More

    ಇಂಜಿನಿಯರ್ ಕೊರತೆ, ಉತ್ತರ ತತ್ತರ!

    ಬೆಳಗಾವಿ: ಕಿತ್ತೂರು ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಹೆಕ್ಟೇರ್ ಕೃಷಿಭೂಮಿಗೆ ನೀರುಣಿಸಬೇಕಾದ ಕರ್ನಾಟಕ ನೀರಾವರಿ ನಿಗಮ ಉತ್ತರ ವಲಯ ಇದೀಗ ಸಿಬ್ಬಂದಿ ಕೊರತೆಯಿಂದ ನಲುಗಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಚಿಕ್ಕೋಡಿ, ಬೆಳಗಾವಿ, ಗೋಕಾಕ, ಬೈಲಹೊಂಗಲ, ರಾಮದುರ್ಗ, ಮೂಡಲಗಿ, ಕಾಗವಾಡ, ಅಥಣಿ, ಸವದತ್ತಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮುಧೋಳ, ಬೀಳಗಿ, ರಬಕವಿ-ಬನಹಟ್ಟಿ, ವಿಜಯಪುರ ಜಿಲ್ಲೆಯ ತಿಕೋಟಾ, ಬಬಲೇಶ್ವರ ಸೇರಿ 18 ತಾಲೂಕುಗಳನ್ನು ಒಳಗೊಂಡಿರುವ ಕರ್ನಾಟಕ ನೀರಾವರಿ ನಿಗಮ ಉತ್ತರ ವಲಯದಲ್ಲಿ ತಾಂತ್ರಿಕ, ಸಹಾಯಕ ಇಂಜಿನಿಯರ್, ಭೂವಿಜ್ಞಾನಿ, ಆಡಳಿತಾಧಿಕಾರಿ, ಗ್ರೂಪ್ ಡಿ, ಸೇರಿ ಒಟ್ಟು 651 ಹುದ್ದೆಗಳು ಖಾಲಿ ಉಳಿದಿವೆ.

    ಈಗಾಗಲೇ ಸರ್ಕಾರ ನೀರಾವರಿ ಉತ್ತರ ವಲಯಕ್ಕೆ 1,322 ಹುದ್ದೆಗಳನ್ನು ಮಂಜೂರು ಮಾಡಿತ್ತು. ಅದರಲ್ಲಿ 671 ಹುದ್ದೆ ಭರ್ತಿ ಮಾಡಿದ್ದರಿಂದ 651 ಹುದ್ದೆ ಖಾಲಿ ಇವೆ. ಆ ಪೈಕಿ ಗ್ರೂಪ್ ಸಿ-272, ಗ್ರೂಪ್ ಡಿ-112, ಸಹಾಯಕ ಇಂಜಿನಿಯರ್-139, ಸಹಾಯಕ ಭೂವಿಜ್ಞಾನಿ-84 ಹುದ್ದೆ ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಉಳಿದಿದ್ದರಿಂದ ನೀರಾವರಿ ಯೋಜನೆಗಳ ಮೇಲೆ ಪರಿಣಾಮ ಉಂಟಾಗಿದ್ದು, ನಿಗದಿತ ಸಮಯದಲ್ಲಿ ಭೂ ಸ್ವಾಧೀನ, ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಕೆಲವೆಡೆ ಸಿಬ್ಬಂದಿ ಕೊರತೆಯಿಂದಾಗಿ ಕಚೇರಿಗಳಿಗೆ ಬೀಗ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಈ ವಲಯದ ಅಡಿಯಲ್ಲಿ ಏತ ನೀರಾವರಿ ಯೋಜನೆಗಳು, ಮೂಲಸೌಕರ್ಯಗಳು, ಹೊಸ ನೀರಾವರಿ ಯೋಜನೆಗಳು , ಕೆರೆ ತುಂಬುವ ಯೋಜನೆಗಳು, ಅಚ್ಚುಕಟ್ಟು ಸ್ಥಿರೀಕರಣ ಯೋಜನೆಗಳು ಹಾಗೂ ಇತರ ಯೋಜನೆಗಳು ಸೇರಿ 40 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗಳಿಗೆ ಮೀಸಲಿಟ್ಟಿರುವ 11,721 ಕೋಟಿ ರೂ. ಪೈಕಿ 4,463 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಸೋಲಾರ್ ಪವರ್‌ಗಾಗಿ 6 ಗ್ರಾಮಗಳನ್ನು ಗುರುತಿಸಲಾಗಿದೆ. ಅದಕ್ಕಾಗಿ 298 ಎಕರೆ ಜಮೀನು ಲಭ್ಯವಿದೆ. ಆದರೆ, ಸರ್ವೇ ಮಾಡಲು, ಡಿಪಿಆರ್ ಸಿದ್ಧಪಡಿಸಲು ಇಂಜಿನಿಯರ್‌ಗಳೇ ಇಲ್ಲ.

    ಎರಡು ದಶಕಗಳಿಂದ ನಿರ್ಮಾಣಗೊಂಡು ಹಾಳಾಗಿದ್ದ ಘಟಪ್ರಭಾ ಬಲದಂಡೆ ನೀರಾವರಿ ಕಾಲುವೆಗಳ ಮರು ನಿರ್ಮಾಣಕ್ಕೆ 2 ಸಾವಿರ ಕೋಟಿ ರೂ. ಅಂದಾಜು ವೆಚ್ಚದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡಿದೆ. ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಭೂಸ್ವಾಧೀನ, ಕಾಲುವೆಗಳ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿವೆ. ಇದ್ದ ಬೆರಳಣಿಕೆಯಷ್ಟು ಕೆಳ ಹಂತದ ಸಿಬ್ಬಂದಿಯೇ ಎಲ್ಲವನ್ನೂ ನಿಭಾಯಿಸಬೇಕಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಇಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.

    ಕೂಡಲೇ ನೇಮಕಾತಿಗೆ ಆಗ್ರಹ

    ರಾಜ್ಯದ ವಿವಿಧ ಕಾಲೇಜುಗಳಿಂದ ಪ್ರತಿ ವರ್ಷ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಮುಗಿಸಿ ಹೊರಬರುತ್ತಿದ್ದಾರೆ. ಆದರೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡದಿರುವ ಹಿನ್ನೆಲೆಯಲ್ಲಿ ಅವರು ಖಾಲಿ ಕುಳಿತುಕೊಂಡಿದ್ದಾರೆ. ಕೆಲವರು ಬೇರೆ ವೃತ್ತಿಯಲ್ಲಿ ತೊಡಗಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಕೂಡಲೇ ಖಾಲಿ ಹುದ್ದೆ ಭರ್ತಿ ಮಾಡುವಂತೆ ನಿರುದ್ಯೋಗ ಪದವೀಧರರು ಆಗ್ರಹಿಸಿದ್ದಾರೆ.

    ನೀರಾವರಿ ಇಲಾಖೆಗಳಲ್ಲಿ ಖಾಲಿ ಉಳಿದಿರುವ ವಿವಿಧ ವೃಂದದ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲಾಗುತ್ತಿದೆ. ಉತ್ತರ ವಲಯದ ನೀರಾವರಿ ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
    | ಡಿ.ಕೆ.ಶಿವಕುಮಾರ ಜಲಸಂಪನ್ಮೂಲ ಸಚಿವ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts