More

    ತುರುವೇಕೆರೆ ಠಾಣೆ ಎದುರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಪ್ರತಿಭಟನೆ

    ತುರುವೇಕೆರೆ: ಮುನಿಯೂರಿನ ಸೋಮಶೇಖರ್ ಮೇಲೆ ಹಲ್ಲೆ ಮಾಡಿರುವ ಆರೋಪಿ ಪುನೀತ್ ಎಂಬುವವನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ತಾಲೂಕು ಜೆಡಿಎಸ್‌ನಿಂದ ಸೋಮವಾರ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

    ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ ಗೇಟ್ ಮುಂಭಾಗ ಕಾರ್ಯಕರ್ತರೊಂದಿಗೆ ಕುಳಿತು ಪ್ರತಿಭಟನೆ ನಡೆಸಿದರು.
    ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ತಾರತಮ್ಯ ಎಣಿಸುತ್ತಿರುವುದು ಸರಿಯಲ್ಲ. ಶಾಸಕ ಮಸಾಲ ಜಯರಾಮ್ ಆರೋಪಿಯನ್ನು ತಮ್ಮ ಕಾರ್ಖಾನೆಯಲ್ಲಿ ಅಡಗಿಸಿಟ್ಟಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ, ಶಾಸಕರಾದವರು ಕ್ರಿಮಿನಲ್‌ಗಳ ಪರ ನಿಲ್ಲುತ್ತಿರುವುದು ಸರಿಯಿಲ್ಲ, ಪುನೀತ್ ಬಿಜೆಪಿ ಕಾರ್ಯಕರ್ತನಾಗಿದ್ದ ಎನ್ನುವ ಕಾರಣಕ್ಕೆ ಆತನ ಬಂಧನ ಮಾಡದಂತೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕುತ್ತಿರುವುದು ಆಡಳಿತ ಕುಸಿತಕ್ಕೆ ಹಿಡಿದ ಕನ್ನಡಿ ಎಂದರು.

    ದ್ವೇಷ ರಾಜಕಾರಣ ಹಿರಿತನಕ್ಕೆ ಶೋಭೆಯಲ್ಲ: ಮುನಿಯೂರಿನಲ್ಲಿ ಜಮೀನು ವಿವಾದಕ್ಕೆ ಆಗಿದ್ದ ಹಲ್ಲೆ ಪ್ರಕರಣವನ್ನು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಂಡು ಪ್ರತಿಭಟನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಶಾಸಕ ಮಸಾಲ ಜಯರಾಮ್ ಹೇಳಿದರು.

    ಹುಲ್ಲೇಕೆರೆಯಲ್ಲಿ ಸೋಮವಾರ 2.78 ಕೋಟಿ ರೂಪಾಯಿ ವೆಚ್ಚದಲ್ಲಿ ತಾವರೆಕೆರೆಯಿಂದ ಹುಲ್ಲೆಕೆರೆ ಕ್ರಾಸ್‌ವರೆಗಿನ ಆಯ್ದ ಭಾಗದಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

    ಹಲವು ವರ್ಷಗಳಿಂದ ಮುನಿಯೂರಿನ ಸೋಮಶೇಖರ್ ಹಾಗೂ ಪುನೀತ್ ಕುಟುಂಬದವರ ಮಧ್ಯೆ ಜಮೀನು ವಿವಾದ ಕೋರ್ಟ್ ಮೆಟ್ಟಿಲೇರಿ ಹಲವು ಬಾರಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಶಾಸಕರಾಗಿದ್ದಾಗ ಪ್ರಕರಣ ಜೀವಂತವಾಗಿತ್ತು, ಆದರೆ ಇತ್ತೀಚೆಗೆ ಪುನೀತ್ ಎನ್ನುವವರು ಸೋಮಶೇಖರ್ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿದೆ. ಆದರೆ ಹಲ್ಲೆಗೊಳಗಾದವನು ಜೆಡಿಎಸ್ ಮುಖಂಡನೊಬ್ಬನ ಸಂಬಂಧಿ ಎನ್ನುವ ಕಾರಣಕ್ಕೆ ಪುನೀತ್ ಎನ್ನುವವನನ್ನು ಬಿಜೆಪಿ ಮುಖಂಡ ಎಂಬಂತೆ ಸುಳ್ಳು ಹಬ್ಬಿಸಿ ತನ್ನ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳುಲು ಮುಂದಾಗಿರುವುದು ಮಾಜಿ ಶಾಸಕರ ಹಿರಿತನಕ್ಕೆ ಶೋಭೆ ತರುವುದಿಲ್ಲ, ತಾಲೂಕಿನಲ್ಲಿ 5 ಕರೊನಾ ಪ್ರಕರಣ ಬಂದಿದ್ದರೂ ಪ್ರತಿಭಟನೆ ನಡೆಸಲು ಮುಂದಾಗಿರುವುದು ಸರಿಯಲ್ಲ, ತಾಲೂಕಿನಲ್ಲಿ ಮುಂದೆ ಕರೊನಾ ಪ್ರಕರಣ ಬಂದರೆ ಅದಕ್ಕೆ ಮಾಜಿ ಶಾಸಕರೇ ಕಾರಣ ಎಂದು ಆರೋಪಿಸಿದರು.

    ಪುನೀತ್ ಎನ್ನುವವನನ್ನು ಪೊಲೀಸರು ಹಿಡಿದು ಜೈಲಿಗಟ್ಟಿ ಗಲ್ಲಿಗೇರಿಸಲಿ, ಇಂತಹ ಪ್ರಕರಣಗಳು ನನ್ನ ಅವಧಿಯಲ್ಲಿ ನಡೆಯುವುದನ್ನು ಸಹಿಸಲ್ಲ. ತಾಲೂಕಿನಲ್ಲಿ ಶಾಂತಿ ಸೌಹಾರ್ದತೆಗೆ ಒತ್ತುಕೊಟ್ಟು ತಾಲೂಕನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts