More

    ಬೆಲೆ ಜಿಗಿತ ಬದುಕು ಭಾರ | ತೈಲ, ಎಲ್ಪಿಜಿ, ಆಹಾರ, ಕಟ್ಟಡ ಸಾಮಗ್ರಿ, ಬಟ್ಟೆ ಎಲ್ಲವೂ ತುಟ್ಟಿ

    | ಸತೀಶ್ ಕಂದಗಲ್​ಪುರ ಬೆಂಗಳೂರು

    ರಾಜ್ಯದಲ್ಲಿ ಕೋವಿಡ್ ಮಹಾಮಾರಿ ಅಬ್ಬರ ಅಂತೂ ತಗ್ಗುತ್ತಿದೆ ಎಂದು ನಿಟ್ಟುಸಿರುಬಿಡುವಷ್ಟರಲ್ಲೇ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಜನರಲ್ಲಿ ಏದುಸಿರು ಸೃಷ್ಟಿಸಿದೆ. ಕೋವಿಡ್ 2ನೇ ಅಲೆ ನಂತರ ಪೆಟ್ರೋಲ್, ಎಲ್ಪಿಜಿ, ಅಡುಗೆ ಎಣ್ಣೆ, ಸಿಮೆಂಟ್, ಉಕ್ಕು, ಕಬ್ಬಿಣ, ಪಿವಿಸಿ ಪೈಪ್, ಬಟ್ಟೆ… ಹೀಗೆ ಹಲವು ವಸ್ತುಗಳ ದರ ಶೇ.30ರಿಂದ ಶೇ.50ರವರೆಗೆ ಹೆಚ್ಚಳವಾಗಿರುವುದು ಜನರ ಬದುಕನ್ನು ಹೈರಾಣಾಗಿಸಿದೆ. ಕೋವಿಡ್ ಕಾಲಿಟ್ಟ ಬಳಿಕ ಕಬ್ಬಿಣ, ಪೆಟ್ರೋಲಿಯಂ ಮತ್ತು ಇತರ ಖನಿಜ ಸಂಪನ್ಮೂಲಗಳ ಸರಬರಾಜು ಸ್ಥಗಿತಗೊಂಡಿದ್ದು ಎಲ್ಲ ಸಾಮಗ್ರಿಗಳ ಬೆಲೆ ಏರಿಕೆಗೆ ಮುಖ್ಯ ಕಾರಣವೆಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಜನಸಾಮಾನ್ಯರು ಉದ್ಯೋಗ, ವ್ಯಾಪಾರ ನಷ್ಟದಿಂದ ಈಗಾಗಲೇ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಇದರೊಟ್ಟಿಗೆ ಅಗತ್ಯವಸ್ತುಗಳ ಬೆಲೆ ಏರಿಕೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

    ಕಟ್ಟಡಕ್ಕೆ ಕೈಇಡುವಂತಿಲ್ಲ: ಕೋವಿಡ್ ಕಾಣಿಸಿಕೊಳ್ಳುವ ಮುಂಚೆ ರಾಜ್ಯದಲ್ಲಿ 4.45 ಲಕ್ಷ ರೂ. ವೆಚ್ಚದಲ್ಲಿ 1 ಸಾವಿರ ಚದರ ಅಡಿ ಗಾತ್ರದ ಕಟ್ಟಡ ನಿರ್ಮಾಣ ಕಾರ್ಯ ಮಾಡಬಹುದಿತ್ತು. ಆದರೆ, ಕಟ್ಟಡ ನಿರ್ವಣದ ಎಲ್ಲ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯಿಂದ ಪ್ರಸ್ತುತ ದರ (ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ ಮಾಹಿತಿ) 7.30 ಲಕ್ಷ ರೂ.ಗೆ ಏರಿಕೆಯಾಗಿದೆ.

    ಯಾವುದೇ ಮನೆ ನಿರ್ವಣಕ್ಕೆ ಒಟ್ಟಾರೆ ತಗಲುವ ವೆಚ್ಚದಲ್ಲಿ ಶೇ.25 ಕಬ್ಬಿಣ, ಶೇ.16 ಸಿಮೆಂಟ್, ಶೇ.12 ಮರಳು, ಶೇ.22 ಬಾಗಿಲು ಕಿಟಕಿ, ಬಾಗಿಲು, ಇತರೆ ವಿನ್ಯಾಸ, ಶೇ.16 ಟೈಲ್ಸ್ ಅಳವಡಿಕೆ, ಬಣ್ಣಕ್ಕೆ ಖರ್ಚಾಗುತ್ತದೆ. ಹೀಗಾಗಿ, 2 ವರ್ಷದ ಹಿಂದೆ ಮನೆ ಕಟ್ಟಲು ವೆಚ್ಚ ಅಂದಾಜಿಸಿ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದರೆ ವೆಚ್ಚ ಮರುಯೋಜನೆ ಮಾಡುವುದು ಅಗತ್ಯವಾಗಿದೆ.

    ಹತ್ತಿ ಬಟ್ಟೆ ದುಪ್ಪಟ್ಟು: ರಾಜ್ಯದಲ್ಲಿ ಗಾರ್ವೆಂಟ್ಸ್ ಮತ್ತು ಇತರ ಬಟ್ಟೆ ತಯಾರಿಕೆ ಸಂಬಂಧಿತ ಕಾರ್ಖಾನೆಗಳು ಸ್ಥಗಿತವಾದ ಪರಿಣಾಮ ಎಲ್ಲ ಮಾದರಿ ಬಟ್ಟೆಗಳ ಬೆಲೆ ದುಬಾರಿಯಾಗಿದೆ. ಸಾಮಾನ್ಯ ಗುಣಮಟ್ಟದ ಹತ್ತಿ ಬಟ್ಟೆಯ ಸಿದ್ಧ ಉಡುಪುಗಳ ಹೋಲ್​ಸೇಲ್ ದರ ಪ್ರತಿ ಕೆ.ಜಿ.ಗೆ 120 ರೂ. ಇದ್ದದ್ದು, 280 ರೂ.ಗೆ ಏರಿದೆ. ಹತ್ತಿ ಬಟ್ಟೆಯ ಸಿದ್ಧ ಉಡುಪುಗಳ ಹೋಲ್​ಸೇಲ್ ದರ 190 ರೂ. ಗಳಿಂದ 370 ರೂ. ಏರಿಕೆಯಾಗಿದೆ. ಸೀರೆ, ರೇಷ್ಮೆ, ನೈಲಾನ್ ಬಟ್ಟೆ ಶೇ.20 ದುಬಾರಿಯಾಗಿದೆ. ಸರಕು ಸಾಗಣೆ ವೆಚ್ಚ ಮತ್ತು ಕಾರ್ವಿುಕರ ಕೊರತೆ ಹಿನ್ನೆಲೆಯಲ್ಲಿ ದರ ಹೆಚ್ಚಿದೆಯೆನ್ನಲಾಗಿದೆ.

    ಗಗನಮುಖಿ: ಪ್ರತಿನಿತ್ಯ ಬಳಸುವ ಅಡುಗೆ ಎಣ್ಣೆ, ಎಲ್​ಪಿಜಿ ಸಿಲಿಂಡರ್, ಒಲೆ, ಕಬ್ಬಿಣ, ಸ್ಟೇನ್​ಲೆಸ್ ಸ್ಟೀಲ್, ಅಲ್ಯೂಮಿನಿಯಂ ಹಾಗೂ ಹಿತ್ತಾಳೆ ಪಾತ್ರೆಗಳು ದುಬಾರಿಯಾಗಿವೆ. ಅಡುಗೆ ಎಣ್ಣೆ 2019 ರಲ್ಲಿ ಪ್ರತಿ ಲೀಟರ್​ಗೆ 110 ರೂ. ಇದ್ದುದು ಈಗ 152 ರೂ.ಗೆ ಏರಿಕೆ ಆಗಿದೆ. ಎಲ್​ಪಿಜಿ ಸಿಲಿಂಡರ್ 650 ರೂ. ನಿಂದ 900 ರೂ.ಗೆ ಏರಿದೆ. ಹುಣಸೆಹಣ್ಣು 150 ರೂ.ನಿಂದ 220 ರೂ.ಗೆ ಹೆಚ್ಚಳವಾಗಿದೆ. ಚಿಕನ್ 100 ರೂ.ನಿಂದ 180 ರೂ.ಗೆ ಹಾಗೂ ಮಟನ್ ದರ 450 ರೂ.ನಿಂದ 700 ರೂ.ಗೆ ಹೆಚ್ಚಳವಾಗಿದೆ.

    ಎಲ್​ಪಿಜಿ, ತೈಲ ಮತ್ತೆ ಏರಿಕೆ: ಎಲ್ಪಿಜಿ ಸಿಲಿಂಡರ್ ಮತ್ತೆ ತುಟ್ಟಿಯಾಗಿದೆ. ಬುಧವಾರ 14.2 ಕೆಜಿ ಸಬ್ಸಿಡಿ ಸಿಲಿಂಡರ್ ಬೆಲೆ 15 ರೂ. ಏರಿಕೆಯಾಗಿದೆ. ಕಳೆದ ಆ.18 ಮತ್ತು ಸೆ.1ರಂದು ತಲಾ 25 ರೂ.ನಂತೆ ಹೆಚ್ಚಿಸಲಾಗಿತ್ತು. ಬೆಂಗಳೂರಿನಲ್ಲಿ ಪ್ರಸ್ತುತ ಸಿಲಿಂಡರ್​ಗೆ 902 ರೂ.ಇದೆ. ಈ ಹಿಂದೆ 887 ರೂ.ಇತ್ತು. ಕರೊನಾ ಕಾಲಿಟ್ಟಾಗಿನಿಂದ ಈವರೆಗೆ ಗೃಹ ಬಳಕೆ ಸಿಲಿಂಡರ್ ದರದಲ್ಲಿ 315 ರೂ. ಏರಿಕೆ ಆಗಿದೆ. ವಾಣಿಜ್ಯ ಬಳಕೆ ಸಿಲಿಂಡರ್ ದರ 7 ಬಾರಿ ಹೆಚ್ಚಿದೆ. ಇನ್ನು ಬುಧವಾರವೂ ತೈಲ ದರ ಹೆಚ್ಚಳವಾಗಿದ್ದು, ಪೆಟ್ರೋಲ್ 30 ಪೈಸೆ ಮತ್ತು ಡೀಸೆಲ್ 35 ಪೈಸೆ ಏರಿಕೆ ಆಗಿದೆ. ಡೀಸೆಲ್ ಬೆಲೆ ಮಧ್ಯಪ್ರದೇಶ ಕೆಲ ನಗರಗಳಲ್ಲಿ 100 ರೂ. ದಾಟಿದೆ.

    ವೆಚ್ಚ ಮರುಯೋಜಿಸಲು ಆಗ್ರಹ: ಸರ್ಕಾರದಿಂದ ರಸ್ತೆ ನಿರ್ವಣ, ಸೇತುವೆಗಳು, ಕಾಂಕ್ರೀಟ್ ರಸ್ತೆ, ಅಂಡರ್​ಪಾಸ್, ಬೃಹತ್ ಕಟ್ಟಡಗಳು, ವಾಣಿಜ್ಯ ಸಂಕೀರ್ಣ, ವಸತಿ ಯೋಜನೆಗಳು, ಶಾಲೆ- ಕಾಲೇಜು, ಆಸ್ಪತ್ರೆ ಹಾಗೂ ಇತರೆ ನಿರ್ವಣದ ವೆಚ್ಚ ದುಬಾರಿಯಾಗುತ್ತಿದೆ. ಆದರೆ, ಎಲ್ಲ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾದರೂ ರಾಜ್ಯ ಸರ್ಕಾರ ಸಣ್ಣ ಕಾಮಗಾರಿಗಳಿಗೆ 2 ವರ್ಷದಿಂದ ಶೆಡ್ಯೂಲ್ ದರಪಟ್ಟಿ (ಎಸ್ ಆರ್ ರೇಟ್) ಪರಿಷ್ಕರಣೆ ಮಾಡಿಲ್ಲ. ಜತೆಗೆ, ಕಾರ್ವಿುಕರ ಲಭ್ಯತೆಯೂ ಕಡಿಮೆಯಾಗಿದ್ದು, ಒಬ್ಬ ಕಾರ್ವಿುಕನಿಗೆ 700 ರೂ.ಗಳಿಂದ 1 ಸಾವಿರ ರೂ.ವರೆಗೆ ಕೂಲಿ ಕೊಡಬೇಕಿದೆ. ಹೀಗಾಗಿ ಟೆಂಡರ್ ದರ ಪರಿಷ್ಕರಣೆ ಮಾಡುವಂತೆ ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ.

    ಲೋಹ, ಬಟ್ಟೆ ಜಿಎಸ್​ಟಿ ಏರಿಕೆ: ಇತ್ತೀಚಿಗೆ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಕಬ್ಬಿಣ, ತಾಮ್ರ, ಅಲ್ಯೂಮಿನಿಯಂ, ಸತು ಇತ್ಯಾದಿ ಲೋಹಗಳ ಮೇಲಿನ ಜಿಎಸ್​ಟಿಯನ್ನು ಶೇ.5 ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. ಟೆಕ್ಸ್​ಟೈಲ್ಸ್ ಮತ್ತು ಗಾರ್ವೆಂಟ್ಸ್ ಉದ್ಯಮಗಳಿಗೂ ಜಿಎಸ್​ಟಿ ದರ ಶೇ.5 ರಿಂದ ಶೇ.12ಕ್ಕೆ ಹೆಚ್ಚಳ ಮಾಡಲಾಗಿದೆ. ಚೀನಾದಿಂದ ಆಮದಾಗುತ್ತಿದ್ದ ಪ್ಲಾಸ್ಟಿಕ್, ಕೆಮಿಕಲ್, ನೈಲಾನ್ ಸೇರಿ ಇತರ ಸಾಮಗ್ರಿಗಳನ್ನು ನಿಲ್ಲಿಸಿದ್ದರಿಂದ ಎಲ್ಲ ವಸ್ತುಗಳ ಬೆಲೆಗಳು ಏರಿಕೆಯಾಗಿವೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​ಕೆಸಿಸಿಐ) ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ತಿಳಿಸಿದ್ದಾರೆ.

    ಎಲ್ಪಿಜಿ ಏರಿಕೆಗೆ ಆಕ್ರೋಶ: ಎಲ್ಪಿಜಿ ಬೆಲೆ ಏರಿಕೆಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಖಂಡಿಸಿದ್ದಾರೆ. ನಿರಂತರ ಬೆಲೆ ಏರಿಕೆಯಿಂದ ಬಡವರ ಬದುಕಿಗೆ ಕೊಳ್ಳಿ ಇಡಲಾಗುತ್ತಿದೆ. ಬೆಲೆ ಏರಿಕೆ ಹಿಂದಿರುವ ಮಾಫಿಯಾ ಬಗ್ಗೆ ಬಿಜೆಪಿ ಮಾತನಾಡಲಿ. ಅಚ್ಛೇದಿನದ ಭ್ರಮೆಯಲ್ಲಿ ಜನರ ಬದುಕು ಬೆಂಕಿಯಲ್ಲಿ ಬೇಯುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

    ಜಗಳದ ನಡುವೆ ಶೂಟೌಟ್: ಮಗನಿಗೇ ಬಿತ್ತು ಅಪ್ಪನ ಗುಂಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts