More

    ರಫ್ತು ಕುಸಿತ ಮತ್ಸೊೃೀದ್ಯಮಕ್ಕೆ ಹೊಡೆತ

    – ಹರೀಶ್ ಮೋಟುಕಾನ ಮಂಗಳೂರು
    ಕೋವಿಡ್ ಪರಿಣಾಮ ಹೊರ ರಾಷ್ಟ್ರಗಳಲ್ಲಿ ಬೇಡಿಕೆ ಕುಸಿತ ಹಾಗೂ ಭಾರತ-ಚೀನಾ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಮೀನು ರಫ್ತು ಉದ್ಯಮ ಕುಸಿದ ಕಾರಣ ಕರಾವಳಿಯ ಮತ್ಸೊೃೀದ್ಯಮಕ್ಕೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ.

    ರಾಜ್ಯದಿಂದ ಅತಿ ಹೆಚ್ಚು ಪ್ರಮಾಣದಲ್ಲಿ ವಾರ್ಷಿಕ 1 ಸಾವಿರ ಕಂಟೈನರ್ ಮೀನು ಚೀನಾಕ್ಕೆ ರಫ್ತಾಗುತ್ತದೆ. ಒಂದು ಕಂಟೈನರ್‌ನಲ್ಲಿ 25 ಟನ್ ಮೀನು ಇರುತ್ತದೆ. ಪ್ರಸ್ತುತ ಎರಡು ದೇಶಗಳ ನಡುವಿನ ಸಂಘರ್ಷದಿಂದ ಮೀನು ಆಮದಿಗೆ ಚೀನಾ ಕಠಿಣ ನಿಯಮಾವಳಿಗಳನ್ನು ರೂಪಿಸಿದೆ. ಐರೋಪ್ಯ ದೇಶಗಳು, ಹಾಂಕಾಂಗ್, ಥಾಯ್ಲೆಂಡ್, ಮಲೇಷ್ಯಾ, ಕೊರಿಯಾ ಮೊದಲಾದ ದೇಶಗಳಿಗೂ ಮೀನು ರಫ್ತಾಗುತ್ತಿತ್ತು. ಅಲ್ಲಿಯೂ ಬೇಡಿಕೆ ಇಲ್ಲದೆ ರಫ್ತು ಉದ್ಯಮ ಚೇತರಿಕೆಯಾಗಿಲ್ಲ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಮಂಗಳೂರು 12, ಉಡುಪಿ 10, ಉತ್ತರ ಕನ್ನಡ 3 ಸೇರಿದಂತೆ ಒಟ್ಟು 25 ಕಾರ್ಖಾನೆಗಳಿಂದ ವಿದೇಶಗಳಿಗೆ ಮೀನು ರಫ್ತಾಗುತ್ತದೆ. ಚೀನಾ ಸಹಿತ ವಿದೇಶಗಳಿಗೆ ಕಳೆದ ವರ್ಷ ಕರ್ನಾಟಕದಿಂದ ಒಟ್ಟು 1,600 ಕೋಟಿ ರೂ. ಮೌಲ್ಯದ ಮೀನು ರಫ್ತಾಗಿದೆ. ಕೋವಿಡ್ ಪರಿಣಾಮ ಮಾರ್ಚ್ ಬಳಿಕ ಸೆಪ್ಟೆಂಬರ್ ತನಕ ರಫ್ತು ಸಂಪೂರ್ಣ ಸ್ಥಗಿತಗೊಂಡಿತ್ತು. ಕಪ್ಪೆ ಬೊಂಡಾಸ್, ಬೊಂಡಾಸ್ ಮತ್ತು ಪಾಂಬೋಲು ಮೀನು ಚೀನಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತಿತ್ತು. ಸದ್ಯ ಶೇಖರಿಸಿಟ್ಟ ಮೀನುಗಳು ರಫ್ತಾಗದೆ ನಷ್ಟ ಉಂಟಾಗುತ್ತಿದೆ. ಚೀನಾ ಸೇರಿದಂತೆ ವಿದೇಶಗಳಲ್ಲಿ ಮೀನಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಯೋಗಾಲಯ ಸಮಸ್ಯೆ: ಕೇಂದ್ರ ಸರ್ಕಾರದ ಸಮುದ್ರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಮಂಗಳೂರಿನಲ್ಲಿದೆ. ಆದರೆ ಇಲ್ಲಿಂದ ರಫ್ತಾಗುವ ಮೀನಿನ ಪ್ರಯೋಗಾಲಯ ಪರೀಕ್ಷೆಗಾಗಿ ಕೊಚ್ಚಿಯಲ್ಲಿರುವ ಕೇಂದ್ರ ಕಚೇರಿಯನ್ನು ಅವಲಂಬಿಸಬೇಕಾಗಿದೆ. ರಫ್ತು ಮಾಡುವ ಕಾರ್ಖಾನೆಯಲ್ಲಿ ಲ್ಯಾಬ್ ಇದ್ದರೂ ವಾರ್ಷಿಕವಾಗಿ ನಡೆಯಬೇಕಾದ ಪರೀಕ್ಷೆಯ ವರದಿಯನ್ನು ಕೊಚ್ಚಿಯಿಂದಲೇ ಪಡೆಯಬೇಕಾದ ಕಾರಣ ಕರಾವಳಿಯ ರಫ್ತು ಉದ್ಯಮಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮಂಗಳೂರಿನಲ್ಲಿ ಪ್ರಯೋಗಾಲಯ ಆರಂಭಿಸುವಂತೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅದಕ್ಕೆ ಯಾವುದೇ ಸ್ಪಂದನೆ ದೊರಕಿಲ್ಲ.

    ಸಾಗಾಟ ವೆಚ್ಚ ಹೆಚ್ಚಳ: ಏರ್ ಕಾರ್ಗೋಗಳಲ್ಲಿ ಮೀನಿನ ದರಕ್ಕಿಂತ ಸಾಗಾಟ ವೆಚ್ಚ ಹೆಚ್ಚಳವಾಗಿದೆ. ವಿಮಾನ ಯಾನ ಸಂಸ್ಥೆಗಳು ದರ ಕಡಿಮೆ ಮಾಡಿದರೆ ಶೇಖರಿಸಿಟ್ಟ ಮೀನುಗಳನ್ನು ರಫ್ತು ಮಾಡಬಹುದು. ಇಲ್ಲದಿದ್ದರೆ ಅಪಾರ ನಷ್ಟ ಅನುಭವಿಸಬೇಕಾಗುತ್ತದೆ ಎಂದು ರಫ್ತು ಉದ್ಯಮಿಯೋರ್ವರು ತಿಳಿಸಿದ್ದಾರೆ.

    ಚೀನಾ ದೇಶ ವಿಧಿಸಿದ ಕಠಿಣ ನಿಯಮಾವಳಿ ಹಾಗೂ ಕೋವಿಡ್ ಪರಿಣಾಮ ವಿದೇಶಗಳಲ್ಲಿ ಬೇಡಿಕೆ ಕುಸಿದು ಮೀನು ರಫ್ತು ಪ್ರಮಾಣ ಕುಸಿತವಾಗಿದೆ. ಅಲ್ಲಿನ ರೆಸ್ಟೋರೆಂಟ್‌ಗಳು ಇನ್ನೂ ತೆರೆದುಕೊಳ್ಳದ ಕಾರಣ ಬೇಡಿಕೆ ಕಡಿಮೆಯಾಗಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಸರಿಯಾಗುವ ನಿರೀಕ್ಷೆ ಇದೆ.
    – ಪಾರ್ಶ್ವನಾಥ್, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts