More

    ಎಂಡೋ ಸಂತ್ರಸ್ತರಿಂದ ನಿತ್ಯ ಕಣ್ಣೀರು

    ನಿಶಾಂತ್ ಬಿಲ್ಲಂಪದವು ವಿಟ್ಲ

    ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಮಾಸಾಶನ ಸಿಗದೆ ಫಲಾನುಭವಿಗಳು ನಿತ್ಯ ಕಣ್ಣೀರು ಹಾಕುತ್ತಲೇ ದಿನ ಕಳೆಯುವಂತಾಗಿದೆ.

    ಎಂಡೋಸಲ್ಫಾನ್ ದುಷ್ಪರಿಣಾಮ ಬೆಳಕಿಗೆ ಬರುತ್ತಿದ್ದಂತೆ ಉಚ್ಚ ನ್ಯಾಯಾಲಯಕ್ಕೆ ಸರ್ಕಾರ ಸಲ್ಲಿಸಿದ ವರದಿಯಲ್ಲಿ 2014ರ ಆಗಸ್ಟ್ 1ರ ಬಳಿಕ ಬೆಳಕಿಗೆ ಬರುವ ಪ್ರಕರಣಗಳಿಗೂ ಮಾಸಾಶನ ನೀಡುವ ಬಗ್ಗೆ ಹೇಳಿಕೊಳ್ಳಲಾಗಿತ್ತು. ಬಂಟ್ವಾಳ ತಾಲೂಕಿನಲ್ಲಿ ಹಲವು ಪ್ರಕರಣಗಳು ಬಳಿಕದ ದಿನಗಳಲ್ಲಿ ಎಂಡೋ ಸಂತ್ರಸ್ತರ ಪಟ್ಟಿಗೆ ಸೇರ್ಪಡೆಯಾಗಿತ್ತು.

    ಕಡೇಶಿವಾಲಯ ಗ್ರಾಮದ ಪೆರ್ಲಾವು ನಿವಾಸಿ ಯಮುನಾ ಎಂಬುವರ ಮಕ್ಕಳಾದ ತೃಪ್ತಿ ಹಾಗೂ ದಿನೇಶ್ ಯಾನೆ ಮಿಥುನ್ ಅವರನ್ನು 2017ರಲ್ಲಿ ಗುರುತಿಸಿ ಮಾಸಾಶನ ಮಂಜೂರಿನ ಆದೇಶ ಪತ್ರ ನೀಡಲಾಗಿದೆ. ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿಕೊಂಡಂತೆ 2014ರಿಂದಲೇ ನೀಡಬೇಕಾದ ಹಣವನ್ನು ಇವರ ಖಾತೆಗೆ ಜಮಾ ಮಾಡುವಲ್ಲಿ ವಿಫಲವಾಗಿದೆ.

    ಸರಿಯಾಗಿ ಮಾಸಾಶನ ಲಭಿಸದ ಬಗ್ಗೆ ಸಂತ್ರಸ್ತರ ತಾಯಿ ಯಮುನಾ ಮಾನವ ಹಕ್ಕು ಆಯೋಗಕ್ಕೆ 2020ರ ಏಪ್ರಿಲ್‌ನಲ್ಲಿ ದೂರು ನೀಡಿದ್ದರು. ಈ ಬಗ್ಗೆ ತನಿಖೆಗೆ ಮುಂದಾದ ಆಯೋಗ ಜಿಲ್ಲಾಡಳಿತದಿಂದ ಮಾಹಿತಿ ಕೇಳಿತ್ತು. ಆ ಮಾಹಿತಿಯಲ್ಲಿ ಮಾಸಾಶನ ನೀಡುವ ಬಗ್ಗೆಯೇ ಉಲ್ಲೇಖಿಸಲ್ಪಟ್ಟಿದೆ. ನೈಜವಾಗಿ ಅವರ ಖಾತೆಗೆ ಸದ್ಯ ಯಾವುದೇ ಹಣ ಸಂದಾಯವಾಗದ ಕಾರಣ ಜಿಲ್ಲಾಡಳಿತದ ಸಮಜಾಯಿಷಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ.

    ಪ್ರತಿಕ್ರಿಯೆ ನೀಡದ ಇಲಾಖೆ: ಸಾಕಷ್ಟು ಕಾಲಾವಕಾಶ ನೀಡಿ ಜಿಲ್ಲಾಡಳಿತದಿಂದ ಸಮಸ್ಯೆ ಬಗೆಹರಿಯದ ಕಾರಣ 2019ರ ಜೂನ್‌ನಲ್ಲಿ ಬೆಂಗಳೂರು ವಿಕಲಚೇತನರ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಎಂಡೋಸಂತ್ರಸ್ತರ ಮಾಸಾಶನ ಲಭಿಸದ ಬಗ್ಗೆ ದೂರು ನೀಡಲಾಗಿತ್ತು. ಇಲಾಖೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ಇದುವರೆಗೆ ನೀಡಿಲ್ಲ.

    ಖಾತೆಗೆ ಬಂದಿದ್ದು ಅಲ್ಪಸ್ವಲ್ಪ: 2017ರಲ್ಲಿ ಮಾಸಾಶನ ಮಂಜೂರಾದರೂ 2018ರ ಫೆಬ್ರವರಿಯಲ್ಲಿ 12 ಸಾವಿರ ರೂ. ಖಾತೆಗೆ ಜಮಾ ಮಾಡುವ ಮೂಲಕ ಮಾಸಾಶನ ನೀಡಲು ಆರಂಭಿಸಿದ್ದು, ಬಳಿಕ ಬೆರಳೆಣಿಕೆಯ ತಿಂಗಳು ಮಾತ್ರ ಮಾಸಾಶನ ಲಭಿಸಿದ್ದು, ನಂತರ ಸ್ಥಗಿತವಾಗಿದೆ. 2014ರಿಂದ ನೀಡಬೇಕಾದ ಹಣವೂ ಇಲ್ಲ, ಸದ್ಯ ನೀಡುವ ಹಣವೂ ಇಲ್ಲದಂತಾಗಿದೆ.

    ಜಿಲ್ಲಾ ಆರೋಗ್ಯ ಇಲಾಖೆಗೆ ಎಂಡೋ ಸಂತ್ರಸ್ತರಿಗೆ ನೀಡುವ ಸೌಲಭ್ಯಗಳ ಸಮಗ್ರ ಮಾಹಿತಿಯನ್ನು ಸಾರ್ವಜನಿಕವಾಗಿ ವೆಬ್‌ಸೈಟ್ ಮೂಲಕ ಪ್ರಕಟಿಸಿ ಜನರಿಗೆ ತಿಳಿಸುವ ಕಾರ್ಯ ಮಾಡಬೇಕೆಂಬ ಬೇಡಿಕೆ ಹಿಂದಿನಿಂದಲೂ ಇಡಲಾಗಿತ್ತು. ಆದರೆ ಈ ಪ್ರಕ್ರಿಯೆ ಕಾರ್ಯಗತವಾಗದೆ ಸಮಸ್ಯೆಗಳ ಕುರಿತು ಪ್ರತಿ ಬಾರಿಯೂ ದೂರು ದಾಖಲಿಸುವಂತೆ ಮಾಡುತ್ತಿರುವುದು ಸಮಂಜಸವಲ್ಲ.
    ಸಂಜೀವ ಕಬಕ
    ಬಳಕೆದಾರರ ವೇದಿಕೆ ಪುತ್ತೂರು

    ಕೆ2 ತಂತ್ರಾಂಶದ ಸಮಸ್ಯೆಯಿಂದ ಪಿಂಚಣಿಗಳು ಸ್ಥಗಿತವಾಗಿವೆ. ಸ್ಥಗಿತಗೊಂಡ ತಿಂಗಳ ಪಿಂಚಣಿ ಪಾವತಿಸುವಂತೆ ಕೋರಿಕೆ ಸಲ್ಲಿಸಿ ಮಾನ್ಯ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗಿತ್ತು. ಕೆಲವು ಮಂದಿಗೆ ಪಿಂಚಣಿ ಪಾವತಿ ಮಾಡುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ.
    ಅನಿತಾಲಕ್ಷ್ಮೀ
    ಬಂಟ್ವಾಳ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts