More

    ಬಿಟ್ಟಿ ಪ್ರಚಾರಕ್ಕಾಗಿ ಚಿಲ್ರೆ ಕೆಲಸ: ತನ್ನ ಸಂಸ್ಥೆಯ ಮಾರ್ಕೆಟಿಂಗ್​ಗಾಗಿ ಫ್ಲೈಓವರ್​ ಮೇಲಿಂದ ಹಣ ಎಸೆದೆ ಎಂದು ತಪ್ಪೊಪ್ಪಿಕೊಂಡ

    ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಫ್ಲೈಓವರ್​ನಿಂದ ನೋಟುಗಳನ್ನು ಎಸೆದು ಗಮನ ಸೆಳೆದ ವ್ಯಕ್ತಿಯದ್ದು ಬಿಟ್ಟಿ ಪ್ರಚಾರಕ್ಕಾಗಿ ಚಿಲ್ರೆ ಕೆಲಸ ಎಂಬುದು ಸಾಬೀತಾಗಿದೆ. ತಾನು ಪ್ರಚಾರಕ್ಕೆಂದೇ ಹಾಗೆ ಮಾಡಿದ್ದೆ ಎಂಬುದಾಗಿ ಹಣ ಎಸೆದಿದ್ದ ಅರುಣ್ ಎಂಬಾತ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.

    ಪ್ರಚಾರದ ಗೀಳಿಗೆ ಬಿದ್ದ ನಾಗರಬಾವಿಯ ನಿವಾಸಿ ಅರುಣ್ (30) ಕೆ.ಆರ್.ಮಾರುಕಟ್ಟೆ ಮೇಲ್ಸೇತುವೆಯಿಂದ 10 ರೂ. ನೋಟುಗಳನ್ನು ಎಸೆದು ಹುಚ್ಚಾಟ ಮೆರೆದಿದ್ದಾನೆ. ಸಾಲದಕ್ಕೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದು, ಅದು ವೈರಲ್ ಆಗಿತ್ತು. ಹೀಗಾಗಿ ಈತನ ವಿರುದ್ಧ ಕೆ.ಆರ್.ಮಾರುಕಟ್ಟೆ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ವಿ.ಡಾಟ್ 9 ಇವೆಂಟ್ಸ್ ಸಂಸ್ಥೆ ನಡೆಸುತ್ತಿರುವ ಅರುಣ್ ಅದರ ಜತೆಗೆ ಆ್ಯಂಕರಿಂಗ್ ಮಾಡುತ್ತಿದ್ದ. ಮಂಗಳವಾರ ಬೆಳಗ್ಗೆ 10.30ಕ್ಕೆ ಸ್ನೇಹಿತನ ಜತೆಗೆ ಸ್ಕೂಟರ್‌ನಲ್ಲಿ ಮೈಸೂರು ರಸ್ತೆ ಮಾರ್ಗವಾಗಿ ಕೆ.ಆರ್.ಮಾರುಕಟ್ಟೆ ಮೇಲ್ಸೇತುವೆ ಬಳಿ ಬಂದಿದ್ದ. ಕೈಯಲ್ಲಿದ್ದ ಬ್ಯಾಗ್‌ನಲ್ಲಿ 10 ರೂ. ನೋಟುಗಳನ್ನು ತುಂಬಿಕೊಂಡಿದ್ದ. ಸೂಟು, ಬೂಟು ಧರಿಸಿ ಟಿಪ್-ಟಾಪ್ ಆಗಿ ಬಂದಿದ್ದ ಅರುಣ್ ಕತ್ತಿಗೆ ಗಡಿಯಾರ ಸಹ ನೇತು ಹಾಕಿಕೊಂಡಿದ್ದ. ಮೊದಲು ಬ್ಯಾಗ್‌ನಲ್ಲಿದ್ದ ನೋಟುಗಳನ್ನು ಮೇಲ್ಸೇತುವೆಯ ಎಡ ಬದಿಯಿಂದ ಕೆಳಗೆ ಎಸೆದಿದ್ದಾನೆ. ನಂತರ ಬಲ ಬದಿಗೆ ಬಂದು ಮತ್ತೆ ಬ್ಯಾಗ್‌ನಲ್ಲಿದ್ದ ಎಲ್ಲ ನೋಟುಗಳನ್ನು ಎಸೆದಿದ್ದ. ಮಾರುಕಟ್ಟೆಯಲ್ಲಿದ್ದ ವ್ಯಾಪಾರಿಗಳು, ಜನ ಸಾಮಾನ್ಯರು ನೋಟು ಬೀಳುತ್ತಿರುವುದನ್ನು ಗಮನಿಸಿ ಗುಂಪು-ಗುಂಪಾಗಿ ಸೇರಿ ರಸ್ತೆಗೆ ಬೀಳುತ್ತಿದ್ದ ನೋಟುಗಳನ್ನು ಬಾಚಿಕೊಳ್ಳಲು ಮುಗಿಬಿದ್ದರು.

    ಸಂಚಾರ ದಟ್ಟಣೆ: ಹಣ ಎತ್ತಿಕೊಳ್ಳಲು ಏಕಾಏಕಿ ಜನರು ರಸ್ತೆಗಿಳಿದ ಬೆನ್ನಲ್ಲೇ ಕೆ.ಆರ್.ಮಾರುಕಟ್ಟೆ ಸುತ್ತಮುತ್ತ, ಕೆ.ಆರ್.ಮಾರುಕಟ್ಟೆಯ ಮೇಲ್ಸೇತುವೆ ಮೇಲಿನ ರಸ್ತೆಯಲ್ಲಿ ವಾಹನಗಳು ಸುಗಮವಾಗಿ ಸಾಗಲಾಗದೇ ಕೆಲ ಕಾಲ ಹೆಚ್ಚು ಸಂಚಾರ ದಟ್ಟಣೆ ಉಂಟಾಗಿತ್ತು. ನಂತರ ಅರುಣ್ ತನ್ನ ಸ್ನೇಹಿತನೊಂದಿಗೆ ಸ್ಕೂಟರ್‌ನಲ್ಲಿ ಟೌನ್‌ಹಾಲ್ ಕಡೆಗೆ ರಭಸವಾಗಿ ಹೊರಟು ಹೋದನು. ಈ ಸಂಗತಿ ತಿಳಿದ ಕೆ.ಆರ್.ಮಾರುಕಟ್ಟೆ ಠಾಣೆಯ ಹೊಯ್ಸಳ ಸಿಬ್ಬಂದಿ ಆತನನ್ನು ಹಿಂಬಾಲಿಸಲು ಪ್ರಯತ್ನಿಸಿದ್ದು, ಆತ ಅತಿವೇಗದಲ್ಲಿ ಚಾಲನೆ ಮಾಡಿಕೊಂಡು ಹೋಗಿ ತಲೆಮರೆಸಿಕೊಂಡಿದ್ದಾನೆ. ಈ ಸಂಬಂಧ ಆತನ ವಿರುದ್ಧ ಸಿಟಿ ಮಾರ್ಕೆಟ್ ಠಾಣೆ ಸಿಬ್ಬಂದಿ ಸುನೀಲ್ ಕುಮಾರ್ ದೂರು ನೀಡಿದ್ದರು.

    ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊದಲು ನಾಗಬಾವಿಯ ಅರುಣ್ ನಿವಾಸಕ್ಕೆ ನೋಟಿಸ್ ಜಾರಿ ಮಾಡಿದ್ದರು. ನಂತರ ಯೂಟ್ಯೂಬ್ ಚಾನಲ್ ಕಚೇರಿಯಲ್ಲಿ ಅರುಣ್ ಇರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಆತನ ಕಚೇರಿಗೆ ತೆರಳಿ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

    ಪ್ರಚಾರಕ್ಕಾಗಿ ಹೀಗೆ ಮಾಡಿದೆ: ಜನರು ಹಲವಾರು ಮಾರ್ಗಗಳಲ್ಲಿ ಮಾರ್ಕೆಟಿಂಗ್ ಮಾಡಿಕೊಳ್ಳುತ್ತಾರೆ. ಅದೇ ರೀತಿ ನನ್ನ ಮಾಲೀಕತ್ವದ ಈವೆಂಟ್ ಮ್ಯಾನೇಜ್‌ಮೆಂಟ್‌ಗೆ ಪ್ರಚಾರ ಬೇಕಿತ್ತು. ಹೀಗಾಗಿ ನಾನು ಹಣ ಎಸೆದು ಮಾರ್ಕೆಟಿಂಗ್ ಮಾಡಲು ಮುಂದಾಗಿದ್ದೆ. ಇದನ್ನು ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ಹಾಕಿ ಹೆಚ್ಚು ಲೈಕ್ಸ್ ಹಾಗೂ ಪ್ರಚಾರ ಪಡೆಯಲು ಮೇಲ್ಸೇತುವೆಯಿಂದ ಹಣ ಎಸೆದಿದ್ದೆ. ಬೇರೆ ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ ಎಂದು ವಿಚಾರಣೆ ವೇಳೆ ಅರುಣ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಅರುಣ್ ಹೇಳಿಕೆ ಪಡೆದು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೋರ್ಟ್ ಅನುಮತಿ ಪಡೆದು ಎಫ್‌ಐಆರ್: ಈ ಕುರಿತು ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಪ್ರತಿಕ್ರಿಯಿಸಿ, ಅರುಣ್ ಹಣ ಎಸೆದಿದ್ದ ಹಿನ್ನೆಲೆಯಲ್ಲಿ ಜನರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಹೀಗಾಗಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದೇವೆ. ನಂತರ ಕೋರ್ಟ್ ಅನುಮತಿ ಪಡೆದು ಎಫ್‌ಐಆರ್ ದಾಖಸಿಕೊಳ್ಳಲಾಗುತ್ತಿದೆ. ಆ್ಯಂಕರಿಂಗ್ ಮತ್ತು ಮಾರ್ಕೆಟಿಂಗ್ ಮಾಡುತ್ತಿದ್ದ ಈತ ಅತೀ ಬೇಗ ಪ್ರಚಾರ ಪಡೆದು ಮಾರ್ಕೆಟಿಂಗ್ ಮಾಡಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದಾನೆ ಎಂಬುದು ತಿಳಿದು ಬಂದಿದೆ. ಆ್ಯಂಕರಿಂಗ್ ಮಾಡುವಾಗ ಬಂದ ಹಣವನ್ನು ತಂದು ಎಸೆದಿದ್ದಾನೆ. ಇದರಲ್ಲಿ 10, 100, 200 ರೂ. ಇತ್ತು. ಸಿಟಿ ಮಾರುಕಟ್ಟೆಯಲ್ಲಿ ಜನಸಂದಣಿ ಮತ್ತು ಸಂಚಾರ ಹೆಚ್ಚಾಗಿರುತ್ತದೆ ಎಂಬುದನ್ನು ತಿಳಿದು ಹಣ ಎಸೆದಿದ್ದಾನೆ. ನಂತರ ತಾನು ಹಣ ಎಸೆಯುವ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

    ಪಾನಮತ್ತ ಯುವತಿ ಮುಂಬೈನಲ್ಲಿ ಕುಳಿತು ಜೊಮ್ಯಾಟೊದಲ್ಲಿ ಬೆಂಗಳೂರಿನ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್​ ಮಾಡಿದ್ಲು!

    8 ತಿಂಗಳ ಗರ್ಭಿಣಿಗೆ 1 ವಾರವೂ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದ ಗೂಗಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts