More

    ಅಬಕಾರಿಗಿಲ್ಲ ಕರೊನಾ ಭೀತಿ!

    ಬೆಳಗಾವಿ:ಕರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಎಲ್ಲ ಕ್ಷೇತ್ರಗಳು ನಷ್ಟ ಅನುಭವಿಸುತ್ತಿವೆ. ಆದರೆ, ಅಬಕಾರಿ ಇಲಾಖೆಗೆ ಮಾತ್ರ ಯಾವುದೇ ಪರಿಣಾಮ ಉಂಟಾಗಿಲ್ಲ. ಜಿಲ್ಲೆಯ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ಬರುತ್ತಿದ್ದು, ನಿತ್ಯ 10.5 ಸಾವಿರ ಮದ್ಯದ ಬಾಕ್ಸ್ (ಒಂದು ಲಕ್ಷ ಲೀಟರ್) ಮಾರಾಟವಾಗುತ್ತಿದೆ.

    ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 631 ಮದ್ಯ ಅಂಗಡಿಗಳ ವ್ಯಾಪ್ತಿಯಲ್ಲಿ ಮದ್ಯದ ಬಾಕ್ಸ್ ಮಾರಾಟ ಪ್ರಮಾಣದಲ್ಲಿ ಶೇ. 21.5ರಷ್ಟು ಏರಿಕೆಯಾಗುತ್ತಿದೆ. ನಗರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಮದ್ಯ ಮಾರಾಟವಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ 9ರಿಂದ 10 ಸಾವಿರ ಬಾಕ್ಸ್ ಮದ್ಯ ಮಾರಾಟ ಆಗುತ್ತದೆ. ವಾರದ ಕೊನೆಯಲ್ಲಿ 15 ಸಾವಿರ ಮದ್ಯ ಬಾಕ್ಸ್ ಮಾರಾಟ ಆಗುತ್ತಿದೆ. ಇದೀಗ ವಿಶ್ವವ್ಯಾಪಿಯಾಗಿ ಕರೊನಾ ಭೀತಿ ಆವರಿಸಿದ್ದರೂ ನಾಲ್ಕೈದು ವಾರಗಳಿಂದ ಮದ್ಯದ ಬಾಕ್ಸ್ ಮಾರಾಟ ಪ್ರಮಾಣದಲ್ಲಿ ಶೇ. 11ರಷ್ಟು ಏರಿಕೆ ಕಂಡಿದೆ.

    ಅಬಕಾರಿ ಇಲಾಖೆಯು 2019- 20ನೇ ಸಾಲಿನ ವಾರ್ಷಿಕ 3,48,728 ಮದ್ಯ ಹಾಗೂ 1,35,264 ಬಿಯರ್ ಮಾರಾಟದ ಗುರಿ ಹಾಕಿಕೊಂಡಿದ್ದು, ಆ ಪೈಕಿ 2,82,782 ಮದ್ಯ ಮತ್ತು 93,085 ಬಿಯರ್ ಬಾಕ್ಸ್ ಮಾರಾಟವಾಗಿದೆ. ಸಾಮಾನ್ಯ ದಿನಗಳಲ್ಲಿ ದಿನಕ್ಕೆ 8.5 ರಿಂದ 9 ಸಾವಿರ ಬಾಕ್ಸ್ ಮದ್ಯ ಮಾರಾಟ ಆಗುತ್ತದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಮದ್ಯದ ಅಂಗಡಿಗಳಲ್ಲಿ ನಿತ್ಯ ಲಕ್ಷಕ್ಕೂ ಅಧಿಕ ಲೀಟರ್ (750, 375, 180, 90, 60, 30 ಎಂ.ಎಲ್.) ಮಾರಾಟ ಆಗುತ್ತಿದೆ. ಸರ್ಕಾರಕ್ಕೆ ಅಧಿಕ ಆದಾಯ ತರುತ್ತಿದ್ದರೆ, ಮದ್ಯದ ಅಂಗಡಿಗಳ ಮಾಲೀಕರಿಗೆ ಭರ್ಜರಿ ವ್ಯಾಪಾರ ಆಗುತ್ತಿದೆ.

    ಮಾಲೀಕರಿಗಿಲ್ಲ ನಷ್ಟ: ಈಗಾಗಲೇ ಕರೊನಾ ವೈರಸ್‌ನಿಂದ ಮಾಂಸ ಮಾರಾಟ ಪ್ರಮಾಣ ಶೇ. 25ರಷ್ಟು ಇಳಿಕೆ ಕಂಡಿದೆ. ಇತ್ತ ಕೋಳಿ ಮಾರಾಟ ಆಗುತ್ತಿಲ್ಲ ಎಂದು ಜೀವಂತ ಕೋಳಿ ಗಳನ್ನು ಸಮಾಧಿ ಮಾಡುತ್ತಿದ್ದಾರೆ. ಇದರಿಂದ ಕೋಳಿ ಸಾಕಾಣಿಕೆದಾರರಿಗೆ ಮತ್ತು ಮಾಂಸ ಮಾರಾಟಗಾರರಿಗೆ ನಿತ್ಯ ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿದೆ. ‘ಕರೊನಾ ವೈರಸ್‌ನಿಂದ ನಮ್ಮ ಆದಾಯ ಕುಂಠಿತಗೊಂಡಿಲ್ಲ’ ಎನ್ನುತ್ತಾರೆ ಮದ್ಯದ ಅಂಗಡಿಗಳ ಮಾಲೀಕರು.

    ಕರೊನಾ ವೈರಸ್‌ನಿಂದ ಮದ್ಯದ ಮಾರಾಟ ಮೇಲೆ ಯಾವುದೇ ಪರಿಣಾಮ ಉಂಟು ಮಾಡಿಲ್ಲ. ನಿತ್ಯ 10 ಸಾವಿರ ಮದ್ಯದ ಬಾಕ್ಸ್
    ಗಳು ಮಾರಾಟ ಆಗುತ್ತಿವೆ. ಶನಿವಾರ ಮತ್ತು ಭಾನುವಾರ ದಿನಗಳಂದು 15 ರಿಂದ 16 ಸಾವಿರ ಮದ್ಯದ ಬಾಕ್ಸ್ ಗಳು ಮಾರಾಟ ಆಗುತ್ತಿವೆ. ಸದ್ಯ ಜಿಲ್ಲೆಯಲ್ಲಿ ಕರೊನಾ ವೈರಸ್ ಹಿನ್ನೆಲೆಯಲ್ಲಿ 15 ಕ್ಲಬ್‌ಗಳನ್ನು ಬಂದ್ ಮಾಡಲಾಗಿದೆ.
    |ಬಸವರಾಜ ಗಂದಿಗವಾಡ, ಅಬಕಾರಿ ಉಪ ಆಯುಕ್ತರು

    |ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts