More

    ಬೆಂಬಲಿಗರೊಂದಿಗೆ ನಾಳೆ ಈಶ್ವರಪ್ಪ ಮಹತ್ವದ ಸಭೆ

    ಶಿವಮೊಗ್ಗ: ಪುತ್ರ ಕೆ.ಇ.ಕಾಂತೇಶ್ ಹಾವೇರಿಯಿಂದ ಲೋಕ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾ.15ರ ಸಂಜೆ 5ಕ್ಕೆ ಬಾಲರಾಜ ಅರಸ್ ರಸ್ತೆಯ ಬಂಜಾರ ಕನ್ವೆನ್ಷನ್ ಹಾಲ್‌ನಲ್ಲಿ ಅಭಿಮಾನಿಗಳು ಹಾಗೂ ಬೆಂಬಲಿಗರ ಮಹತ್ವದ ಸಭೆ ಕರೆದಿದ್ದಾರೆ. ಇದು ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

    ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಈಗಾಗಲೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ನೇರ ಆರೋಪ ಮಾಡಿರುವ ಈಶ್ವರಪ್ಪ, ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಸಭೆಯಲ್ಲಿ ತೀರ್ಮಾನ ಪ್ರಕಟಿಸುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗುತ್ತಿದೆ.
    ಅಭಿಮಾನಿಗಳು ಹಾಗೂ ಬೆಂಬಲಿಗರ ಅಭಿಪ್ರಾಯ ಆಲಿಸಲು, ಕೆ.ಎಸ್.ಈಶ್ವರಪ್ಪ ಹಾಗೂ ಕಾಂತೇಶ್ ತಮ್ಮ ಅನಿಸಿಕೆ ವ್ಯಕ್ತಪಡಿಸಲು ಸಭೆ ಸೀಮಿತವಾಗಿದೆ. ಇನ್ನೂ ಚುನಾವಣೆ ಘೋಷಣೆ ಆಗದಿರುವುದರಿಂದ ಬಂಡಾಯ ಸ್ಪರ್ಧೆ ಬಗ್ಗೆ ಈಶ್ವರಪ್ಪ ಖಚಿತ ತೀರ್ಮಾನ ಪ್ರಕಟಿಸುವ ಸಾಧ್ಯತೆ ವಿರಳ. ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂದು ಕಳೆದೊಂದು ವಾರದಿಂದ ಅವರ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ.
    ಇದನ್ನು ಈಶ್ವರಪ್ಪ ಸಹ ಬಹಿರಂಗವಾಗಿ ಹೇಳಿದ್ದಾರೆ. ಟಿಕೆಟ್ ಸಿಕ್ಕದ ಬಗ್ಗೆ ಅಸಮಾಧಾನ ಇರುವ ಸಂದರ್ಭದಲ್ಲೂ ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಈಶ್ವರಪ್ಪ ಹೇಳಿರುವುದರಿಂದ ಅವರು ಪಕ್ಷದ ಅಭ್ಯರ್ಥಿ ವಿರುದ್ಧ ಹೋಗುವ ಸಾಧ್ಯತೆಗಳಿಲ್ಲ. ಆದರೆ ಬೆಂಬಲಿಗರ ಸಭೆ ಬಿಜೆಪಿಗೆ ಹಾಗೂ ಆ ಪಕ್ಷದ ನಾಯಕರಿಗೆ ನೇರವಾಗಿ ಎಚ್ಚರಿಕೆ ರವಾನಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
    ಸಭೆಯಲ್ಲಿ ಭಾಗವಹಿಸುವ ಬಿಜೆಪಿ ಮುಖಂಡರು ಯಾರು ಎಂಬುದು ಸಹ ಕುತೂಹಲ ಮೂಡಿಸಿದೆ. ಈಗಾಗಲೇ ಶಿವಮೊಗ್ಗ, ಶಿಕಾರಿಪುರ, ಹಾವೇರಿಗಳಲ್ಲಿ ಬೆಂಬಲಿಗರೊಂದಿಗೆ ಈಶ್ವರಪ್ಪ ಹಾಗೂ ಕಾಂತೇಶ್ ಸಭೆ ನಡೆಸಿದ್ದಾರೆ. ಶಿವಮೊಗ್ಗ ನಗರಪಾಲಿಕೆಯ ಕೆಲ ಮಾಜಿ ಸದಸ್ಯರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಆದರೆ ತಾಲೂಕು, ಜಿಲ್ಲಾ ಹಂತದ ಪದಾಧಿಕಾರಿಗಳು ಸಭೆಯಿಂದ ದೂರವುಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts