More

    ಕೃಷಿ ಕಾಯ್ದೆಯಿಂದ ಹಣವಂತರಿಗೆ ಅನುಕೂಲ

    ಕಳಸ: ವ್ಯಾಪಾರ ಮಾಡುವವರಿಗೆ ಕೃಷಿ ಸಂಸ್ಕೃತಿ ಗೊತ್ತಿಲ್ಲ. ದುರಾದೃಷ್ಟವಶಾತ್ ಇಂಥವರೇ ಸರ್ಕಾರ ನಡೆಸುತ್ತಿದ್ದಾರೆ ಎಂದು ಪರಿಸರವಾದಿ ಕಲ್ಕುಳಿ ವಿಠ್ಠಲ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

    ಕುದುರೆಮುಖದಲ್ಲಿ ಭಾನುವಾರ ಆಯೋಜಿಸಿದ್ದ ರೈತ ಸಂಘದ ಕುದುರೆಮುಖ ಘಟಕ ಉದ್ಘಾಟನೆ ಮತ್ತು ರೈತ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

    ರೈತರ ಮೇಲೆ ನಡೆಯುತ್ತಿರುವ ನಿರಂತರ ಶೋಷಣೆಯಿಂದ ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ಮಾರಕವಾಗಿರುವ, ರೈತ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದಾರೆ. ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ಕಾಯ್ದೆ ತರಲಾಗಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯ ಎಂದು ಹೇಳಿದರು.

    ರೈತ ಸಂಘದ ಜಿಲ್ಲಾಧ್ಯಕ್ಷ ದುಗ್ಗಪ್ಪ ಗೌಡ ಮಾತನಾಡಿ, ಬಡವರು, ರೈತ ಕಾರ್ವಿುಕರನ್ನು ಕಡೆಗಣಿಸಲಾಗುತ್ತಿದೆ. ಬಂಡವಾಳಶಾಹಿಗಳು, ವಿದೇಶಿ ಕಂಪನಿಗಳಿಗೆ ರೈತರನ್ನು ಅಡಮಾನ ಇಡಲಾಗುತ್ತಿದೆ. ರೈತರ ಭೂಮಿಯನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ಮಾರಾಟ ಮಾಡಲು ಹೊರಟಿದ್ದಾರೆ. ಇವತ್ತು ರೈತರಿಗೆ ಸ್ವಾಭಿಮಾನ ಇದೆ ಎಂದಾದರೆ ಅದು ರೈತ ಸಂಘಟನೆಯಿಂದ ಸಾಧ್ಯವಾಗಿದೆ ಎಂದರು.

    ಕುದುರೆಮುಖ ರೈತ ಸಂಘ ಘಟಕದ ಅಧ್ಯಕ್ಷ ಸುರೇಶ್ ಭಟ್, ಕಡೂರು ತಾಲೂಕು ಘಟಕದ ಅಧ್ಯಕ್ಷ ನಿರಂಜನಮೂರ್ತಿ, ವಕೀಲರಾದ ಹೂವಪ್ಪ, ಸಂಸೆ ಗ್ರಾಪಂ ಅಧ್ಯಕ್ಷ ಶ್ರೇಯಂಸಕುಮಾರ್, ಜನಶಕ್ತಿ ಸಂಘಟನೆ ಹೋರಾಟಗಾರ ವಾಸು, ಜಿಲ್ಲಾ ಆದಿವಾಸಿ ಗಿರಿಜನ ಹಿತರಕ್ಷಣಾ ಸಮಿತಿ ಸಂಚಾಲಕ ಮರಿಯಪ್ಪ, ಹೋರಾಟಗಾರ ಹಾಗಲಗಂಡಿ ವೆಂಕಟೇಶ, ಕಳಸ ರೈತ ಸಂಘದ ಕಾರ್ಯಕರ್ತ ಸವಿಂಜಯ, ವಕೀಲ ಅನಂತೇಶ್ ಇತರರಿದ್ದರು.

    ಸಮಾವೇಶದಲ್ಲಿ ಕೇಳಿಬಂದ ಬೇಡಿಕೆಗಳು: ಕಾಫಿ, ಕಾಳುಮೆಣಸು, ಏಲಕ್ಕಿ ಸೇರಿ ರೈತರ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಬೇಕು. ಕುದುರೆಮುಖ ಪ್ರದೇಶವನ್ನು ಶಿಕ್ಷಣ, ವೈದ್ಯಕೀಯ ಪ್ರವಾಸೋದ್ಯಮ ಸಂಸ್ಥೆಗಳನ್ನಾಗಿ ಅಥವಾ ಇನ್ನಿತರ ಜನೋಪಯೋಗಿ ಕಾರ್ಯಗಳಿಗೆ ಬಳಸಿಕೊಳ್ಳಲು ಕ್ರಮ ವಹಿಸಿಕೊಳ್ಳಬೇಕು. ನೆಲ್ಲಿಬೀಡಿನಲ್ಲಿ ಭದ್ರಾ ನದಿಗೆ ಸೇತುವೆ ನಿರ್ವಿುಸಬೇಕು. ಪರಿಸರ ರಕ್ಷಣೆ ಹೆಸರಲ್ಲಿ ಗ್ರಾಮೀಣ ಜನರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಗ್ರಾಮೀಣ ಸರ್ಕಾರಿ ಶಾಲೆಗಳ ಶಿಕ್ಷಕರ ಕೊರತೆ ನೀಗಿಸಿ ಅಭಿವೃದ್ಧಿಪಡಿಸಬೇಕು. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ರೈತರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಉದ್ಯಾನದ ಎಲ್ಲ ರೈತರ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ತಡೆಯೊಡ್ಡುವುದನ್ನು ನಿಲ್ಲಿಸಬೇಕು. ಅರಣ್ಯ ಹಕ್ಕುಪತ್ರ ನೀಡಿರುವ ಎಲ್ಲ ಆದಿವಾಸಿಗಳಿಗೆ ಪಟ್ಟಾ ಮತ್ತು ಪಹಣಿ ಕೊಡಬೇಕು. ಅರಣ್ಯ ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ ಕಾಯ್ದೆಯಲ್ಲಿ ತಿಳಿಸಿರುವಂತೆ ಪಾರಂಪರಿಕ ಅರಣ್ಯ ವಾಸಿಗಳಿಗೆ ವಿಧಿಸಿರುವ 75 ವರ್ಷದ ಅನುಭವವನ್ನು 25 ವರ್ಷಕ್ಕೆ ಮಾರ್ಪಡಿಸಬೇಕು. ಕಸ್ತೂರಿ ರಂಗನ್ ವರದಿ ಮತ್ತು ಜನವಸತಿ ಪ್ರದೇಶಗಳನ್ನು ಸೂಕ್ಷ್ಮ ವಲಯ ಎಂದು ಘೊಷಿಸುವುದನ್ನು ರದ್ದುಪಡಿಸಬೇಕು. ರೈತರು ಕೃಷಿ ಮಾಡಿರುವ ಎಲ್ಲ ಜಮೀನುಗಳನ್ನು ಕಂದಾಯ ಭೂಮಿಗಳನ್ನಾಗಿ ಪರಿವರ್ತಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts