More

    ವಿಷಜಂತುಗಳ ತಾಣವಾದ ಖಾಲಿ ನಿವೇಶನ

    ಕಿರಣ ಹೂಗಾರ ಅಕ್ಕಿಆಲೂರ

    ಪಟ್ಟಣದಲ್ಲಿ ಖಾಲಿ ನಿವೇಶನಗಳ ಸಂಖ್ಯೆ ಅಧಿಕವಾಗಿದ್ದು, ಸಾರ್ವಜನಿಕರು, ಬಡಾವಣೆ ನಿವಾಸಿಗಳು ಹಲವು ಸಮಸ್ಯೆ ಎದುರಿಸುವಂತಾಗಿದೆ. ತ್ಯಾಜ್ಯ ಪದಾರ್ಥ, ಕಸಕಡ್ಡಿಗಳನ್ನು ಖಾಲಿ ನಿವೇಶನಗಳಲ್ಲಿ ಬೇಕಾಬಿಟ್ಟಿಯಾಗಿ ಬಿಸಾಡುವುದರಿಂದ ಇಡೀ ಓಣಿ ಕಸದ ತೊಟ್ಟಿಯಂತಾಗಿದೆ.

    ಪಟ್ಟಣದ ಕುಮಾರನಗರ, ಚನ್ನವೀರೇಶ್ವರ ನಗರ, ನರಸಿಂಗರಾವ್ ನಗರ, ಮಾರುತಿ ನಗರ, ಶಿರಸಿ ರಸ್ತೆ ಹಾಗೂ ಬಾಳೂರ ರಸ್ತೆಗಳಲ್ಲಿ ಹಲವು ವರ್ಷಗಳ ಹಿಂದೆ ನಿವೇಶನಗಳನ್ನು ಖರೀದಿಸಿ ಹಾಗೆಯೇ ಬಿಡಲಾಗಿದೆ. ಕೆಲ ನಿವೇಶನಗಳ ಮೇಲೆ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿ ವಿವಾದದಲ್ಲಿ ಸಿಲುಕಿವೆ. ಮತ್ತೆ ಕೆಲವರು ನಿವೇಶನಗಳನ್ನು ಖರೀದಿಸಿ ಪರಸ್ಥಳದಲ್ಲಿ ವಾಸವಾಗಿದ್ದಾರೆ. ಇನ್ನು ಕೆಲವರು ಪಟ್ಟಣದಲ್ಲಿಯೇ ವಾಸವಿದ್ದು, ಹೆಚ್ಚುವರಿ ನಿವೇಶನ ಖರೀದಿಸಿ ಹಾಗೆ ಬಿಟ್ಟಿದ್ದಾರೆ. ವರ್ಷದಿಂದ ವರ್ಷಕ್ಕೆ ನಿವೇಶನಗಳ ಮೌಲ್ಯ ಹೆಚ್ಚಾಗುತ್ತಿರುವುದರಿಂದ ಲಾಭದ ದೃಷ್ಟಿಯಿಂದ ಉಳ್ಳವರು ವಿವಿಧೆಡೆ ಜಾಗ ಖರೀದಿಸಿಟ್ಟಿದ್ದಾರೆ. ಇಂಥ ನಿವೇಶನಗಳ ಸುತ್ತಲೂ ವಸತಿ ಬಡಾವಣೆಗಳಿರುವುದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

    ಕುಮಾರನಗರ, ನರಸಿಂಗರಾವ್ ದೇಸಾಯಿ ನಗರ ಮತ್ತು ಬಾಳೂರ ರಸ್ತೆಯ ಬಡಾವಣೆಗಳ ಮಧ್ಯೆ ಇರುವ ಅನೇಕ ನಿವೇಶನಗಳಲ್ಲಿ ಮುಳ್ಳು ಗಿಡಗಂಟಿಗಳು ಎದೆಯುದ್ದಕ್ಕೆ ಬೆಳೆದು ನಿಂತಿವೆ. ಇದರಿಂದ ಹಗಲಿನಲ್ಲಿಯೇ ಇಲ್ಲಿ ಸಂಚರಿಸಲು ಭಯ ಪಡುವಂತಾಗಿದೆ. ಕಾಂಪೌಂಡ್ ನಿರ್ವಿುಸದೆ ಇರುವುದರಿಂದ ಕೆಲ ನಿವೇಶನಗಳನ್ನು ಹಂದಿಗಳು ವಾಸಸ್ಥಾನವನ್ನಾಗಿ ಮಾಡಿಕೊಂಡಿವೆ. ಕೆಲವರು ಬಡಾವಣೆ ನಿವಾಸಿಗಳು ತ್ಯಾಜ್ಯ ಪದಾರ್ಥ, ಕಸವನ್ನು ನಿವೇಶನದಲ್ಲಿ ವಿಲೇವಾರಿ ಮಾಡುತ್ತಿರುವುದರಿಂದ ಸುತ್ತಲಿನ ಪ್ರದೇಶದಲ್ಲಿ ಗಬ್ಬು ವಾಸನೆ ಹರಡುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಿಷಜಂತುಗಳು ಇಂಥ ನಿವೇಶನದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿಕೊಂಡಿದ್ದು, ಅಕ್ಕಪಕ್ಕದ ಮನೆಯೊಳಗೂ ಪ್ರವೇಶಿಸುತ್ತಿವೆ. ಹಂದಿ, ನಾಯಿಗಳು ದಾರಿ ಹೋಕರು, ಶಾಲಾ, ಕಾಲೇಜ್ ವಿದ್ಯಾರ್ಥಿಗಳ ಮೇಲೆರಗಿದ ಉದಾಹರಣೆಯೂ ಇದೆ. ಸಾರ್ವಜನಿಕರು ಇಷ್ಟೆಲ್ಲ ಸಮಸ್ಯೆಎದುರಿಸುತ್ತಿದ್ದರೂ ನಿವೇಶನ ಮಾಲೀಕರ ವಿರುದ್ಧ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

    ಖಾಲಿ ನಿವೇಶನಗಳ ಸಮಸ್ಯೆ ಕುರಿತು ಗ್ರಾಪಂಗೆ ಸಾರ್ವಜನಿಕರು ನೀಡಿದ ದೂರು ನೀಡಿದ್ದಾರೆ. ಇದೀಗ ಖಾಲಿ ನಿವೇಶನಗಳ ಪಟ್ಟಿ ಮಾಡುತ್ತಿದ್ದೇವೆ. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವ ನಿವೇಶನ ಹೊರತುಪಡಿಸಿ, ಎಲ್ಲ ಮಾಲೀಕರಿಗೂ ನೋಟಿಸ್ ಜಾರಿ ಮಾಡಲಾಗುವುದು.

    | ಪ್ರವೀಣಕುಮಾರ ಬಿಜ್ಜೂರ, ಅಕ್ಕಿಆಲೂರ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts