತಯಾರಿ, ಮಾರಾಟಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಖಾತ್ರಿ ನೀಡುತ್ತದೆ. ತಯಾರಿ, ಸಂಗ್ರಹ, ವಿತರಣೆ, ಮಾರಾಟ ಮತ್ತು ಆಮದನ್ನು ನಿಯಂತ್ರಿಸಲು, ಸುರಕ್ಷಿತ ಮತ್ತು ಲಭ್ಯತೆ ಖಚಿತಪಡಿಸಿಕೊಳ್ಳಲು ಈ ಪ್ರಾಧಿಕಾರ ಜಿಲ್ಲಾ ಆರೋಗ್ಯ ಇಲಾಖೆಗೆ ಜವಾಬ್ದಾರಿ ನೀಡಿದೆ. ತಾಲೂಕು ಆರೋಗ್ಯಾಧಿಕಾರಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪರವಾನಗಿ ನೀಡುತ್ತಾರೆ. ಆದರೆ ಈ ಕೃತಕ ಆಹಾರ ಉತ್ಪನ್ನಗಳ ತಯಾರಿ ಹಾಗೂ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ.
ಕೃತಕ ಉತ್ಪನ್ನಗಳ ತಯಾರಿ ಹೇಗೆ?: ಕೇರಳದಲ್ಲಿ ನಕಲಿ ಗೋಡಂಬಿ, ಹಲ್ವ, ಬಿಸ್ಕತ್‌ಗಳನ್ನು ಸಿದ್ಧಪಡಿಸುವ ಜಾಲವಿದೆ. ಮೈದಾ,ಗೋಡಂಬಿ ಫ್ಲೇವರ್, ರಾಸಾಯನಿಕ ಬಳಸಿ ಅಚ್ಚುಗಳ ಮೂಲಕ ಗೋಡಂಬಿ ಸಿದ್ಧಪಡಿಸಲಾಗುತ್ತದೆ. ರಾಸಾಯನಿಕ ಬಣ್ಣ ಬಳಸಿ ಡಾಲ್ಡದಲ್ಲೇ ಹಲ್ವ ತಯಾರಿ, ಗೋಧಿ ಬಳಸದೆ ಮೈದಾದಲ್ಲೇ ಬಿಸ್ಕತ್ ತಯಾರಿ. ಹೀಗೆ ತಯಾರಿಸಿದ ಆಹಾರ ವರ್ಷಾನುಗಟ್ಟಲೆ ಕೆಡದಂತೆ ರಾಸಾಯನಿಕ (calcium propionate, benzoic acid, calcium sorbate, erythorbic acid, potassium nitrate, sodium benzoate) ಬಳಸಿ ಇಡಲಾಗುತ್ತದೆ. ನೋಡಲು ಅಸಲಿ ಗೋಡಂಬಿ, ಹಲ್ವ, ಬಿಸ್ಕತ್‌ಗಳನ್ನೇ ಹೋಲುವ ಈ ಉತ್ಪನ್ನಗಳನ್ನು ಕಡಿಮೆ ಖರ್ಚಿನಲ್ಲೇ ಸಿದ್ಧಪಡಿಸಬಹುದಾಗಿದೆ.
ಕಲಬೆರಕೆ ಎಣ್ಣೆ ಜಾಲವೂ ಸಕ್ರಿಯ: ಬೆಂಗಳೂರು, ಮಂಗಳೂರು, ಬೆಳಗಾವಿ, ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ಕೇರಳದ ಖಾದ್ಯತೈಲ ಚಿಲ್ಲರೆ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ. ಧಾರಾಳ ಸಿಗುವ ಪೆಟ್ರೋಲಿಯಂ ಉಪ ಉತ್ಪನ್ನವಾದ ಮಿನರಲ್ ಆಯಿಲನ್ನು ಅಡುಗೆ ಎಣ್ಣೆಗೆ ಬೆರೆಸುವ ಜಾಲ ಕೇರಳದಲ್ಲಿ ಸಕ್ರಿಯವಾಗಿದೆ. ಒಂದು ಲೀಟರ್ ಮಿನರಲ್ ಆಯಿಲ್ ಬೆಲೆ 20ರಿಂದ 35ರೂ. ಇದನ್ನು ಅಡುಗೆ ಎಣ್ಣೆಗೆ ಮಿಶ್ರಣ ಮಾಡುವ ಖದೀಮರು ಪ್ರತಿ ಲೀಟರ್‌ಗೆ 150ರೂ.ಗೆ ಮಾರಾಟ ಮಾಡುತ್ತಾರೆ. ಎಲ್ಲ ಖಾದ್ಯ ತೈಲದೊಂದಿಗೆ ಇದು ಸುಲಭವಾಗಿ ಮಿಶ್ರಣವಾಗುತ್ತದೆ. ವಾಸನೆ, ರುಚಿ, ಬಣ್ಣ ಇಲ್ಲದರುವುದು ದಂಧೆಕೋರರಿಗೆ ವರ. ಶೇ.10ರಷ್ಟು ಕೊಬ್ಬರಿ ಎಣ್ಣೆಗೆ ಶೇ.90ರಷ್ಟು ಮಿನರಲ್ ಆಯಿಲ್ ಬೆರೆಸಿದರೂ, ವ್ಯತ್ಯಾಸ ಗೊತ್ತಾಗುವುದಿಲ್ಲ. ಎಳ್ಳೆಣ್ಣೆ, ಸೂರ್ಯಕಾಂತಿ ಎಣ್ಣೆಗೂ ಕಳಬೆರಕೆ ಮಾಡಲಾಗುತ್ತದೆ. ಮಲೇಷ್ಯಾ ಹಾಗೂ ಇಂಡೊನೇಷ್ಯಾದಿಂದ ಕಡಿಮೆ ಬೆಲೆಗೆ ಕೊಬ್ಬಿನ ಅಂಶ ಹೆಚ್ಚಿರುವ ತಾಳೆ ಎಣ್ಣೆಯನ್ನು ಕೇರಳಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಆರೋಗ್ಯಕ್ಕೆ ಹಾನಿ ಮಾಡಬಲ್ಲ ಈ ಎಣ್ಣೆಯನ್ನು ಶೇಂಗಾ ಹಾಗೂ ಇತರ ಎಣ್ಣೆಯೊಂದಿಗೆ ಮಿಶ್ರಣ ಮಾಡಿ, ಸ್ಥಳೀಯವಾಗಿ ಕ್ಯಾನ್‌ಗಳಲ್ಲಿ ತುಂಬಿಸಿ ಕರ್ನಾಟಕಕ್ಕೆ ಸಾಗಿಸಲಾಗುತ್ತಿದೆ.
ಹೆದ್ದಾರಿ ಬದಿ ಮಾರಾಟ ಮಾಡುವ ಬಹುತೇಕ ಆಹಾರ ಉತ್ಪನ್ನಗಳಿಗೆ ಗುಣಮಟ್ಟ ಇರುವುದಿಲ್ಲ. ಪ್ರಾಧಿಕಾರದ ಅನುಮತಿ ಪಡೆಯದೆ ಆಹಾರ ಉತ್ಪನ್ನ ತಯಾರಿ, ಮಾರಾಟ ಕಾನೂನುಬಾಹಿರ. ದೂರು ಬಂದಾಗ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತೇವೆ. ಹಲವೆಡೆ ಸ್ವಯಂಪ್ರೇರಿತವಾಗಿಯೂ ಗುಣಮಟ್ಟ ಪರಿಶೀಲಿಸುತ್ತೇವೆ.
-ಡಾ.ಪ್ರವೀಣ್
ಸುರಕ್ಷಣಾ ಅಧಿಕಾರಿ, ಎಫ್‌ಎಸ್‌ಎಸ್‌ಎಐ
ಶಿರಾಡಿ ಘಾಟ್ ಪರಿಸರದ ವಾಹನಗಳ ನಿಲುಗಡೆ ಸ್ಥಳವಿರುವಲ್ಲಿ ಕಾರಿನಲ್ಲಿ ನಕಲಿ ಗೋಡಂಬಿ ಮಾರಾಟ ನೋಡಿದ್ದೇನೆ. ಸಂಬಂಧಿತ ಇಲಾಖಾಧಿಕಾರಿಗಳು ಸ್ವಯಂಪ್ರೇರಿತರಾಗಿ ಈ ಆಹಾರ ವಸ್ತುಗಳನ್ನು ಪರಿಶೀಲನೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜಾಲದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು.
-ಪ್ರಶಾಂತ್
34ನೇ ನೆಕ್ಕಿಲಾಡಿ ನಿವಾಸಿ, ಪುತ್ತೂರು