More

    ಮಹಾನಗರ ಪಾಲಿಕೆ ಆಯವ್ಯಯವೇ ಅವೈಜ್ಞಾನಿಕ, ಮಾಜಿ ಸದಸ್ಯ ರವೀಂದ್ರ ಲೋಣಿ ಟೀಕೆ

    ವಿಜಯಪುರ: ಆಯವ್ಯಯದ ಗಾತ್ರ ಪ್ರತಿ ವರ್ಷ ಹೆಚ್ಚುತ್ತಾ ಹೋಗಬೇಕು ವಿನಃ ಕಡಿಮೆಯಾಗಬಾರದು. ಆದರೆ, ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಆಯವ್ಯಯದ ಗ್ರಾತ್ರ ಕಳೆದ ಆಯವ್ಯಯಕ್ಕಿಂತಲೂ ಕಡಿಮೆಯಾಗಿದೆ. ಆದಾಯ ಮತ್ತು ಖರ್ಚು-ವೆಚ್ಚಗಳಿಗೆ ತಾಳೆಯಾಗುತ್ತಿಲ್ಲ. ಹೀಗಾಗಿ ಇದೊಂದು ಅವೈಜ್ಞಾನಿಕ ಬಜೆಟ್ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ವಿಶ್ಲೇಷಿಸಿದರು.

    ಕಳೆದ ಬಾರಿ 204 ಕೋಟಿ ರೂ. ಗಾತ್ರದ ಬಜೆಟ್ ಮಂಡನೆಯಾದರೆ ಈ ಬಾರಿ 159 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿರುವುದು ಅವೈಜ್ಞಾನಿಕವಲ್ಲದೆ ಮತ್ತೇನು? ಆಯವ್ಯಯದ ಅಂಕಿ ಅಂಶಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಅಧಿಕಾರಿಗಳು ಅಂಕಿ-ಅಂಶಗಳನ್ನು ಹೊಂದಾಣಿಕೆ ಮಾಡಿ ನೀಡಿದ್ದನ್ನೇ ಮಹಾಪೌರರು ಮಂಡನೆ ಮಾಡಿದ್ದಾರೆ. ಅದರಲ್ಲಿ ಯಾವುದೇ ಅರ್ಥವಿಲ್ಲ. ಆದಾಯಕ್ಕೂ ಮತ್ತು ಖರ್ಚು-ವೆಚ್ಚಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಈ ಬಜೆಟ್‌ನಲ್ಲಿ ಹುರುಳಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಟೀಕಿಸಿದರು.

    ಆಸ್ತಿ ತೆರಿಗೆ ಅಸಮರ್ಪಕ

    ಆಸ್ತಿ ತೆರಿಗೆ ಸಂಗ್ರಹ ಸಮರ್ಪಕವಾಗಿಲ್ಲ. ನಗರದಲ್ಲಿ 90-95 ಸಾವಿರ ಆಸ್ತಿಗಳಿದ್ದರೂ ಅರ್ಧದಷ್ಟು ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದಿಲ್ಲ. ಕಳೆದ ವರ್ಷ 24 ಕೋಟಿ ರೂ.ಇದ್ದ ಆಸ್ತಿ ತೆರಿಗೆ ಪೈಕಿ ಈವರೆಗೆ ಅಂದಾಜು 19-20 ಕೋಟಿ ರೂ.ಸಂಗ್ರಹವಾಗಿರಬಹುದು. ಇನ್ನುಳಿದ ಕಾಲಾವಕಾಶದಲ್ಲಿ ಗುರಿ ಮುಟ್ಟಲು ಸಾಧ್ಯವಿಲ್ಲ. ಹೀಗಾಗಿ ಈ ಬಜೆಟ್ ನಲ್ಲಿ 31 ಕೋಟಿ ರೂ.ಸಂಗ್ರಹಿಸುವುದಾಗಿ ಮಂಡಿಸಿರುವುದು ಹಾಸ್ಯಾಸ್ಪದ ಎಂದು ಲೋಣಿ ತಿಳಿಸಿದರು.
    ಘನ ತ್ಯಾಜ್ಯ ನಿರ್ವಹಣೆಯಿಂದ ಸುಮಾರು 5 ಕೋಟಿ ರೂ. ಸಂಗ್ರಹಿಸುವುದಾಗಿ ಹೇಳಿದ್ದಾರೆ. ಇಂಥ ಬಹುತೇಕ ಆದಾಯ ಸಂಗ್ರಹ ವಿಧಾನ ಮತ್ತು ಅಂಕಿ ಅಂಶಗಳು ಅವೈಜ್ಞಾನಿಕ ಎಂದರು.

    ಕಾಂಗ್ರೆಸ್ ಸರ್ಕಾರದಲ್ಲಿಲ್ಲ ಅನುದಾನ

    ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 10 ತಿಂಗಳಾದರೂ ಈವರೆಗೂ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಈ ಹಿಂದಿನ ಬಿಜೆಪಿ ಅವಧಿಯಲ್ಲಿ ಸಾಕಷ್ಟು ಅನುದಾನ ಬಿಡುಗಡೆಯಾಗಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿತ್ತು. ನಗರಸಭೆಯಿಂದ ಮಹಾನಗರ ಪಾಳಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ಕಾಂಗ್ರೆಸ್ ನಿರೀಕ್ಷಿತ ಅನುದಾನವನ್ನೇ ನೀಡಿಲ್ಲ. ಬಜೆಟ್‌ನಲ್ಲಿ ಸರ್ಕಾರದಿಂದ ಬರುವ ಅನುದಾನದ ಬಗ್ಗೆ ಪ್ರಸ್ತಾಪಿಸಿಲ್ಲ. ಬಿಜೆಪಿ ಸರ್ಕಾರದಲ್ಲಿ ಪಾಲಿಕೆಗೆ 100 ಕೋಟಿ ರೂ.ಅನುದಾನ ಬಂದಿತ್ತು. ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ಅನುದಾನ ಬಂದಿಲ್ಲ ಎಂದರು.

    ನಗರ ಸೌಂದರೀಕರಣಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಈ ಯೋಜನೆ ಕೇವಲ 10 ವಾರ್ಡ್‌ಗಳಿಗೆ ಮಾತ್ರ ಅನ್ವಯಿಸಿದಂತಿದೆ. ಕೆಲವೇ ಕೆಲವು ವಾರ್ಡ್‌ಗಳನ್ನು ಪ್ರಸ್ತಾಪಿಸಲಾಗಿದೆ. ಮಹಾಪೌರರ ಮನೆಯ ಬಳಿ ಇರುವ ಐತಿಹಾಸಿಕ ಸ್ಮಾರಕ ಇಬ್ರಾಹಿಂ ರೋಜಾ ಸುತ್ತಲಿನ ಪ್ರದೇಶವೇ ಅತಿಕ್ರಮಣಗೊಂಡಿದೆ. ಆ ಪ್ರದೇಶದ ರಸ್ತೆಗಳು ಇಕ್ಕಟ್ಟಾಗಿವೆ. ಕಮಾನು ಹಾಕೋದ್ರಿಂದ ನಗರದ ಸೌಂದರೀಕರಣ ಆಗಲ್ಲ. ಮೇಯರ್ ಅವರು ಮೊದಲು ಇಬ್ರಾಹಿಂ ರೋಜಾ ಸುತ್ತಲಿನ ಅತಿಕ್ರಮಣ ತೆರವು, ರಸ್ತೆ ಅಭಿವೃದ್ಧಿಗೆ ಗಮನ ಹರಿಸಬೇಕೆಂದು ರವೀಂದ್ರ ಲೋಣಿ ಮನವಿ ಮಾಡಿದರು.

    ಹಾಸ್ಯಾಸ್ಪದ ಘೋಷಣೆ

    ಬಜೆಟ್‌ನಲ್ಲಿ ಹೆಚ್ಚುವರಿಗಾಗಿ ಎರಡು ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ಘೋಷಣೆ ಮಾಡಲಾಗಿದೆ. ಈಗಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಪಾಲಿಕೆಯಿಂದ ಬಾಕಿ ಉಳಿಸಿಕೊಳ್ಳಲಾಗಿದೆ. 5 ತಿಂಗಳಿಂದ ಪೌರ ಕಾರ್ಮಿಕರಿಗೆ ಸಂಬಳವನ್ನೇ ನೀಡಿಲ್ಲ. ಇಬ್ರಾಹಿಂ ರೈಲ್ವೆ ಮೇಲ್ಸೇತುವೆ ಕೆಳಗೆ ಬ್ಯಾಸ್ಕೆಟ್ ಬಾಲ್ ಮೈದಾನ ಹಾಗೂ ಫುಡ್‌ಕೋರ್ಟ್ ನಿರ್ಮಾಣ ಮಾಡುವುದಾಗಿ ಹೇಳಿರುವುದು ಹಾಸ್ಯಾಸ್ಪದ ಎಂದರು.
    ನಗರದಲ್ಲಿ ಆಸ್ತಿಗಳ ಅತಿಕ್ರಮಣ ಹೆಚ್ಚಾಗಿದೆ. ಬೇನಾಮಿ ಆಸ್ತಿಗಳ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ಮಹಾಪೌರರು ಈ ಬಗ್ಗೆ ಗಮನ ಹರಿಸಬೇಕು. ಬಂಧು ಬಳಗ ಇರಲಿ, ಸ್ನೇಹಿತರ ಬಳಗ ಇರಲಿ ಸರಕಾರಿ ಜಮೀನು ಒತ್ತುವರಿ ಮಾಡಿರುವುದನ್ನು ಕೂಡಲೇ ತೆರವುಗೊಳಿಸಬೇಕು ಎಂದು ರವೀಂದ್ರ ಲೋಣಿ ಒತ್ತಾಯಿಸಿದರು.

    ಆಶ್ರಮ ರಸ್ತೆ, ಜೆಎಂ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಸುಗಮ ಸಂಚಾರಕ್ಕಾಗಿ ಮುಖ್ಯ ರಸ್ತೆಗಳ ಅಗಲೀಕರಣ ಆಗಬೇಕೆಂದರು.

    ಕುಡಿಯುವ ನೀರಿನ ಸಮಸ್ಯೆಗಿಲ್ಲ ಮುಕ್ತಿ

    ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ದಿನದ 24ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಈವರೆಗೆ ಸಮರ್ಪಕವಾಗಿ ಅನುಷ್ಟಾನಗೊಂಡಿಲ್ಲ. ಕೊರ್ತಿ-ಕೊಲ್ಹಾರ ಸೇತುವೆ ಬಳಿಯ ಜಾಕ್‌ವೆಲ್ ಎತ್ತರಿಸಿದರೂ ನೀರು ಸರಬರಾಜಾಗುತ್ತಿಲ್ಲ. ಬೇಸಿಗೆ ಆರಂಭದಲ್ಲೇ ಭೂತನಾಳ ಕೆರೆ ಬರಿದಾಗಿದೆ. ಆಕ್ವಾಡಕ್ಟ್ ಮೂಲಕ ಕೆರೆ ತುಂಬಿಸುತ್ತಿರುವುದು ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದಂತಾಗಿದೆ.
    ಜಾಕ್‌ವೆಲ್‌ನಿಂದ ಕರೆಗೆ ನೀರು ತುಂಬಿರುವ ಪೈಪ್‌ಲೈನ್‌ನಿಂದ ಅಲ್ಲಲ್ಲಿ ನೀರು ಸೋರಿಕೆಯಾಗುತ್ತಿದೆ. ಕೆಲವರು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿರದ್ದಾರೆ. ಹೀಗಾಗಿ ತಂತಿಬೇಲಿ ಹಾಕಿ ಭದ್ರತೆ ಕಲ್ಪಿಸಿ ನೀರು ಪೋಲಾಗದಂತೆ ಎಚ್ಚರ ವಹಿಸಿದ್ದರೆ ಕೆರೆ ಖಾಲಿಯಾಗುತ್ತಿರಲಿಲ್ಲ ಎಂದರು.

    ಲಿಂ. ಸಿದ್ಧೇಶ್ವರ ಶ್ರೀ ವೃತ್ತ ನಿರ್ಮಾಣ

    ಮಹಾನಗರ ಪಾಲಿಕೆ ಬಜೆಟ್‌ನಲ್ಲಿ ಲಿಂ. ಸಿದ್ಧೇಶ್ವರ ಶ್ರೀಗಳ ವೃತ್ತದ ನಿರ್ಮಾಣದ ಬಗ್ಗೆ ಉಲ್ಲೇಖಿಸಿರುವ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಲೋಣಿ, ಲಿಂ.ಸಿದ್ಧೇಶ್ವರ ಶ್ರೀಗಳು ತಮ್ಮ ಅಂತಿಮ ಅಭಿವಾದನಾ ಪತ್ರದಲ್ಲಿ ಬಹಳ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ತಮ್ಮ ಯಾವುದೇ ಕುರುಹು ಉಳಿದಂತೆ ಮಾಡಲಾಗಿದೆ. ಹೀಗಾಗಿ ಆ ಬಗ್ಗೆ ಹಿರಿಯರು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕೆಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts