More

    ಪದ್ಮ ಪುರಸ್ಕಾರಗಳ ಬಗ್ಗೆ ನಿಮಗೆಷ್ಟು ಗೊತ್ತು?: ಇಲ್ಲಿದೆ ನೋಡಿ ಸಂಕ್ಷಿಪ್ತ ಮಾಹಿತಿ..

    ಪದ್ಮ ಪುರಸ್ಕಾರದ ಆಯ್ಕೆ ಪ್ರಕ್ರಿಯೆಯನ್ನು ಸರಳೀಕರಿಸಿ, ಪಾರದರ್ಶಕವಾಗಿಸಿದ ಕೇಂದ್ರ ಸರ್ಕಾರ ಜನಸಾಮಾನ್ಯರೂ ಪದ್ಮ ಪ್ರಶಸ್ತಿಗೆ ಹೆಸರು ಶಿಫಾರಸು ಮಾಡಲು ಅವಕಾಶ ನೀಡಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇದು ಚಾಲ್ತಿಯಲ್ಲಿದೆ. ಮಾತ್ರವಲ್ಲ, ಪದ್ಮ ಪ್ರಶಸ್ತಿಗಳ ಇತಿಹಾಸ, ಆಯ್ಕೆ ಹೇಗೆ ನಡೆಯುತಿತ್ತು. ಇಲ್ಲಿಯವರೆಗೆ ಪ್ರಶಸ್ತಿ ಪಡೆದುಕೊಂಡವರ್ಯಾರು? ಯಾವ ಕ್ಷೇತ್ರಕ್ಕೆ ಮತ್ತು ಯಾವ ರಾಜ್ಯಕ್ಕೆ ಹೆಚ್ಚು ಪ್ರಶಸ್ತಿಗಳು ಸಲ್ಲಿಕೆಯಾಗಿವೆ ಹೀಗೆ ಎಲ್ಲ ವಿವರಗಳನ್ನು ಬೆರಳ ತುದಿಯಲ್ಲೇ ಪಡೆದುಕೊಳ್ಳಲು ಅವಕಾಶ ನೀಡಿದೆ. ಇದಕ್ಕಾಗಿ ಪದ್ಮಅವಾರ್ಡ್ಸ್ ಎಂಬ ವೆಬ್​ಸೈಟ್ ಬಿಡುಗಡೆ ಮಾಡಿದೆ. ಇದರಲ್ಲಿ 1954ರಲ್ಲಿ ಪದ್ಮ ಪ್ರಶಸ್ತಿ ಆರಂಭವಾದಾಗಿನಿಂದ ಹಿಡಿದು ಈವರೆಗಿನ ಎಲ್ಲ ವಿವರಗಳು ಲಭ್ಯವಿವೆ. ಪ್ರಶಸ್ತಿ ಪಡೆದಿರುವ 4,500ಕ್ಕೂ ಹೆಚ್ಚು ಜನರ ಮಾಹಿತಿ ಇಲ್ಲಿ ಲಭ್ಯವಿದೆ. ಪ್ರಶಸ್ತಿ ಪಡೆದವರ ಹೆಸರು, ಸೇವೆ ಸಲ್ಲಿಸಿರುವ ಕ್ಷೇತ್ರ, ರಾಜ್ಯ ಮತ್ತು ಪ್ರಶಸ್ತಿ ಪಡೆದ ವರ್ಷ ಯಾವುದು ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ.

    ದೆಹಲಿ, ಮಹಾರಾಷ್ಟ್ರದ್ದೇ ಸಿಂಹ ಪಾಲು: ಪದ್ಮ ಪ್ರಶಸ್ತಿ ಪಡೆದವರಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮಹಾರಾಷ್ಟ್ರದವರ ಪಾಲು ದೊಡ್ಡದಿದೆ. ಈವರೆಗೆ ದೆಹಲಿಯ 1490 ಜನರಿಗೆ ಪ್ರಶಸ್ತಿ ಒಲಿದಿದ್ದರೆ, ಮಹಾರಾಷ್ಟ್ರದ 777 ಜನರಿಗೆ ಪದ್ಮ ಗರಿ ಸಂದಿದೆ. ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮಬಂಗಾಳ ನಂತರದ ಸ್ಥಾನಗಳಲ್ಲಿದ್ದು, ಪ್ರಶಸ್ತಿ ಪಡೆದವರ ಸಂಖ್ಯೆ ಕ್ರಮವಾಗಿ 405, 306, 270 ಆಗಿದೆ. ಕರ್ನಾಟಕದ 253 ಜನರಿಗೆ ಪದ್ಮ ಗೌರವ ಸಲ್ಲಿಕೆಯಾಗಿದೆ.

    ಕಲಾಕ್ಷೇತ್ರಕ್ಕೊಲಿದ ಪದ್ಮ ಮುಕುಟ: ಇಲ್ಲಿಯವರೆಗೆ ವಿತರಿಸಲಾಗಿರುವ ಪದ್ಮ ಪ್ರಶಸ್ತಿಗಳನ್ನು ಕ್ಷೇತ್ರಕ್ಕನುಗುಣವಾಗಿ ವಿಂಗಡಿಸಿದರೆ, ಕಲಾ ಕ್ಷೇತ್ರಕ್ಕೆ ಹೆಚ್ಚಿನ ಪ್ರಶಸ್ತಿಗಳು ಲಭ್ಯವಾಗಿರುವುದು ಸರ್ಕಾರಿ ವೆಬ್​ಸೈಟ್​ನಲ್ಲಿರುವ ಮಾಹಿತಿಯಿಂದ ತಿಳಿದುಬರುತ್ತದೆ.
    ಕಲಾ ಕ್ಷೇತ್ರಕ್ಕೆ 995 ಪ್ರಶಸ್ತಿಗಳು ಒಲಿದಿದ್ದರೆ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದ 899 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವೈದ್ಯಕೀಯ(566), ವಿಜ್ಞಾನ ಮತ್ತು ಇಂಜಿನಿಯರಿಂಗ್(503), ಸಮಾಜ ಸೇವೆ(446), ನಾಗರಿಕ ಸೇವೆ(422), ಸಾರ್ವಜನಿಕ ವ್ಯವಹಾರಗಳು(217), ಕ್ರೀಡೆ(233), ವ್ಯಾಪಾರ ಮತ್ತು ಕೈಗಾರಿಕೆ(187), ಇತರೆ(99) ಕ್ಷೇತ್ರಗಳಿಗೆ ಒಟ್ಟು 4567 ಪ್ರಶಸ್ತಿಗಳನ್ನು ನೀಡಲಾಗಿದೆ. 1970-75ರ ಅವಧಿಯಲ್ಲಿ ನಾಗರಿಕ ಸೇವಾ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪದ್ಮ ಪ್ರಶಸ್ತಿಗಳು ಸಲ್ಲಿಕೆಯಾಗುತ್ತಿದ್ದವು. 1990ರ ನಂತರದಲ್ಲಿ ಕಲಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿರುವುದು ಕಂಡುಬಂದಿದೆ.

    ಪದ್ಮ ಪ್ರಶಸ್ತಿಗಳ ಹಿನ್ನೆಲೆ: ಭಾರತ ಸರ್ಕಾರ 1954ರಲ್ಲಿ ಮೊದಲ ಬಾರಿ ಎರಡು ರೀತಿಯ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ರೂಪಿಸಿತ್ತು. ಭಾರತ ರತ್ನ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳು ಪ್ರಥಮ ಹಂತದಲ್ಲಿ ಹುಟ್ಟಿಕೊಂಡವು. ಆದರೆ 1955ರ ಜ.8ರಂದು ಪದ್ಮ ಪ್ರಶಸ್ತಿಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಯಿತು. ಅವುಗಳೇ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳು.

    ಸಾಮಾನ್ಯವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಮರಣಾನಂತರ ನೀಡಲಾಗುವುದಿಲ್ಲ. ಆದರೆ ಕೆಲ ಅಪರೂಪದ ಪ್ರಕರಣಗಳಲ್ಲಿ ಮರಣಾನಂತರವೂ ಪ್ರಶಸ್ತಿ ಸಲ್ಲಿಸಲಾಗಿದೆ. ಪದ್ಮ ಪ್ರಶಸ್ತಿಯನ್ನು ಈಗಾಗಲೇ ಒಂದು ಬಾರಿ ಸ್ವೀಕರಿಸಿರುವ ವ್ಯಕ್ತಿಗೆ ಇನ್ನೊಮ್ಮೆ ಪ್ರಶಸ್ತಿ ನೀಡಬಹುದಾಗಿದೆ. ಆದರೆ ಒಂದು ಪದ್ಮ ಪ್ರಶಸ್ತಿ ಪಡೆದು ಐದು ವರ್ಷಗಳ ಬಳಿಕವಷ್ಟೇ ಇನ್ನೊಂದನ್ನು ನೀಡಬಹುದಾಗಿದೆ. ಅಷ್ಟೇ ಅಲ್ಲದೆ ಪ್ರತೀವರ್ಷ ನೀಡಲಾಗುವ ಪದ್ಮ ಪ್ರಶಸ್ತಿಗಳ ಸಂಖ್ಯೆ 120 ದಾಟಬಾರದು. ಮರಣಾನಂತರ ನೀಡುವ ಮತ್ತು ಎನ್​ಆರ್​ಐ, ವಿದೇಶಿಗರಿಗೆ ನೀಡುವ ಪ್ರಶಸ್ತಿ ಇದರಿಂದ ಹೊರತಾಗಿರುತ್ತದೆ.

    ಇಲ್ಲಿಯವರೆಗೆ ನೀಡಿರುವ ಒಟ್ಟು ಪ್ರಶಸ್ತಿಗಳು
    48 ಭಾರತ ರತ್ನ
    307 ಪದ್ಮ ವಿಭೂಷಣ
    1255 ಪದ್ಮಭೂಷಣ
    3005 ಪದ್ಮಶ್ರೀ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts