More

    ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಿ

    ಮುರಗೋಡ: ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಮಹಾಂತ ದುರದುಂಡೇಶ್ವರ ಮಠದ ಪೀಠಾಧಿಕಾರಿ ಶ್ರೀ ನೀಲಕಂಠ ಸ್ವಾಮೀಜಿಗಳ 73ನೇ ಹುಟ್ಟುಹಬ್ಬ ಹಾಗೂ ಗುರುವಂದನೆ ಕಾರ್ಯಕ್ರಮ ಭಾನುವಾರ ಸರಳವಾಗಿ ಜರುಗಿತು.

    ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಸಮಾಜದ ಒಳಿತಿಗಾಗಿ ಶ್ರೀಮಠದಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಮಾಜದ ಅಭಿವೃದ್ಧಿಗಾಗಿ, ಭಕ್ತರ ಅಭ್ಯುದಯಕ್ಕಾಗಿ ಶ್ರೀಗಳು ಶ್ರಮಿಸುತ್ತಿರುವುದು ಸಂತಸದ ವಿಚಾರ ಎಂದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ದೇಶಾದ್ಯಂತ ಕರೊನಾ ಅಟ್ಟಹಾಸ ಮೆರೆಯುತ್ತಿದ್ದು ಲಾಕ್‌ಡೌನ್ ಘೋಷಿಸಿರುವುದರಿಂದ ಶ್ರೀಗಳ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ. ಭಕ್ತರ ಪಾಲಿನ ಬೆಳಕಾಗಿ, ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ಸ್ವಾಮೀಜಿಗಳು ಸಲ್ಲಿಸಿರುವ ಸೇವೆ ಅನುಪಮವಾದದ್ದು ಎಂದು ಶ್ಲಾಘಿಸಿದರು.

    ಪೀಠಾಧಿಕಾರಿ ನೀಲಕಂಠ ಸ್ವಾಮೀಜಿ ಮಾತನಾಡಿ, ಮಾನವ ಜನ್ಮ ಶ್ರೇಷ್ಠವಾದದ್ದು. ಸಮಾಜದ ಅಭಿವೃದ್ಧಿಗೆ ಈ ಜನ್ಮ ಉಪಯೋಗವಾಗಬೇಕು. ನಾನು, ನನ್ನದು ಎಂಬ ಸ್ವಾರ್ಥವನ್ನು ಕಿತ್ತೊಗೆದಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ನಮ್ಮಿಂದ ಸೇವೆ ನಡೆಯಬೇಕು ಎಂದರು.

    ವಿಧಾನಸಭಾ ಉಪಸಭಾಪತಿ ಆನಂದ ಮಾಮನಿ, ಮಹಾಂತೇಶ ಕೌಜಲಗಿ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಬಂಡಿವಡ್ಡರ, ತಾಲೂಕು ಪಂಚಾಯಿತಿ ಸದಸ್ಯ ಸುರೇಶ ಮ್ಯಾಕಲ್, ಮುಖಂಡರಾದ ಶಂಕರಯ್ಯ ಮಲ್ಲಯ್ಯನವರಮಠ, ಮಠದ ಧರ್ಮದರ್ಶಿಗಳು ಇತರರು ಇದ್ದರು. ಮಹಾಂತೇಶ ಬಾಳಿಕಾಯಿ ಸ್ವಾಗತಿಸಿ, ನಿರೂಪಿಸಿದರು. ಎಫ್.ಎಸ್.ಸಿದ್ದನಗೌಡರ ವಂದಿಸಿದರು.

    ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆಶಾ, ಅಂಗನವಾಡಿ ಹಾಗೂ ಪೊಲೀಸ್, ವೈದ್ಯಕೀಯ ಸಿಬ್ಬಂದಿಗೆ ನೀಲಕಂಠ ಶ್ರೀಗಳು ಪ್ರಸಾದ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts