More

    ರಾಜಕೀಯರಂಗಕ್ಕೆ ಬಂದು 24 ಗಂಟೆಯೊಳಗೆ ಪಲ್ಟಿ ಹೊಡೆದ ಫುಟ್​ಬಾಲ್​ನ ಮಾಜಿ ಆಟಗಾರ

    ಕೋಲ್ಕತ: ಖ್ಯಾತ ಕ್ರೀಡಾಪಟುಗಳು ಸಮಾಜಸೇವೆಯ ಉದ್ದೇಶದೊಂದಿಗೆ ರಾಜಕೀಯ ಮೈದಾನಕ್ಕೆ ಇಳಿಯುವುದು ಸಾಮಾನ್ಯ. ಇಂಥವರು ಸಾಮಾನ್ಯವಾಗಿ ನೇರವಾಗಿ ಚುನಾವಣೆ ಎದುರಿಸದೆ, ರಾಜ್ಯಸಭೆ ಅಥವಾ ವಿಧಾನಪರಿಷತ್​ನ ಸದಸ್ಯರಾಗಿ ನೇಮಕಗೊಂಡು ತಮ್ಮದೇ ಆದ ವ್ಯಾಪ್ತಿಯಲ್ಲಿ ಜನಸೇವೆ ಮಾಡುತ್ತಾರೆ. ಈ ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಮಾಡುತ್ತಾರೆ.

    ಅದರಂತೆ, ಇಲ್ಲೊಬ್ಬ ಫುಟ್​ಬಾಲ್​ ಆಟಗಾರ ಸಮಾಜಸೇವೆ ಉದ್ದೇಶದಿಂದ ರಾಷ್ಟ್ರೀಯ ಪಕ್ಷವೊಂದಕ್ಕೆ ಸೇರ್ಪಡೆಗೊಂಡಿದ್ದರು. ಈ ಬಗ್ಗೆ ಘೋಷಣೆಯನ್ನೂ ಮಾಡಿದ್ದರು. ಆ ಪಕ್ಷದ ಕಚೇರಿಗೆ ಹೋಗಿ ಪಕ್ಷದ ಪ್ರಾಥಮಿಕ ಸದಸ್ಯತ್ಯ ತೆಗೆದುಕೊಂಡು ಹಿರಿಯ ಮುಖಂಡರ ಜತೆ ಧ್ವಜ ಹಿಡಿದು ಫೋಟೋಗಳಿಗೆ ಫೋಸ್​ ಕೊಟ್ಟೂ ಇದ್ದರು.

    ಇದಾಗಿ 24 ಗಂಟೆ ಕಳೆಯುವುದರೊಳಗೆ ಅದೇನಾಯಿತೋ ಗೊತ್ತಿಲ್ಲ. ನನಗೆ ಬೇಡಪ್ಪಾ ಎಂದು ಹೇಳಿ ರಾಜಕೀಯ ಮೈದಾನದಿಂದ ಕಾಲ್ಕತ್ತಿದ್ದಾರೆ. ಮಿಡ್​ಫೀಲ್ಡ್​ ಜನರಲ್​ ಎಂದೇ ಪ್ರಖ್ಯಾತರಾಗಿದ್ದ ಭಾರತದ ಫುಟ್​ಬಾಲ್​ ತಂಡದ ಮಾಜಿ ಆಟಗಾರ ಮೆಹ್ತಾಬ್​ ಹುಸೇನ್​ ರಾಜಕೀಯ ಮೈದಾನಕ್ಕೆ ಬೆನ್ನು ಹಾಕಿ ಹೋದವರಾಗಿದ್ದಾರೆ.

    ಇದನ್ನೂ ಓದಿ: ವಾಹನಗಳಲ್ಲಿ ಇನ್ನು ಹೆಚ್ಚುವರಿ ಟೈಯರ್​ ಅವಶ್ಯಕತೆ ಇಲ್ಲ!

    ಈಸ್ಟ್​ ಬೆಂಗಾಲ್​ ತಂಡದ ಮಾಜಿ ನಾಯಕರಾಗಿದ್ದ ಮೆಹ್ತಾಬ್​ ಹುಸೇನ್​ ಅವರು ಮಂಗಳವಾರ ಕೋಲ್ಕತದ ಮುರಳೀಧರ್​ ಸೇನ್​ ಲೇನ್​ನಲ್ಲಿರುವ ಪಶ್ಚಿಮ ಬಂಗಾಳ ಬಿಜೆಪಿ ಕಚೇರಿಗೆ ಹೋಗಿ ಪಕ್ಷವನ್ನು ಸೇರುತ್ತಿರುವುದಾಗಿ ಹೇಳಿದ್ದರು. ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್​ ಘೋಷ್​ ಅವರು, ಪಕ್ಷದ ಬಾವುಟ ಕೊಟ್ಟು ಇವರನ್ನು ಪಕ್ಷಕ್ಕೆ ಗೌರವಾದರಗಳಿಂದ ಬರಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಭಾರತ್​ ಮಾತಾ ಕೀ ಜೈ ಎಂಬ ಘೋಷಣೆ ಎತ್ತರದ ಸ್ಥಾಯಿಯಲ್ಲಿ ಕೇಳಿಬಂದಿತ್ತು.

    ಇದಾಗಿ 24 ಗಂಟೆ ಕಳೆಯುವುದರೊಳಗೆ ಮೆಹ್ತಾಬ್​ ಹುಸೇನ್​ ಅವರ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ನಾನು ಇವತ್ತಿನಿಂದ ಯಾವುದೇ ರಾಜಕೀಯ ಪಕ್ಷದೊಂದಿಗೂ ಗುರುತಿಸಿಕೊಳ್ಳುವುದಿಲ್ಲ. ಸೇರಿದ 24 ಗಂಟೆಯೊಳಗೆ ರಾಜಕೀಯ ಮೈದಾನ ಬಿಟ್ಟು ಹೋಗುತ್ತಿರುವುದಕ್ಕಾಗಿ ನನ್ನ ಹಿತೈಷಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ಈ ನಿರ್ಧಾರ ಕೈಗೊಳ್ಳಲು ಯಾರೊಬ್ಬರ ಒತ್ತಡ ಕಾರಣವಲ್ಲ. ತುಂಬಾ ಆಲೋಚಿಸಿದ ಬಳಿಕ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿರುವ ನಿರ್ಧಾರ ಇದು ಎಂದು ಅವರು ಸ್ಪಷ್ಟಪಡಿಸಿದ್ಧಾರೆ.

    ರಾಜಕೀಯ ಮೈದಾನಕ್ಕಿಳಿಯುವ ನನ್ನ ದಿಢೀರ್​ ನಿರ್ಧಾರದಿಂದ ನನ್ನ ಕುಟುಂಬ ವರ್ಗ ಮತ್ತು ಹಿತೈಷಿಗಳು ತುಂಬಾ ನೊಂದುಕೊಂಡರು. ಹಾಗಾಗಿ, ಮೈದಾನದಿಂದ ಹಿಂದೆಗೆಯುವ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು 30 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ, 2 ಗೋಲುಗಳನ್ನು ಸಿಡಿಸಿರುವ ಹುಸೇನ್​ ಹೇಳಿದ್ದಾರೆ.

    ಇದನ್ನೂ ಓದಿ: ಲಸಿಕೆ ಮೇಲೆ ಚೀನಾ ಕಣ್ಣು: ಕರೊನಾ ಔಷಧ ಕುರಿತ ಸಂಶೋಧನೆಗಳ ಮಾಹಿತಿಗೆ ಕನ್ನ

    ಅತ್ಯಂತ ಸಂಕಷ್ಟದ ಈ ಸಮಯದಲ್ಲಿ ಜನಸೇವೆ ಮಾಡಲು ಬಯಸಿದ್ದೆ. ಎತ್ತ ನೋಡಿದರೂ ಕಾಣಿಸುತ್ತಿರುವ ಸಹಸ್ರಾರು ಅಸಹಾಯಕ ಮುಖಗಳು ನನ್ನ ನಿದ್ದೆಯನ್ನೇ ಕಸಿದಿದ್ದವು. ಇಂಥವರ ಸೇವೆ ಮಾಡಿ, ಆ ಮುಖಗಳಲ್ಲಿ ಸಂತಸ ಮೂಡಿಸುವುದು ನನ್ನ ಉದ್ದೇಶವಾಗಿತ್ತು. ಆದರೆ ನಾನು ಯಾರಿಗಾಗಿ ಕೆಲಸ ಮಾಡಲು ರಾಜಕೀಯ ಮೈದಾನಕ್ಕೆ ಇಳಿಯಬೇಕು ಎಂದುಕೊಂಡಿದ್ದೆನೋ ಅವರಿಗೇ ನನ್ನ ನಿರ್ಧಾರ ರುಚಿಸಲಿಲ್ಲ. ನನ್ನನ್ನು ರಾಜಕಾರಣಿಯಾಗಿ ನೋಡಲು ಬಯಸುವುದಿಲ್ಲ ಎಂದು ಹೇಳಿದರು. ಕೊನೆಗೆ ನನ್ನ ಪತ್ನಿ ಮೌಮಿತಾ ಮತ್ತು ಮಕ್ಕಳಾದ ಜಿಡಾನ್​ ಹಾಗೂ ಝಾವಿಗೂ ನನ್ನ ನಿರ್ಧಾರ ಇಷ್ಟವಾಗಲಿಲ್ಲ. ಇವರೆಲ್ಲರ ಅಸಂತುಷ್ಟ ಮುಖಗಳನ್ನು ನೋಡಿದ ಮೇಲೆ ನಾನು ರಾಜಕೀಯ ಮೈದಾನಕ್ಕೆ ಇಳಿಯದಿರುವುದೇ ಒಳ್ಳೆಯದು ಎನಿಸಿತು. ಹಾಗಾಗಿ ಮೈದಾನದಿಂದ ಹೊರನಡೆಯಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

    ಟಿಎಂಸಿ ಬೆದರಿಕೆ ಆರೋಪ: ಮೆಹ್ತಾಬ್​ ಹುಸೇನ್​ ಅವರು ರಾಜಕೀಯ ಮೈದಾನದಿಂದ ಹಿಂದೆಸರಿಯಲು ತೃಣಮೂಲ ಕಾಂಗ್ರೆಸ್​ನ ಬೆದರಿಕೆಯ ತಂತ್ರ ಕಾರಣ ಎಂದು ಬಿಜೆಪಿ ಆರೋಪಿಸಿದೆ. ತೃಣಮೂಲ ಕಾಂಗ್ರೆಸ್​ ಬೆದರಿಕೆಯ ರಾಜಕೀಯ ತಂತ್ರ ಇದಕ್ಕೆ ಕಾರಣ. ಈ ಹಿಂದೆ ಕೂಡ ಇಂಥದ್ದನ್ನೆಲ್ಲ ನಾವು ಕಂಡಿದ್ದೇವೆ. ಅದು ಹೀಗೆ ಮಾಡುವುದನ್ನು ಮುಂದುವರಿಸಿದಂತೆಲ್ಲ ಅದಕ್ಕೆ ಜನಬೆಂಬಲ ನಷ್ಟವಾಗುತ್ತದೆ ಎಂದು ಪಶ್ಚಿಮ ಬಂಗಾಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಯಾಂತನ್​ ಬಸು ಹೇಳಿದ್ದಾರೆ.

    ಹಾಡುಹಗಲೇ ನಡೆಯಿತು ರಾಬರಿ: ಮಾಸ್ಕ್ ಧರಿಸಿದವರು 3 ಲಕ್ಷಕ್ಕೂ ಅಧಿಕ ಮೌಲ್ಯದ ನಗ,ನಗದು ದೋಚಿದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts